ದೀಪಾವಳಿಯ ಮೌಲ್ಯಗಳು ಉಳಿಯಲಿ

Update: 2018-11-05 19:02 GMT

ದೀಪಾವಳಿ ಹತ್ತಿರವಾಗುತ್ತಿದ್ದ ಹಾಗೆಯೇ ಸುಪ್ರೀಂಕೋರ್ಟಿನಲ್ಲಿ ಪಟಾಕಿಗಳು ಸದ್ದು ಮಾಡಿವೆ. ಸುಪ್ರೀಂಕೋರ್ಟ್ ಪಟಾಕಿಯ ವಿರುದ್ಧ ಈ ಬಾರಿ ಬಿಗಿ ನಿಲುವನ್ನು ತಳೆದಿದೆ. ದೀಪಾವಳಿಯ ಸಂದರ್ಭದಲ್ಲಿ ಪೂರ್ಣ ಪ್ರಮಾಣದ ಪಟಾಕಿ ಬಳಕೆಗೆ ನಿಷೇಧ ಹೇರಿದೆ. ದಿಲ್ಲಿಯಂತಹ ನಗರಗಳಲ್ಲಿ ಪಟಾಕಿಗಳನ್ನು ಸಂಪೂರ್ಣ ನಿಷೇಧಿಸಿದೆ. ಈ ಬಾರಿ ದಿಲ್ಲಿ ನಗರದ ವಾಯುಮಾಲಿನ್ಯ ಮಾರಕ ಹಂತವನ್ನು ತಲುಪಿರುವುದು ಇದಕ್ಕೆ ಮುಖ್ಯ ಕಾರಣ. ದೇಶಾದ್ಯಂತ ವಾಯುಮಾಲಿನ್ಯ ಮತ್ತು ಶಬ್ದ ಮಾಲಿನ್ಯದಲ್ಲಿ ಪಟಾಕಿ ಭಾರೀ ಪರಿಣಾಮವನ್ನು ಬೀರುತ್ತಿರುವುದೂ ಅದರ ಆತಂಕಗಳಿಗೆ ಕಾರಣವಾಗಿದೆ. ಯಾವಾಗ ಪಟಾಕಿಗಳ ಮೇಲೆ ಸುಪ್ರೀಂಕೋರ್ಟ್ ಪರಿಸರ ಕಾಳಜಿಯ ಹಿನ್ನೆಲೆಯಲ್ಲಿ ಭಾಗಶಃ ನಿಷೇಧ ಘೋಷಿಸಿತೋ, ಸಂಘಪರಿವಾರ ಮತ್ತು ಕೆಲವು ರಾಜಕೀಯ ಪಕ್ಷಗಳು ಪಟಾಕಿಗಳಿಗಿಂತ ಜೋರಾಗಿ ಸ್ಫೋಟಿಸುತ್ತಿವೆ. ‘ಇದು ಹಿಂದೂ ಧರ್ಮದ ಹಬ್ಬಗಳ ಮೇಲೆ ನಡೆದ ದಾಳಿ’ ಎಂಬಂತೆ ಆದೇಶವನ್ನು ತಿರುಚಿ ಜನರಿಗೆ ತಲುಪಿಸುತ್ತಿವೆ. ಪಟಾಕಿ ಧರ್ಮ ಮತ್ತು ಹಬ್ಬದ ಅವಿನಾಭಾವ ಅಂಗ ಎಂಬಂತೆ ಬಿಂಬಿಸುತ್ತಿದೆ.

ಪಟಾಕಿ ನಿಷೇಧವಾದರೆ, ಹಬ್ಬದ ಧಾರ್ಮಿಕ ಸ್ವರೂಪಕ್ಕೇ ಧಕ್ಕೆ ಬರಬಹುದು ಎಂಬಂತೆ ಈ ರಾಜಕೀಯ ನಾಯಕರು ಜನರನ್ನು ಪ್ರಚೋದಿಸತೊಡಗಿದ್ದಾರೆ. ಭಾರತೀಯ ಹಬ್ಬಗಳಿಗೆ ಪ್ರಕೃತಿಯ ಜೊತೆಗೆ ನೇರವಾದ ಸಂಬಂಧವಿದೆ. ಪ್ರಕೃತಿಯ ಬದಲಾವಣೆಗಳಿಗೆ ಹಬ್ಬಗಳ ಮೂಲಕ ಶ್ರೀಸಾಮಾನ್ಯರು ಸ್ಪಂದಿಸುತ್ತಾ ಬಂದಿದ್ದಾರೆ. ಈ ಎಲ್ಲ ಹಬ್ಬಗಳ ಮೂಲ ಕೃಷಿ. ಅದಕ್ಕೆ ಪೂರಕವಾಗಿ ಹಬ್ಬಗಳನ್ನು ಸಂಭ್ರಮಿಸುತ್ತಾರೆ. ವಾಯು, ಗಾಳಿ, ನದಿ, ಕೃಷಿ ಬೆಳೆ, ಕೆರೆ, ಮಣ್ಣು ಎಲ್ಲವುಗಳ ಜೊತೆಗೆ ಹಬ್ಬಗಳು ಸಂಬಂಧ ಹೊಂದಿವೆ. ವೈದಿಕ ಹಸ್ತಕ್ಷೇಪವಾದಾಗ ಹಬ್ಬಆಚರಣೆಗಳು ಸಂಪ್ರದಾಯವಾದವು. ಪ್ರಕೃತಿಯ ಜೊತೆಗೆ ಸಂಬಂಧವನ್ನು ಕಳೆದುಕೊಂಡವು. ಎಲ್ಲಕ್ಕಿಂತ ಮುಖ್ಯವಾಗಿ ವೈದಿಕ ಸಂಪರ್ಕದಿಂದಾಗಿ ಜನರ ಹಬ್ಬಗಳು ಪ್ರಕೃತಿಗೆ ಮಾರಕವಾದವು. ನದಿ, ಕೆರೆಗಳನ್ನೇ ತೆಗೆದುಕೊಳ್ಳೋಣ. ಕೆರೆ, ನದಿಗಳು ಕೃಷಿಕರ ಬದುಕಿನ ಜೀವದ್ರವ್ಯ. ಆದುದರಿಂದಲೇ ಅವರು ಅದನ್ನು ತಾಯಿ, ಗಂಗಾತಾಯಿ ಎಂದೆಲ್ಲ ಕರೆದರು. ಆದರೆ ವೈದಿಕರು ಜನಪದ ವೌಲ್ಯಗಳನ್ನು ಸಂಪ್ರದಾಯಗೊಳಿಸಿದರು.

ಗಂಗೆಯನ್ನು ಜನರು ಪವಿತ್ರ ಎಂದು ಕರೆಯುವುದಕ್ಕೆ, ವೈದಿಕರು ಪವಿತ್ರ ಎಂದು ಕರೆಯುವುದಕ್ಕೂ ಅಜಗಜಾಂತರವಿದೆ. ವೈದಿಕರು ಪುರಾಣ ಕತೆಗಳನ್ನು ತಳಕು ಹಾಕಿ ಗಂಗೆಯನ್ನು ದೇವತೆಯಾಗಿಸಿದರು. ಗಂಗೆಯಲ್ಲಿ ಮೃತದೇಹದ ಅವಶೇಷಗಳನ್ನು ವಿಸರ್ಜಿಸಿದರೆ ಮೋಕ್ಷ ಎಂದು ನಂಬಿಸಿದರು. ಪರಿಣಾಮವಾಗಿ ಇಂದು ಗಂಗೆ, ಕೋಟ್ಯಂತರ ರೂಪಾಯಿ ಸುರಿದರೂ ಶುದ್ಧೀಕರಿಸಲಾಗದಷ್ಟು ಕೆಟ್ಟು ಹೋಗಿದ್ದಾಳೆ. ಕುಡಿಯುವುದಕ್ಕೂ ಗಂಗೆಯ ನೀರು ಬಳಸಲು ಅಸಾಧ್ಯ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ. ಚೌತಿ ಕೃಷಿಕರ ಹಬ್ಬ. ದವಸ ಧಾನ್ಯ, ಕೃಷಿ ಫಲಗಳನ್ನು ಒಟ್ಟುಗೂಡಿಸಿ ಅದಕ್ಕೆ ಗಣಪನ ಆಕೃತಿ ಕೊಟ್ಟು ಕೃಷಿಕರು ಪೂಜಿಸುತ್ತಿದ್ದರು. ಆ ಮೂಲಕ ಅನ್ನಾಹಾರಗಳನ್ನು ನೀಡಿದ ಪ್ರಕೃತಿಯನ್ನು ಗೌರವಿಸುತ್ತಿದ್ದರು. ಇಂದು ಗಣೇಶೋತ್ಸವ ರಾಜಕೀಯಗೊಂಡಿದೆ. ಅದು ಸಾರ್ವಜನಿಕ ಗಣೇಶೋತ್ಸವವಾಗಿದೆ. ಪ್ರತಿ ಗಣೇಶೋತ್ಸವದ ಬಳಿಕ ನಮ್ಮ ಕೆರೆಗಳನ್ನೊಮ್ಮೆ ನೋಡಿದರೆ ಸಾಕು. ಹಿಂದೆಲ್ಲ ಹಬ್ಬಗಳು ಪ್ರಕೃತಿಯನ್ನು ಹೆಚ್ಚು ಹೆಚ್ಚು ಗೌರವದಿಂದ ನೋಡಲು ಕಲಿಸುತ್ತಿದ್ದರೆ, ಇಂದು ಹಬ್ಬಗಳು ಪ್ರಕೃತಿಯನ್ನು ಕೆಡಿಸಲು ಪ್ರೇರಣೆ ನೀಡುತ್ತಿವೆ. ಕೆರೆಗಳಿಗೆ ಗಣೇಶನ ವಿಗ್ರಹಗಳನ್ನು ಹಾಕಬೇಡಿ ಎಂದರೆ, ಅದು ಧಾರ್ಮಿಕ ಹಕ್ಕಿನ ಮೇಲೆ ನಡೆಯುವ ದಾಳಿ ಎಂದು ರಾಜಕಾರಣಿಗಳು ಜನರನ್ನು ರೊಚ್ಚಿಗೆಬ್ಬಿಸುತ್ತಾರೆ.

ಇದೇ ಸಂದರ್ಭದಲ್ಲಿ, ಕೆರೆಗಳನ್ನು, ನದಿಗಳನ್ನು ಶುದ್ಧವಾಗಿಟ್ಟುಕೊಳ್ಳುವುದು ಭಾರತೀಯ ಧರ್ಮದ ಭಾಗವೆನ್ನುವುದನ್ನು ಜನರಿಂದ ಮುಚ್ಚಿಡುತ್ತಾರೆ. ದೀಪಾವಳಿ ಹೆಸರೇ ಅದರ ಮಹತ್ವವನ್ನು ಹೇಳುತ್ತದೆ. ಅಲ್ಲಿ ‘ಬೆಳಕಿ’ಗೆ ಮಹತ್ವವೇ ಹೊರತು ಶಬ್ದಕ್ಕಲ್ಲ. ಪುರಾಣ ಕಥೆಗಳ ಆಧಾರದ ದೀಪಾವಳಿ ವೈದಿಕರದ್ದಾದರೆ, ಜನಸಾಮಾನ್ಯರ ಹಬ್ಬವು ಪುರಾಣ ಕತೆಗಳ ತಳಹದಿಯಲ್ಲಿ ಹುಟ್ಟಿರುವುದಲ್ಲ. ಅದು ಮತ್ತೆ ಕೃಷಿಯ ಜೊತೆಗೆ ನಂಟನ್ನು ಬೆಸೆಯುತ್ತದೆ. ಬೆಳೆದ ಕೃಷಿಫಲಗಳ ಮುಂದೆ ಹಣತೆಗಳನ್ನು ಹಚ್ಚಿಡುವುದು ನಮ್ಮ ಹಿರಿಯರ ಸಂಪ್ರದಾಯ.

ಕೊಯ್ಲಿನ ಸಮಯವಾದುದರಿಂದ, ಐಶ್ವರ್ಯ ಮನೆಗೆ ಬರುವ ಹೊತ್ತು. ಅದರ ಸ್ವಾಗತದ ಕ್ಷಣಗಳು. ಬದುಕನ್ನು ಆವರಿಸಿದ ದಾರಿದ್ರ, ಕತ್ತಲು ಕಳೆದು ಬೆಳಕು ಆವರಿಸುವ ಸಂದರ್ಭ. ಹಣತೆಯೇ ದೀಪಾವಳಿಯ ಸಡಗರವನ್ನು, ಅದು ಪ್ರತಿಪಾದಿಸುವ ವೌಲ್ಯಗಳನ್ನು ಎತ್ತರಿಸುತ್ತದೆ. ಪಟಾಕಿ ಗದ್ದಲ ಸದ್ದುಗಳನ್ನಷ್ಟೇ ಮಾಡುತ್ತದೆ. ರಾಜಕಾರಣಿಗಳ, ಧಾರ್ಮಿಕ ಮುಖಂಡರ ಭಾಷಣಗಳಂತೆ. ಸದ್ದಿಗೆ ನಮ್ಮಾಳಗಿನ ಕತ್ತಲೆಯನ್ನು ಬೆಳಗುವ ಶಕ್ತಿಯಿಲ್ಲ. ಅದು ಸದ್ದು ಮಾಡುತ್ತಾ ಉರಿಯುತ್ತದೆ. ಆದರೆ ಅದರ ಬೆಳಕು ಹೆಚ್ಚು ಕ್ಷಣ ಉಳಿಯುವುದಿಲ್ಲ. ಉರಿದ ಬಳಿಕ ಪಟಾಕಿ ಉಳಿಸಿಹೋಗುವುದು ಕತ್ತಲು, ಬೂದಿ ಮತ್ತು ದುರ್ವಾಸನೆ. ಇವು ಮೂರೂ ದೀಪಾವಳಿಯನ್ನು ಸಂಕೇತಿಸುವುದಿಲ್ಲ. ಬದಲಿಗೆ ಬೆಳಕಿನ ಹಬ್ಬ ಏನನ್ನು ಪ್ರತಿಪಾದಿಸುತ್ತದೆಯೋ ಅದಕ್ಕೆ ವಿರುದ್ಧವಾದ ವೌಲ್ಯಗಳನ್ನು ಹೊಂದಿವೆ. ಈ ಕಾರಣದಿಂದಲೇ, ದೀಪಾವಳಿಯ ದಿನ ಹಣತೆಗಳನ್ನು ಬಳಸುವ ಬದಲು ಪಟಾಕಿಗಳನ್ನು ಸಿಡಿಸುವುದು ಹಬ್ಬದ ವೌಲ್ಯಗಳಿಗೆ ಕಳಂಕ ತಂದಂತೆ.

ದೀಪಾವಳಿಯ ದಿನ ಲಕ್ಷ್ಮೀ ಅಥವಾ ಸಂಪತ್ತು ಅಥವಾ ಫಲಗಳನ್ನು ಹಣತೆ ಹಚ್ಚಿ ಸ್ವಾಗತಿಸುವ ನಂಬಿಕೆಯಿದೆ. ಆದರೆ ಪಟಾಕಿಯ ಹೆಸರಲ್ಲಿ ನಾವು ಸಂಪತ್ತನ್ನು ಬೆಂಕಿ ಹಚ್ಚಿ ಬೂದಿ ಮಾಡುತ್ತೇವೆ. ನಮ್ಮ ನೆರೆ ಹೊರೆಯ ಬಡ ಮಕ್ಕಳನ್ನು ಗುರುತಿಸಿ ಅವರೊಂದಿಗೆ ನಮ್ಮ ಸಂಪತ್ತನ್ನು ಹಂಚಿಕೊಳ್ಳುವ ಮೂಲಕ ಸಂತೋಷ, ಸಂಭ್ರಮಗಳನ್ನು ವಿಸ್ತಾರಗೊಳಿಸುವ ಬದಲು, ಬೂದಿಯಾಗುವ ಪಟಾಕಿಗಳಿಗಾಗಿ ಸುರಿಯುತ್ತೇವೆ. ಲಕ್ಷ್ಮೀಗೆ ಪರೋಕ್ಷವಾಗಿ ಅವಮಾನ ಮಾಡುತ್ತೇವೆ. ಅಷ್ಟೇ ಅಲ್ಲ, ಆ ಮೂಲಕ ಪ್ರಕೃತಿಯನ್ನೂ ಕೆಡಿಸುತ್ತೇವೆ. ಉಸಿರಾಡುವ ಗಾಳಿ, ಸೇವಿಸುವ ನೀರು ಇವೆಲ್ಲವನ್ನು ಕಲುಷಿತಗೊಳಿಸುತ್ತೇವೆ. ಪ್ರತಿ ವರ್ಷ ರಾಜ್ಯದಲ್ಲಿ ಇನ್ನೂರಕ್ಕೂ ಅಧಿಕ ಮಕ್ಕಳು ಪಟಾಕಿ ದೆಸೆಯಿಂದ ಕಣ್ಣು ಕಳೆದುಕೊಳ್ಳುತ್ತಿದ್ದಾರೆ ಎನ್ನುವುದನ್ನು ಅಂಕಿಅಂಶಗಳು ಹೇಳುತ್ತಿವೆ.

ಹಬ್ಬಗಳು ನಮ್ಮ ಬದುಕಿನ ಕತ್ತಲನ್ನು ಸರಿಸಿ ಬೆಳಕನ್ನು ತುಂಬಬೇಕು. ಆದರೆ ಪಟಾಕಿ ದೆಸೆಯಿಂದ, ನೂರಾರು ಮಕ್ಕಳ ಬದುಕು ಶಾಶ್ವತವಾಗಿ ಕತ್ತಲಿಗೆ ತಳ್ಳಲ್ಪಡುತ್ತಿವೆ. ಬೆಳಕು ತರಬೇಕಾದ ಹಬ್ಬ, ಕತ್ತಲನ್ನು ನೀಡಿ ಹೊರಟು ಹೋಗುತ್ತದೆ. ಆದರೆ ಇದಕ್ಕಾಗಿ ನಾವು ದೀಪಾವಳಿಯನ್ನು ಹೊಣೆ ಮಾಡುವಂತಿಲ್ಲ. ದೀಪಾವಳಿಯ ಉದ್ದೇಶವನ್ನು ಅರ್ಥ ಮಾಡಿಕೊಳ್ಳದೆ ಅದನ್ನು ಸದ್ದು ಗದ್ದಲದ ಹಬ್ಬವಾಗಿ ಪರಿವರ್ತಿಸಿದ್ದೇ ಹಬ್ಬ ಶಾಪವಾಗುವುದಕ್ಕೆ ಕಾರಣ. ಪಟಾಕಿ ತಯಾರಿಕೆ ಒಂದು ದೊಡ್ಡ ದಂಧೆಯಾಗಿದೆ. ಈ ದಂಧೆಯಲ್ಲಿ ವಿವಿಧ ಸ್ಫೋಟಕ ತಯಾರಕರೂ ಶಾಮೀಲಾಗಿದ್ದಾರೆ. ರಾಜಕಾರಣಿಗಳು ಅವರಿಗೆ ಬೆಂಬಲವಾಗಿ ನಿಂತಿದ್ದಾರೆ. ಈ ದಂಧೆಯ ಹಿಂದೆ ದುಷ್ಕರ್ಮಿಗಳ ಕೈವಾಡವೂ ಇದೆ. ಆದುದರಿಂದಲೇ, ರಾಜಕಾರಣಿಗಳಿಗೆ, ಸಮಾಜದಲ್ಲಿ ಅವಿತಿರುವ ದುಷ್ಕರ್ಮಿಗಳಿಗೆ ಪಟಾಕಿ ಕಾರ್ಖಾನೆಗಳು ಅಸ್ತಿತ್ವದಲ್ಲಿರಬೇಕು. ದೀಪಾವಳಿಯ ಹೆಸರನ್ನು ಅದಕ್ಕಾಗಿ ಇವರು ದುರ್ಬಳಕೆ ಮಾಡುತ್ತಿದ್ದಾರೆ. ಈ ಕಾರಣದಿಂದಲೇ, ಸುಪ್ರೀಂಕೋರ್ಟ್ ತೀರ್ಪಿನ ಹಿಂದಿರುವ ಪ್ರಾಮಾಣಿಕ ಕಾಳಜಿಯನ್ನು ಅರ್ಥ ಮಾಡಿಕೊಂಡು ದೀಪಾವಳಿಯನ್ನು ಅರ್ಥಪೂರ್ಣವಾಗಿ ಆಚರಿಸಿ ನಮ್ಮ ಮನೆ, ಮನವನ್ನು ಬೆಳಗಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News