ಆರೆಸ್ಸೆಸ್ ದಿನಗಳಲ್ಲಿ ಸೇನೆಯೊಂದಿಗೆ ಸಮಯ ಕಳೆದಿದ್ದೆ ಎಂದ ಮೋದಿ: ಟ್ವಿಟರ್ ನಲ್ಲಿ ಪ್ರಶ್ನೆ, ಟೀಕೆಗಳ ಸುರಿಮಳೆ

Update: 2018-11-09 07:27 GMT

ಹೊಸದಿಲ್ಲಿ, ನ.9:  ಈ ಬಾರಿ  ಪ್ರಧಾನಿ ಉತ್ತರಾಖಂಡದ ಹರ್ಸಿಲ್ ಎಂಬಲ್ಲಿ ಸೈನಿಕರೊಂದಿಗೆ ದೀಪಾವಳಿ ಆಚರಿಸಿದರು. ಆದರೆ ಈ ಬಾರಿ ಅವರು ಆಡಿದ ಮಾತೊಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ಹಾಗೂ ಟೀಕೆಯ ವಿಷಯವಾಗಿ ಬಿಟ್ಟಿದೆ.

“ಒಬ್ಬ ಆರೆಸ್ಸೆಸ್ ಸದಸ್ಯನಾಗಿ ನನಗೆ ಸೇನಾ ಜವಾನರೊಂದಿಗೆ ಸಮಯ ಕಳೆಯುವ ಅವಕಾಶ ಒದಗಿತ್ತು. ಆ ಸಂದರ್ಭ ನಾನು ಸಮಾನ ಶ್ರೇಣಿ ಸಮಾನ ಪಿಂಚಣಿ (ಒನ್ ರ್ಯಾಂಕ್, ಒನ್ ಪೆನ್ಶನ್) ಬಗ್ಗೆ  ಬಹಳಷ್ಟು ಕೇಳಿದ್ದೆ. ಹಲವರು ಸರಕಾರಗಳು ಬಂದು ಹೋದವು. ಆದರೆ ನನಗೆ ನಿಮ್ಮೊಂದಿಗೆ ಸಂಪರ್ಕವಿದ್ದುದರಿಂದ ಹಾಗೂ ನಿಮ್ಮ ಭಾವನೆಗಳನ್ನು ನಾನು ಅರ್ಥೈಸಬಲ್ಲವನಾಗಿರುವುರಿಂದ  ಪ್ರಧಾನಿಯಾದ ನಂತರ ನಿಮ್ಮ ಒಆರ್‍ಒಪಿ ಕನಸನ್ನು ನನಸಾಗಿಸುವುದು ನನ್ನ ಜವಾಬ್ದಾರಿ'' ಎಂದು ಮೋದಿ ಹೇಳಿದ್ದರು.

ಪ್ರಧಾನಿಯ ಈ ಹೇಳಿಕೆ ಟ್ವಿಟರಿಗರಿಂದ ಟೀಕೆಗೆ ಒಳಗಾಗಿದ್ದು, ಇದು ಅವರಿಂದ ‘ಇನ್ನೊಂದು ಸುಳ್ಳು’ ಎಂದು ಹಲವರು ಹೇಳಿದ್ದಾರೆ. ಇನ್ನು ಕೆಲವರು ಪ್ರಧಾನಿ ಸೇನೆಯೊಂದಿಗ ಕಳೆದ ದಿನಗಳ ಲೆಕ್ಕ ನೀಡುವಂತೆ ಕೇಳಿದ್ದಾರೆ. ಪ್ರಧಾನಿಯ ಸಮಾನ ಶ್ರೇಣಿ, ಸಮಾನ ಪಿಂಚಣಿಗೆ ಸಂಬಂಧಿಸಿದ ಹೇಳಿಕೆಯನ್ನು ಕೆಲವರು ಸರಿಪಡಿಸಿ ಆ ಯೋಜನೆ ಇನ್ನೂ ಅನುಮೋದನೆಗೊಂಡಿಲ್ಲ ಹಾಗೂ ಸೇನಾಧಿಕಾರಿಗಳು ಇನ್ನೂ ಜಂತರ್ ಮಂತರ್ ನಲ್ಲಿ ಪ್ರತಿಭಟಿಸುತ್ತಿದ್ದಾರೆ ಎಂದು ಅವರಿಗೆ ನೆನಪಿಸಿದ್ದಾರೆ.

``ಪ್ರಧಾನಿಗೆ ದೀಪಾವಳಿಯಂದೂ ಸುಳ್ಳು ಹೇಳುವುದನ್ನು ಬಿಡಲಾಗಿಲ್ಲ.  ಆರೆಸ್ಸೆಸ್ ದಿನಗಳ ಸಮಯ ಒಂದು ದಿನವಾದರೂ ಸೇನೆಯ ಜತೆ ಕಳೆದಿದ್ದರೆ ಯಾವಾಗ ಎಲ್ಲಿ ಎಂದು ತಿಳಿಸಿ'' ಎಂದು ಒಬ್ಬರು ಪ್ರಧಾನಿಯನ್ನು ಕೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News