ತನಿಖಾಧಿಕಾರಿಗಳ ಬದಲಾವಣೆ ಕೋರಿ ರೆಡ್ಡಿಯಿಂದ ಹೈಕೋರ್ಟ್‌ಗೆ ರಿಟ್ ಅರ್ಜಿ

Update: 2018-11-09 16:24 GMT

ಬೆಂಗಳೂರು, ನ.9: ಆ್ಯಂಬಿಡೆಂಟ್ ಕಂಪೆನಿ ವಂಚನೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳ ಜೊತೆಗೆ ಡೀಲ್ ನಡೆಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನನ್ನ ವಿರುದ್ಧದ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಗಳ ಬದಲಾವಣೆ ಮಾಡಬೇಕೆಂದು ಕೋರಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. 

ಜನಾರ್ದನ ರೆಡ್ಡಿ ಶುಕ್ರವಾರ ಹೈಕೋರ್ಟ್‌ಗೆ ರಿಟ್ ಅರ್ಜಿ ದಾಖಲಿಸಿದ್ದಾರೆ. ಈ ಅರ್ಜಿ ಸೋಮವಾರ ನ್ಯಾಯಮೂರ್ತಿ ಬಿ.ವೀರಪ್ಪ ಅವರ ನ್ಯಾಯಪೀಠದ ಮುಂದೆ ವಿಚಾರಣೆಗೆ ಬರುವ ಸಾಧ್ಯತೆಯಿದೆ. ಹಾಗೆಯೇ ತಮ್ಮ ವಿರುದ್ಧ ದೇವರಜೀವನಹಳ್ಳಿ ಪೊಲೀಸರು ದಾಖಲಿಸಿರುವ ಪ್ರಕರಣ ರದ್ದುಗೊಳಿಸುವಂತೆಯೂ ಕೋರಿ ಜನಾರ್ದನ ರೆಡ್ಡಿ ಮತ್ತೊಂದು ರಿಟ್ ಅರ್ಜಿಯನ್ನೂ ಇದೆ ಹೈಕೋರ್ಟ್‌ನಲ್ಲಿ ದಾಖಲಿಸಿದ್ದಾರೆ. ಈ ಅರ್ಜಿ ನ್ಯಾಯಮೂರ್ತಿ ಪಿ.ಎಸ್.ದಿನೇಶ್‌ಕುಮಾರ್ ಅವರ ಏಕಸದಸ್ಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬರಬೇಕಿದೆ. ಈ ಎರಡು ಅರ್ಜಿಗಳು ನ್ಯಾಯಪೀಠಗಳ ಮುಂದೆ ಸೋಮವಾರ ವಿಚಾರಣೆಗೆ ಬರುವ ಸಾಧ್ಯತೆಯಿದೆ. 

ಅರ್ಜಿದಾರರ ಆಕ್ಷೇಪಣೆ ಏನು: ರಾಜಕೀಯ ದುರುದ್ದೇಶದಿಂದ ಈ ಪ್ರಕರಣದ ತನಿಖೆ ನಡೆಸಲಾಗುತ್ತಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಎಸಿಪಿ ಡಾ.ಎಚ್.ಎನ್.ವೆಂಕಟೇಶ್ ಪ್ರಸನ್ನ ಹಾಗೂ ಡಿಸಿಪಿ ಎಸ್.ಗಿರೀಶ್ ರಾಜಕೀಯ ಒತ್ತಡಕ್ಕೆ ಒಳಗಾಗಿದ್ದಾರೆ. ಪ್ರಕರಣದಲ್ಲಿನ ಆರೋಪಿ ಸಂಖ್ಯೆ 4 ಆದ, ಬಳ್ಳಾರಿಯ ರಾಜಮಹಲ್ ಜ್ಯೂವೆಲರ್ಸ್ ಮಾಲಕ ರಮೇಶ್ ಅವರನ್ನು ಪೊಲೀಸರು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಈ ಕುರಿತಂತೆ ನ.9ರಂದೆ ರಾಜ್ಯ ಮಾನವ ಹಕ್ಕುಗಳ ಆಯೋಗ ಹಾಗೂ ಪೊಲೀಸ್ ದೂರು ಪ್ರಾಧಿಕಾರಕ್ಕೆ ಫಿರ್ಯಾದು ನೀಡಲಾಗುವುದು. ತನಿಖೆಯಲ್ಲಿ ಎಳ್ಳಷ್ಟೂ ಪಾರದರ್ಶಕತೆ ಇಲ್ಲ. ಎಲ್ಲ ರಾಜಕೀಯ ಪ್ರೇರಿತವಾಗಿದೆ. ತಾಜ್ ವೆಸ್ಟ್‌ಎಂಡ್ ಹೊಟೇಲ್‌ನಲ್ಲಿ ನಡೆಸಿದ ತನಿಖೆಯ ವಿಡಿಯೊವನ್ನು ಪೊಲೀಸರು ಬಹಿರಂಗಗೊಳಿಸಿದ್ದಾರೆ. ತನಿಖೆ ನಡೆಸಿದ ಪೊಲೀಸರು ಎಲ್ಲ ಮಾಹಿತಿಯನ್ನು ಸುದ್ದಿಗೋಷ್ಠಿಯನ್ನು ಕರೆದು ಬಹಿರಂಗಗೊಳಿಸಿದ್ದಾರೆ. ಈ ಮೂಲಕ ತನಿಖೆ ಗೌಪ್ಯತೆ ಕಾಪಾಡುವಲ್ಲಿ ವಿಫಲರಾಗಿದ್ದಾರೆ. ಈ ಎಲ್ಲ ಕಾರಣಗಳಿಗಾಗಿ ಕೂಡಲೇ ಪ್ರಕರಣದ ತನಿಖಾಧಿಕಾರಿಗಳನ್ನು ಬದಲಾಯಿಸಬೇಕು ಎಂಬುದು ಅರ್ಜಿದಾರರ ಕೋರಿಕೆ. ಜನಾರ್ದನ ರೆಡ್ಡಿ ಪರ ಆರ್.ಪಿ.ಚಂದ್ರಶೇಖರ್ ವಕಾಲತ್ತು ವಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News