ನೋಟು ನಿಷೇಧ, ಜಿಎಸ್‌ಟಿಯಿಂದ ಭಾರತದ ಆರ್ಥಿಕ ಪ್ರಗತಿಗೆ ಭಾರೀ ಹಿನ್ನಡೆ

Update: 2018-11-10 13:21 GMT

ವಾಷಿಂಗ್ಟನ್,ನ.10: ನೋಟು ನಿಷೇಧ ಮತ್ತು ಜಿಎಸ್‌ಟಿ ಕಳೆದ ವರ್ಷ ಭಾರತದ ಆರ್ಥಿಕ ಪ್ರಗತಿಗೆ ಹಿನ್ನಡೆಯನ್ನುಂಟು ಮಾಡಿದ ಎರಡು ಪ್ರಮುಖ ಅಡ್ಡಿಗಳಾಗಿದ್ದವು ಎಂದು ಹೇಳಿರುವ ಮಾಜಿ ಆರ್‌ಬಿಐ ಗವರ್ನರ್ ರಘುರಾಮ್ ರಾಜನ್ ಅವರು,ಸದ್ಯದ ಶೇ.7 ಬೆಳವಣಿಗೆ ದರವು ದೇಶದ ಅಗತ್ಯಗಳನ್ನು ಪೂರೈಸಲು ಸಾಲದು ಎಂದು ಒತ್ತಿ ಹೇಳಿದ್ದಾರೆ.

 ಶುಕ್ರವಾರ ಅಮೆರಿಕದ ಬರ್ಕ್ಲಿಯಲ್ಲಿ ಕ್ಯಾಲಿಫೋರ್ನಿಯಾ ವಿವಿಯಲ್ಲಿ ದ್ವಿತೀಯ ಭಟ್ಟಾಚಾರ್ಯ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಭಾರತದ ಭವಿಷ್ಯ’ ಕುರಿತು ಮಾತನಾಡಿದ ರಾಜನ್,2012ರಿಂದ 2016ರವರೆಗಿನ ನಾಲ್ಕು ವರ್ಷಗಳ ಅವಧಿಯಲ್ಲಿ ಭಾರತದ ಆರ್ಥಿಕತೆಯು ವೇಗವಾಗಿ ಬೆಳೆಯುತ್ತಿತ್ತು. ಆದರೆ ನಂತರ ನೋಟು ನಿಷೇಧ ಮತ್ತು ಜಿಎಸ್‌ಟಿಯಿಂದಾಗಿ ಅದು ಕುಂಠಿತಗೊಂಡಿತು. ಬೆನ್ನು ಬೆನ್ನಿಗೆ ಎರಗಿದ ಇವೆರಡೂ ಆಘಾತಗಳು ಭಾರತದ ಬೆಳವಣಿಗೆಯ ಮೇಲೆ ಗಂಭೀರ ಪರಿಣಾಮವನ್ನುಂಟು ಮಾಡಿದವು. ಜಾಗತಿಕ ಆರ್ಥಿಕತೆಯ ಬೆಳವಣಿಗೆಯು ಚೇತರಿಸಿಕೊಳ್ಳುತ್ತಿದ್ದ ಸಮಯದಲ್ಲಿ ಭಾರತದ ಬೆಳವಣಿಗೆಯು ಹಿನ್ನಡೆಯನ್ನು ಕಂಡಿತ್ತು ಎಂದರು.

25 ವರ್ಷಗಳ ಅವಧಿಗೆ ಶೇ.7ರ ಬೆಳವಣಿಗೆ ದರವು ಅತ್ಯಂತ ಪ್ರಬಲ ಬೆಳವಣಿಗೆಯಾಗಿದೆ,ಆದರೆ ಒಂದು ಅರ್ಥದಲ್ಲಿ ಇದು ನೂತನ ಹಿಂದು ಬೆಳವಣಿಗೆ ದರವಾಗಿದೆ. ಇದು ಮೊದಲು ಶೇ.3.5ರಷ್ಟಿರುತ್ತಿತ್ತು ಎಂದ ಅವರು, ಕಾರ್ಮಿಕ ಕ್ಷೇತ್ರದಲ್ಲಿ ಕೆಲಸವನ್ನು ಹುಡುಕಿಕೊಂಡು ಭಾರೀ ಸಂಖ್ಯೆಯಲ್ಲಿ ಜನರು ಬರುತ್ತಿರುವುದರಿಂದ ಶೇ.7ರ ಬೆಳವಣಿಗೆ ದರವೂ ಏನೇನೂ ಸಾಲದು ಎನ್ನುವುದು ಕಟುಸತ್ಯವಾಗಿದೆ. ಅವರಿಗಾಗಿ ನಾವು ಪ್ರತಿ ತಿಂಗಳೂ 10 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಬೇಕಿದೆ. ಹೀಗಾಗಿ ಇಷ್ಟಕ್ಕೇ ನಾವು ತೃಪ್ತಿಗೊಳ್ಳುವಂತಿಲ್ಲ ಮತ್ತು ಇನ್ನೂ ಹೆಚ್ಚಿನ ಬೆಳವಣಿಗೆ ದರ ಅಗತ್ಯವಾಗಿದೆ ಎಂದರು.

ಭಾರತವು ಜಾಗತಿಕ ಬೆಳವಣಿಗೆಗೆ ಸಂವೇದನಾಶೀಲವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಅವರು,ಭಾರತವು ಹೆಚ್ಚು ಮುಕ್ತ ಆರ್ಥಿಕತೆಯಾಗಿದೆ ಮತ್ತು ಜಗತ್ತು ಬೆಳವಣಿಗೆಯಾದರೆ ಅದೂ ಇನ್ನಷ್ಟು ಬೆಳೆಯುತ್ತದೆ ಎಂದರು.

ದೇಶವು ತನ್ನ ಶಕ್ತಿ ಅಗತ್ಯಗಳಿಗಾಗಿ ತೈಲ ಆಮದನ್ನೇ ಹೆಚ್ಚಾಗಿ ನೆಚ್ಚಿಕೊಂಡಿರುವುದನ್ನು ಪ್ರಸ್ತಾಪಿಸಿದ ಅವರು,ನೋಟು ನಿಷೇಧ ಮತ್ತು ಜಿಎಸ್‌ಟಿಯ ಆಘಾತಗಳಿಂದ ಭಾರತದ ಬೆಳವಣಿಗೆಯು ಚೇತರಿಸಿಕೊಳ್ಳುತ್ತಿದೆಯಾದರೂ ತೈಲಬೆಲೆಗಳ ಸಮಸ್ಯೆ ಕಾಡುತ್ತಿದೆ ಎಂದು ಬೆಟ್ಟು ಮಾಡಿದರು.

 ಹೆಚ್ಚುತ್ತಿರುವ ಎನ್‌ಪಿಎಗಳು ಮತ್ತು ದಿವಾಳಿ ಸಂಹಿತೆಯ ಕುರಿತೂ ಮಾತನಾಡಿದ ರಾಜನ್,ದೇಶವು ಇಂದು ಮೂರು ಪ್ರಮುಖ ಅಡಚಣೆಗಳನ್ನು ಎದುರಿಸುತ್ತಿದೆ. ಕೆಟ್ಟು ಹಳ್ಳ ಹಿಡಿದಿರುವ ಮೂಲಸೌಕರ್ಯ,ವಿದ್ಯತ್ ಕ್ಷೇತ್ರವನ್ನು ಹಳಿಗೆ ತರುವುದು ಮತ್ತು ಬ್ಯಾಂಕ್ ವ್ಯವಸ್ಥೆಯನ್ನು ಕ್ರಮಬದ್ಧಗೊಳಿಸುವುದು ಇವು ಭಾರತದ ಬೆಳವಣಿಗೆಗೆ ಮೂರು ಪ್ರಮುಖ ಸವಾಲುಗಳಾಗಿವೆ ಎಂದರು.

ರಾಜಕೀಯ ನಿರ್ಧಾರಗಳನ್ನು ಕೈಗೊಳ್ಳುವಲ್ಲ್ಲಿ ಅತಿಯಾದ ಅಧಿಕಾರ ಕೇಂದ್ರೀಕರಣವು ಭಾರತದ ಸಮಸ್ಯೆಯ ಭಾಗವಾಗಿದೆ. ಹೆಚ್ಚಿನ ನಿರ್ಧಾರಗಳಿಗೆ ಪ್ರಧಾನಿ ಕಚೇರಿಯ ಅನುಮತಿ ಅಗತ್ಯವಾಗಿರುವುದು ಇದಕ್ಕೆ ನಿದರ್ಶನವಾಗಿದೆ ಎಂದು ರಾಜನ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News