ಟಿಪ್ಪು ಸುಲ್ತಾನ್ ದೇಶದ ಆಸ್ತಿ: ಡಿ.ಕೆ.ಶಿವಕುಮಾರ್

Update: 2018-11-10 13:02 GMT

ಬೆಂಗಳೂರು, ನ.10: ದೇಶದ ಮೊದಲ ಸ್ವಾತಂತ್ರ ಹೋರಾಟಗಾರ ಟಿಪ್ಪು ಸುಲ್ತಾನ್ ಕೇವಲ ರಾಜ್ಯದ ಆಸ್ತಿಯಲ್ಲ, ದೇಶದ ಆಸ್ತಿಯಾಗಿದ್ದಾರೆ. ಹೀಗಾಗಿ ಅವರ ಜಯಂತಿಯನ್ನು ಆಚರಿಸುವ ಮೂಲಕ ಗೌರವ ಸಲ್ಲಿಸುವುದು ರಾಜ್ಯ ಸರಕಾರದ ಕರ್ತವ್ಯವೆಂದು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.

ಶನಿವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಆಯೋಜಿಸಿದ್ದ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವೀರ ಯೋಧ ಟಿಪ್ಪು ಸುಲ್ತಾನ್ ರೇಷ್ಮೆ ಉದ್ಯಮ, ತೋಟಗಾರಿಕೆ ಸೇರಿದಂತೆ ಕೃಷಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವ ಮೂಲಕ ಜನ ಸಾಮಾನ್ಯರ ಬದುಕಿಗೆ ಆಸರೆಯಾಗಿದ್ದರು ಎಂದು ಸ್ಮರಿಸಿದರು.

ಟಿಪ್ಪು ಹೆಸರಿನಲ್ಲಿ ರಾಜಕೀಯ ಬೇಡ: ವಿಧಾನಸೌಧದ ವಜ್ರ ಮಹೋತ್ಸವದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ತಮ್ಮ ಭಾಷಣದಲ್ಲಿ ಟಿಪ್ಪು ಸುಲ್ತಾನ್ ದೇಶಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿದರು. ಆದರೆ, ಬಿಜೆಪಿ ನಾಯಕರು ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ವಿನಾಕಾರಣ ಸಮಾಜದಲ್ಲಿ ಅಶಾಂತಿ ಉಂಟು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಶ್ರೀರಂಗಪಟ್ಟಣದಲ್ಲಿರುವ ಶ್ರೀ ರಂಗನಾಥ ದೇವಸ್ಥಾನ, ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನ ಸೇರಿದಂತೆ ರಾಜ್ಯದ ಹಲವು ದೇವಸ್ಥಾನಗಳಲ್ಲಿ ಇಂದಿಗೂ ಟಿಪ್ಪು ಸುಲ್ತಾನ್ ಹೆಸರಿನಲ್ಲಿ ಪೂಜೆ ಮಾಡಲಾಗುತ್ತದೆ. ಇಂತಹ ಉದಾಹರಣೆಗಳು ಸಾಕಷ್ಟು ಇದ್ದರೂ ಬಿಜೆಪಿ ನಾಯಕರು ಟಿಪ್ಪು ಸುಲ್ತಾನ್‌ನನ್ನು ಹಿಂದೂ ವಿರೋಧಿ ಎಂದು ಬಿಂಬಿಸಲು ಹೊರಟಿದ್ದಾರೆ ಎಂದು ಅವರು ವಿಷಾದಿಸಿದರು.

ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಝಮೀರ್ ಅಹ್ಮದ್ ಖಾನ್ ಮಾತನಾಡಿ, ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮವನ್ನು ಹಿಂದಿನಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ. ಆದರೆ, ಕಳೆದ ನಾಲ್ಕು ವರ್ಷದಿಂದ ಟಿಪ್ಪು ಜಯಂತಿಯನ್ನು ಸರಕಾರಿ ಕಾರ್ಯಕ್ರಮವಾಗಿ ಆಚರಿಸುತ್ತಿರುವುದು ಸಂತಸ ತಂದಿದೆ ಎಂದು ತಿಳಿಸಿದರು.

ವೀರ ಯೋಧ ಟಿಪ್ಪು ಸುಲ್ತಾನ್ ಜಯಂತಿ ಆಚರಣೆಗೆ ಬಿಜೆಪಿ ನಾಯಕರು ಅಡ್ಡಿ ಪಡಿಸುತ್ತಿರುವುದು ಕೇವಲ ರಾಜಕಾರಣವೆ ಹೊರತು ಮತ್ಯಾವ ಉದ್ದೇಶವೂ ಇಲ್ಲ. ಮುಂದಿನ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಟಿಪ್ಪು ಜಯಂತಿಯನ್ನು ವಿರೋಧಿಸುವ ಮೂಲಕ ಕೋಮು ರಾಜಕಾರಣ ಮಾಡಲು ಹೊರಟಿದೆ ಎಂದು ಅವರು ಕಿಡಿಕಾರಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಜಗದೀಶ್‌ ಶೆಟ್ಟರ್, ಆರ್.ಅಶೋಕ್ ಸೇರಿದಂತೆ ಹಲವು ಬಿಜೆಪಿ ನಾಯಕರು ಟಿಪ್ಪು ಸುಲ್ತಾನ್ ಜಯಂತಿಯಲ್ಲಿ ಭಾಗವಹಿಸಿ, ಗುಣಗಾನ ಮಾಡಿದ್ದಾರೆ. ಆದರೆ, ಅದು ಸರಕಾರದ ಕಾರ್ಯಕ್ರಮವಾಗಿ ಜಾರಿಯಾಗುತ್ತಿದ್ದಂತೆ ವಿರೋಧಿಸಲು ಪ್ರಾರಂಭಿಸಿದ್ದಾರೆ. ಇಂತಹ ವಿರೋಧಗಳು ಬಿಜೆಪಿಗೆ ಚಟದ ರೀತಿಯಲ್ಲಿ ಅಂಟಿಕೊಂಡಿವೆ ಎಂದು ಅವರು ಅಭಿಪ್ರಾಯಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಜಯಮಾಲಾ ಮಾತನಾಡಿ, ಜಾತಿ, ಧರ್ಮದ ಹೆಸರಿನಲ್ಲಿ ಮನಸ್ತಾಪಗಳು ಉಂಟಾಗುತ್ತಿರುವ ಇಂದಿನ ಸಂದರ್ಭದಲ್ಲಿ ಕೋಮು ಸೌಹಾರ್ದತೆ, ಪರಧರ್ಮ ಸಹಿಷ್ಣುತೆ, ತನ್ನ ಜನೋಪಕಾರಿ ಕಾರ್ಯಕ್ರಮಗಳಿಂದ ಜಗತ್ತಿಗೆ ಮಾದರಿಯಾದ ವೀರ ಯೋಧ ಟಿಪ್ಪು ಸುಲ್ತಾನ್ ತತ್ವಾದರ್ಶಗಳು ಎಂದೆಂದಿಗೂ ಆದರ್ಶವೆಂದು ತಿಳಿಸಿದರು.

ಮೈಸೂರು ವಿಶ್ವವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕ ಡಾ.ಕೆ.ಸದಾಶಿವ ಮಾತನಾಡಿ, ರಾಜರ ಆಳ್ವಿಕೆಯೊಂದರಲ್ಲಿ ಶೋಷಿತರು ಒಳಗೊಂಡಂತೆ ಜನ ಸಾಮಾನ್ಯರಿಗೆ ಭೂಮಿಯನ್ನು ಹಂಚಿ, ಕೆರೆ, ಕುಂಟೆಗಳನ್ನು ಕಟ್ಟಿ ಕೃಷಿಯಲ್ಲಿ ತೊಡಗಿಸುವ ಮೂಲಕ ಮೈಸೂರು ರಾಜ್ಯವನ್ನು ಕಲ್ಯಾಣ ರಾಜ್ಯವನ್ನಾಗಿ ಕಟ್ಟಿದವರು ವೀರ ಯೋಧ ಟಿಪ್ಪು ಸುಲ್ತಾನ್ ಎಂದು ತಿಳಿಸಿದರು.

ಟಿಪ್ಪು ಸುಲ್ತಾನ್ ತನ್ನ ಸೈನ್ಯದಲ್ಲಿ ಹಿಂದುಳಿದವರು, ದಲಿತರು ಸೇರಿದಂತೆ ಜಾತಿ, ಮತ, ಭೇದವಿಲ್ಲದೆ ಅರ್ಹತೆಯಿರುವ ಪ್ರತಿಯೊಬ್ಬರಿಗೂ ಅವಕಾಶ ಮಾಡಿಕೊಟ್ಟಿದ್ದರು. ಹಾಗೂ ಸೈನಿಕರಿಗೆ ತಿಂಗಳಿಗೆ ನಿರ್ದಿಷ್ಟ ಸಂಬಳ ನಿಗದಿಪಡಿಸಿ, ಸೈನಿಕರ ಕುಟುಂಬಗಳಿಗೆ ಆರ್ಥಿಕವಾಗಿ ನೆರವಾಗಿದ್ದರು. ಹಾಗೂ ಟಿಪ್ಪು ಆಡಳಿತದಲ್ಲಿ ಮಹಿಳೆಯರು ನಿರ್ಭೀತಿಯಿಂದ ಬದುಕುವಂತಹ ವಾತಾವರಣ ನಿರ್ಮಾಣ ಮಾಡಿದ್ದರು ಎಂದು ಅವರು ಸ್ಮರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಆರ್.ರೋಷನ್ ಬೇಗ್ ವಹಿಸಿದ್ದರು. ಈ ವೇಳೆ ಶಾಂತಿನಗರ ಶಾಸಕ ಎನ್.ಎ.ಹಾರೀಸ್, ವಿಧಾನಪರಿಷತ್ ಸದಸ್ಯ ರಿಝ್ವನ್ ಅರ್ಷದ್, ಕರ್ನಾಟಕ ಉರ್ದು ಅಕಾಡೆಮಿಯ ಅಧ್ಯಕ್ಷ ಮುಬೀನ್ ಮುನಾವರ್, ಆಮೀರ್-ಎ-ಷರಿಯತ್‌ನ ಹಝ್ರತ್ ಮೌಲಾನ ಸಗೀರ್‌ ಅಹ್ಮದ್‌ ಖಾನ್ ಸಾಹೇಬ್ ರಷಾದಿ ಮತ್ತಿತರರಿದ್ದರು.

ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭಾಗವಹಿಸಿಲ್ಲ ಎಂಬ ಬಗ್ಗೆ ವಿನಾಕಾರಣ ಗೊಂದಲ ಸೃಷ್ಟಿಸಲಾಗುತ್ತಿದೆ. ಆದರೆ, ಮುಖ್ಯಮಂತ್ರಿಗಳು ತಮ್ಮ ಆರೋಗ್ಯ ಸುಧಾರಣೆಗಾಗಿ ವಿಶ್ರಾಂತಿಯಲ್ಲಿರುವುದು ಪೂರ್ವ ನಿರ್ಧರಿತ ಕಾರ್ಯಕ್ರಮವಾಗಿತ್ತು. ಹೀಗಾಗಿ ಆಹ್ವಾನ ಪತ್ರಿಕೆಯಲ್ಲಿ ಮುಖ್ಯಮಂತ್ರಿ ಹೆಸರನ್ನು ನಮೂದಿಸಿಲ್ಲ. ಆದರೂ ಟಿಪ್ಪು ಜಯಂತಿಯ ಪ್ರಯುಕ್ತ ಪತ್ರದ ಮೂಲಕ ಶುಭ ಸಂದೇಶ ಕಳುಹಿಸಿದ್ದಾರೆ.

-ಝಮೀರ್ ಅಹ್ಮದ್ ಖಾನ್, ಸಚಿವ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News