ಪಂಚರಾಜ್ಯಗಳ ಚುನಾವಣೆಗಳಲ್ಲಿ ಬಿಜೆಪಿಯೇ ಗೆಲ್ಲಲಿದೆ

Update: 2018-11-11 14:12 GMT

ಮಥುರಾ(ಉ.ಪ್ರ),ನ.11: ಕೇಂದ್ರದ ಜನಪರ ಕಾರ್ಯಗಳಿಂದಾಗಿ ಶೀಘ್ರವೇ ವಿಧಾನಸಭಾ ಚುನಾವಣೆಗಳು ನಡೆಯಲಿರುವ ಎಲ್ಲ ಐದೂ ರಾಜ್ಯಗಳಲ್ಲಿ ಬಿಜೆಪಿಯು ಗೆಲುವು ಸಾಧಿಸಲಿದೆ ಎಂದು ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗ(ಎನ್‌ಸಿಎಸ್‌ಸಿ)ದ ಅಧ್ಯಕ್ಷ ರಾಮಶಂಕರ ಕಥೇರಿಯಾ ಅವರು ರವಿವಾರ ಇಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

ಶಂಕರಾಚಾರ್ಯ ಅಧೋಕ್ಷಜಾನಂದ ಆಶ್ರಮ ಗೋವರ್ಧನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ರಾಜ್ಯ ಸರಕಾರಗಳ ಉತ್ತಮ ಸಾಧನೆಗಳು ಮತ್ತು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದಿಂದ ಜನಪರ ಕಾರ್ಯಕ್ರಮಗಳ ಯಶಸ್ವಿ ಅನುಷ್ಠಾನ ತನ್ನ ವಿಶ್ವಾಸಕ್ಕೆ ಮುಖ್ಯ ಕಾರಣಗಳಾಗಿವೆ ಎಂದರು.

ಪ್ರತಿಪಕ್ಷಗಳ ಒಗ್ಗಟ್ಟಿಗೆ ಯಾವುದೇ ನೀತಿಯಿಲ್ಲ, ಹೀಗಾಗಿ ಅದು ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾಣೆಗಳಲ್ಲಿ ಒಂದು ಬೆದರಿಕೆಯಾಗುತ್ತದೆ ಎಂದು ತಾನು ಪರಿಗಣಿಸಿಲ್ಲ ಎಂದ ಅವರು,ಮೋದಿಯವರ ನೇತೃತ್ವದಡಿ ದೇಶವು ಭಾರೀ ಪ್ರಗತಿಯನ್ನು ಸಾಧಿಸಿರುವುದರಿಂದ ಲೋಕಸಭಾ ಚುನಾವಣೆಗಳ ಬಳಿಕ ಅವರೇ ಮತ್ತೆ ಪ್ರಧಾನಿಯಾಗಲಿದ್ದಾರೆ ಎಂದರು. ಮೋದಿಯವರ ಪ್ರಾಮಾಣಿಕತೆ ಮತ್ತು ಬಡವರು,ರೈತರು ಮತ್ತು ಸಮಾಜದ ಇತರ ಶೋಷಿತ ವರ್ಗಗಳ ಏಳಿಗೆಯೆಡೆಗೆ ಅವರ ಬದ್ಧತೆಯಿಂದಾಗಿ ಜನರು ಅವರಲ್ಲಿ ವಿಶ್ವಾಸವನ್ನಿರಿಸಿದ್ದಾರೆ ಎಂದರು.

ಕೇಂದ್ರ ಸರಕಾರದ ವಸತಿ ಯೋಜನೆ ಮತ್ತು ಆಯುಷ್ಮಾನ್ ಭಾರತ ಯೋಜನೆಗಳಿಂದಾಗಿ ಬಡವರೂ ಸೇರಿದಂತೆ ಎಲ್ಲರೂ ವಸತಿ ಮತ್ತು ಆರೋಗ್ಯ ಸೇವೆಗಳನ್ನು ಪಡೆಯುವಂತಾಗಿದೆ ಎಂದು ಅವರು ಶ್ಲಾಘಿಸಿದರು.

ನೋಟು ನಿಷೇಧವು ಯೋಜಿತ ರೀತಿಯಲ್ಲಿ ನಡೆಸಲಾದ ವಿತ್ತೀಯ ವಂಚನೆ ಎಂಬ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಬಣ್ಣನೆಯು ಸುಳ್ಳ್ಳು ಹೇಳಿಕೆಯಾಗಿದೆ ಎಂದು ಅವರು ಪ್ರತಿಪಾದಿಸಿದರು.

 ಎನ್‌ಸಿಎಸ್‌ಸಿ ಕಾರ್ಯ ನಿರ್ವಹಣೆ ಕುರಿತು ಮಾತನಾಡಿದ ಅವರು,ಆಯೋಗವು ಈಗ ಸ್ವಯಂಪ್ರೇರಿತ ಕ್ರಮಗಳನ್ನು ಕೈಗೊಳ್ಳುತ್ತಿದೆ ಮತ್ತು ಸಂತ್ರಸ್ತ ಕುಟುಂಬಗಳಿಗೆ ಒಂದು ತಿಂಗಳೊಳಗೆ ಪರಿಹಾರವನ್ನು ಪಾವತಿಸುತ್ತಿದೆ ಎಂದು ತಿಳಿಸಿದರು.

ಇದಕ್ಕೂ ಮುನ್ನ ಶಂಕರಾಚಾರ್ಯ ಅಧೋಕ್ಷಜಾನಂದ ದೇವ ತೀರ್ಥ ಮಹಾರಾಜ್ ಅವರನ್ನು ಭೇಟಿಯಾದ ಕಥೇರಿಯಾ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಕುರಿತು ಚರ್ಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News