ಆರ್‌ಬಿಐ, ಕೇಂದ್ರದ ಹಿಂಜರಿಕೆ ಮಧ್ಯೆಯೇ ಬೃಹತ್ ಸಾಲಗಾರರ ಹೆಸರು ಬಯಲು ಮಾಡಿದ ಬ್ಯಾಂಕ್‌ಗಳು

Update: 2018-11-11 14:23 GMT

ಕೊಲ್ಕತ್ತಾ,ನ.11: ಉದ್ದೇಶಪೂರ್ವಕ ಸುಸ್ತಿದಾರರ ಹೆಸರುಗಳನ್ನು ಸಾರ್ವಜನಿಕಗೊಳಿಸುವಲ್ಲಿ ಕೇಂದ್ರ ಸರಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಹಿಂಜರಿಯುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಮಾಹಿತಿ ಆಯೋಗವು (ಸಿಐಸಿ) ನೋಟೀಸ್ ಜಾರಿ ಮಾಡಿದೆ. ಈ ಮಧ್ಯೆ ಸಾರ್ವಜನಿಕ ಕ್ಷೇತ್ರದ ಪ್ರಮುಖ ನಾಲ್ಕು ಬ್ಯಾಂಕ್‌ಗಳು ಈಗಾಗಲೇ ಈ ಮಾಹಿತಿಯನ್ನು ತಮ್ಮ ಜಾಲತಾಣಗಳಲ್ಲಿ ಹಾಕಿರುವುದಾಗಿ ಆಂಗ್ಲ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಉದ್ದೇಶಪೂರ್ವಕ ಸಾಲಗಾರರಿಗೆ ಸಂಬಂಧಪಟ್ಟ ಮಾಹಿತಿಗಳನ್ನು ಸಾರ್ವಜನಿಕಗೊಳಿಸಲು ವಿಫಲವಾಗಿರುವ ಕಾರಣಕ್ಕೆ ನಿಮ್ಮ ವಿರುದ್ಧ ಯಾಕೆ ಕ್ರಮ ಕೈಗೊಳ್ಳಬಾರದು ಎಂದು ಸಿಐಸಿ ಆರ್‌ಬಿಐ ಮತ್ತು ಕೇಂದ್ರಕ್ಕೆ ಕಳುಹಿಸಿದ್ದ ಪತ್ರದಲ್ಲಿ ಪ್ರಶ್ನಿಸಿತ್ತು. ಇದಕ್ಕೆ ಸಂಬಂಧಿಸಿ ಸರ್ವೋಚ್ಚ ನ್ಯಾಯಾಲಯದ ಹಿಂದಿನ ಆದೇಶವನ್ನು ಉಲ್ಲೇಖಿಸಿದ ಸಿಐಸಿ, ಕೇಂದ್ರ ಮತ್ತು ಆರ್‌ಬಿಐ ಈ ತೀರ್ಪನ್ನು ಅವಮಾನಿಸುತ್ತಿದ್ದಾರೆ ಎಂದು ದೂರಿತ್ತು. ಆರ್‌ಬಿಐ ಮಾರ್ಗಸೂಚಿಯ ಪ್ರಕಾರ, ಇಂಥ ಮಾಹಿತಿಗಳನ್ನು ಸಾಲ ಮಾಹಿತಿ ಸಂಸ್ಥೆಗಳು ಸಾರ್ವಜನಿಕಗೊಳಿಸಬೇಕೇ ಹೊರತು ಬ್ಯಾಂಕ್‌ಗಳಲ್ಲ. ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರದ ಅಗ್ರ ಹತ್ತು ಬ್ಯಾಂಕ್‌ಗಳ ಜಾಲತಾಣಗಳನ್ನು ಪರಿಶೀಲಿಸಿದಾಗ ಯಾವುದೇ ಖಾಸಗಿ ಬ್ಯಾಂಕ್‌ನ ಜಾಲತಾಣದಲ್ಲಿ ಉದ್ದೇಶಪೂರ್ವಕ ಸುಸ್ತಿದಾರರ ಮಾಹಿತಿಯನ್ನು ಹಾಕಲಾಗಿಲ್ಲ. ಆದರೆ ಸಾರ್ವಜನಿಕ ವಲಯದ ನಾಲ್ಕು ಬ್ಯಾಂಕ್‌ಗಳಾದ, ಪಂಜಾಬ್ ನ್ಯಾಶನಲ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಐಡಿಬಿಐ ಮತ್ತು ಸಿಂಡಿಕೇಟ್ ಬ್ಯಾಂಕ್ ತಮ್ಮ ಜಾಲತಾಣದಲ್ಲಿ ಸುಸ್ತಿದಾರರ ಹೆಸರು ಮತ್ತು ಅವರು ಬ್ಯಾಂಕ್‌ಗೆ ಪಾವತಿಸಬೇಕಾಗಿರುವ ಮೊತ್ತದ ಮಾಹಿತಿಯನ್ನು ಹಾಕಿರುವುದು ಕಂಡು ಬಂದಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

ಈ ಬ್ಯಾಂಕ್‌ಗಳಿಗೆ 1,815 ಉದ್ದೇಶಪೂರ್ವಕ ಸುಸ್ತಿದಾರರು ಒಟ್ಟಾರೆ 42,000ಕೋಟಿ ರೂ. ಸಾಲ ಮರುಪಾವತಿಸಲು ಬಾಕಿಯಿದೆ ಎಂದು ಈ ಬ್ಯಾಂಕ್‌ಗಳ ಜಾಲತಾಣಗಳಲ್ಲಿರುವ ಮಾಹಿತಿಯ ಮೂಲಕ ತಿಳಿದುಬರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ. ವಿಜಯ್ ಮಲ್ಯರ ಕಿಂಗ್‌ಫಿಶರ್ ಏರ್‌ಲೈನ್ಸ್, ಆಮ್ಟೆಕ್ ಆಟೊ, ಇಪಿಸಿ ಕನ್‌ಸ್ಟ್ರಕ್ಷನ್ಸ್ ಇಂಡಿಯಾ, ಎಸ್.ಕುಮಾರ್, ನಿತಿನ್ ಮತ್ತು ಚೇತನ್ ಸಂದೇಶರರ ಸ್ಟರ್ಲಿಂಗ್ ಬಯೋಟೆಕ್, ರೊಟೊಮ್ಯಾಕ್, ಎಬಿಸಿ ಕಾಟ್ಸ್‌ಪಿನ್, ಆರ್‌ಇಐ ಆ್ಯಗ್ರೊ, ಫೊರೆವರ್ ಪ್ರೆಶಸ್ ಜುವೆಲ್ಲರಿ, ಝೈಲಾಗ್ ಸಿಸ್ಟಮ್ಸ್,ನಾಕೊಡ, ಝೂಮ್ ಡೆವಲಪರ್ಸ್ ಮುಂತಾದವು ಈ ನಾಲ್ಕು ಬ್ಯಾಂಕ್‌ಗಳಿಗೆ ಸಾಲ ಮರುಪಾವತಿಸಲು ಬಾಕಿಯಿರುವ ಪ್ರಮುಖ ಸಂಸ್ಥೆಗಳಾಗಿವೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News