ವೋಟ್ ಬ್ಯಾಂಕ್‌ಗಾಗಿ ಟಿಪ್ಪು ಜಯಂತಿಗೆ ಬಿಜೆಪಿ ವಿರೋಧ: ಸಚಿವ ಝಮೀರ್‌ ಅಹ್ಮದ್‌

Update: 2018-11-05 12:53 GMT

ಬೆಂಗಳೂರು, ನ.5: ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ವಿರೋಧ ಪಕ್ಷ ಬಿಜೆಪಿ ‘ಮೈಸೂರು ಹುಲಿ’ ಹಝ್ರತ್ ಟಿಪ್ಪು ಸುಲ್ತಾನ್ ಜಯಂತಿಯನ್ನು ವಿವಾದ ಮಾಡುತ್ತಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಬಿ.ಝೆಡ್.ಝಮೀರ್‌ ಅಹ್ಮದ್‌ ಖಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಮವಾರ ನಗರದಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರಿಗೆ ಚುನಾವಣಾ ಪ್ರಚಾರಕ್ಕೆ ಯಾವುದೇ ವಿಚಾರಗಳು ಇಲ್ಲ. ಆದುದರಿಂದ, ಟಿಪ್ಪು ಸುಲ್ತಾನ್ ಜಯಂತಿಯನ್ನು ಬಳಸಿಕೊಳ್ಳುತ್ತಿದ್ದಾರೆ ಎಂದರು.

ಜಗದೀಶ್‌ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ಟಿಪ್ಪು ಸುಲ್ತಾನ್ ಜಯಂತಿಯನ್ನು ಆಚರಣೆ ಮಾಡಿದ್ದರು. ಯಡಿಯೂರಪ್ಪ ಕೆಜೆಪಿ ಪಕ್ಷ ಕಟ್ಟಿದಾಗ ಶ್ರೀರಂಗಪಟ್ಟಣ ದಲ್ಲಿರುವ ಟಿಪ್ಪು ಸುಲ್ತಾನ್ ಸಮಾಧಿಗೆ ಗೌರವ ಸಲ್ಲಿಸಿ, ಸಮಾವೇಶವನ್ನು ಮಾಡಿದ್ದರು ಎಂದು ಝಮೀರ್‌ ಅಹ್ಮದ್‌ ಖಾನ್ ಹೇಳಿದರು.

ಬಿಜೆಪಿ ನಾಯಕರಾದ ಆರ್.ಅಶೋಕ್, ಶೋಭಾ ಕರಂದ್ಲಾಜೆ ಎಲ್ಲರೂ ಟಿಪ್ಪು ಜಯಂತಿಗೆ ಬೆಂಬಲ ನೀಡಿದ್ದರು. ಆದರೆ, ಈಗ ಮಾತ್ರ ಯಾಕೆ ಟಿಪ್ಪು ಜಯಂತಿಯನ್ನು ವಿರೋಧಿಸುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಅವರು ಹೇಳಿದರು.

ಮತಕ್ಕಾಗಿ ಮಂದಿರ

ಅಯೋಧ್ಯೆಯಲ್ಲಿ ರಾಮ ಮಂದಿರ, ಬಾಬರಿ ಮಸೀದಿ ಎರಡೂ ನಿರ್ಮಾಣವಾಗಲಿ. ಆದರೆ, ಚುನಾವಣೆ ಬಂದಾಗ ಮಾತ್ರ ಬಿಜೆಪಿಯವರಿಗೆ ರಾಮ ಮಂದಿರ ನಿರ್ಮಾಣದ ನೆನಪು ಬರುತ್ತದೆ. 2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ನಾಲ್ಕು ವರ್ಷ ಸುಮ್ಮನಿದ್ದು, ಈಗ ಚುನಾವಣೆ ಸಮೀಪಿಸುತ್ತಿರುವುದರಿಂದ ಮತ್ತೆ ರಾಮ ಮಂದಿರದ ಜಪ ಮಾಡುತ್ತಿದೆ.

-ಝಮೀರ್‌ ಅಹ್ಮದ್‌ ಖಾನ್, ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News