ರಾಜಕೀಯ ದುರುದ್ದೇಶದಿಂದ ಟಿಪ್ಪು ಜಯಂತಿಗೆ ವಿರೋಧ: ಮಾಜಿ ಸಿಎಂ ಸಿದ್ದರಾಮಯ್ಯ

Update: 2018-11-10 12:14 GMT

ಬೆಂಗಳೂರು, ನ. 10: ದುರುದ್ದೇಶದಿಂದ ಬಿಜೆಪಿ ಮುಖಂಡರು ಟಿಪ್ಪು ಸುಲ್ತಾನ್ ಜಯಂತಿಯನ್ನು ವಿರೋಧಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಶನಿವಾರ ತಮ್ಮ ಕಾವೇರಿ ನಿವಾಸದಲ್ಲಿ ಮುಸ್ಲಿಂ ಧರ್ಮಗುರುಗಳಿಂದ ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ರಾಜಕೀಯ ಕಾರಣಗಳಿಗೆ ಬಿಜೆಪಿ ಟಿಪ್ಪು ಜಯಂತಿಯನ್ನು ವಿರೋಧಿಸುತ್ತಿದೆ. ಆದರೆ, ಈ ಹಿಂದೆ ಇದೇ ಬಿಜೆಪಿ ನಾಯಕರು ಟಿಪ್ಪು ಖಡ್ಗ ಹಿಡಿದು, ಪೇಟ ತೊಟ್ಟಿದ್ದರು. ಆಗ ಇಲ್ಲದ ವಿರೋಧ, ಈಗೇಕೇ? ಎಂದು ಪ್ರಶ್ನಿಸಿದರು. ಟಿಪ್ಪು ಸುಲ್ತಾನ್ ಬಗ್ಗೆ ಬಿಜೆಪಿ ಮುಖಂಡರು ತಪ್ಪು ಮಾಹಿತಿಯನ್ನು ಹಬ್ಬಿಸುತ್ತಿದ್ದಾರೆ. ಟಿಪ್ಪು ಸುಲ್ತಾನ್ ಕಾಲದಲ್ಲಿ ಸಾಮರಸ್ಯ ಇತ್ತು. ನಮ್ಮ ಸರಕಾರದ ಅವಧಿಯಲ್ಲಿ 13 ಜಯಂತಿಗಳನ್ನು ಆಚರಣೆ ಮಾಡಿದ್ದು, ಅದರಲ್ಲಿ ಟಿಪ್ಪು ಜಯಂತಿಯೂ ಒಂದು ಎಂದು ಸಿದ್ದರಾಮಯ್ಯ ಹೇಳಿದರು.

ಟಿಪ್ಪು ಸುಲ್ತಾನ್ ಪುಸ್ತಕಕ್ಕೆ ಜಗದೀಶ್ ಶೆಟ್ಟರ್ ಸಿಎಂ ಆಗಿದ್ದ ಅವಧಿಯಲ್ಲಿ ಮುನ್ನುಡಿ ಬರೆದಿದ್ದಾರೆ. ಬಿಜೆಪಿಯವರು ಗೋಮುಖ ವ್ಯಾಘ್ರಗಳು. ಟಿಪ್ಪು ಹಿಂದೂ ವಿರೋಧಿ ಎಂಬುದು ಅಪ್ಪಟ ಸುಳ್ಳು. ಅವರ ಕಾಲದಲ್ಲಿ ಹಲವು ಹಿಂದೂಗಳು ಪ್ರಮುಖ ಹುದ್ದೆಯಲ್ಲಿದ್ದರು ಎಂದು ಸಿದ್ದರಾಮಯ್ಯ ಹೇಳಿದರು.

ಮುಸ್ಲಿಮ್ ಧರ್ಮಗುರುಗಳು, ಸಿದ್ದರಾಮಯ್ಯನವರಿಗೆ ಬೆಳ್ಳಿ ಖಡ್ಗ, ಬೆಳ್ಳಿ ಹಾರ ಮತ್ತು ಟಿಪ್ಪು ಪೇಟ ತೋಡಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಸಚಿವ ಝಮೀರ್ ಅಹ್ಮದ್ ಖಾನ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News