ರಶ್ಯ, ಅಮೆರಿಕ, ಚೀನಾದಿಂದ ಭಾರತದ ಮೇಲೆ 6.95 ಲಕ್ಷ ಸೈಬರ್ ದಾಳಿ !

Update: 2018-11-11 14:22 GMT

ಹೊಸದಿಲ್ಲಿ, ನ.11: ಈ ವರ್ಷದ ಜನವರಿಯಿಂದ ಜೂನ್‌ವರೆಗಿನ ಅವಧಿಯಲ್ಲಿ ಭಾರತದಲ್ಲಿ 6,95,396 ಸೈಬರ್ ದಾಳಿ ಪ್ರಕರಣ ದಾಖಲಾಗಿರುವುದಾಗಿ ಸೈಬರ್ ಭದ್ರತೆ ಸಂಸ್ಥೆ ಎಫ್-ಸೆಕ್ಯೂರ್ ವರದಿ ಮಾಡಿದೆ. ಇದರಲ್ಲಿ ಬಹುತೇಕ ದಾಳಿಗಳು ರಶ್ಯ, ಅಮೆರಿಕ, ಚೀನಾ ಮತ್ತು ನೆದರ್ಲ್ಯಾಂಡ್ ದೇಶಗಳ ಸೈಬರ್ ವಂಚಕರಿಂದ ನಡೆದಿವೆ ಎಂದು ವರದಿ ತಿಳಿಸಿದೆ.

ಭಾರತದ ಅಂತರ್‌ಜಾಲ ಬಳಕೆದಾರರ ಮೇಲೆ ರಶ್ಯ, ಅಮೆರಿಕ, ಚೀನಾ ಮತ್ತು ನೆದರ್ಲಾಂಡ್ ದೇಶಗಳ ಸೈಬರ್ ವಂಚಕರಿಂದ ಅತ್ಯಧಿಕ ದಾಳಿ ನಡೆದಿದೆ. ರಶ್ಯದಿಂದ 2,55,589, ಅಮೆರಿಕದಿಂದ 1,03, 458, ಚೀನಾದಿಂದ 42,544, ನೆದರ್ಲ್ಯಾಂಡ್ ನಿಂದ 19,169 ಮತ್ತು ಜರ್ಮನಿಯಿಂದ 15,330 ದಾಳಿಗಳು (ಒಟ್ಟು 4,36,090 ದಾಳಿ)ನಡೆದಿವೆ ಎಂದು ವರದಿ ತಿಳಿಸಿದೆ.

  ಇನ್ನೊಂದೆಡೆ, ಭಾರತದ ಸೈಬರ್‌ ದಾಳಿಗಾರರು ಆಸ್ಟ್ರಿಯಾದ ಸಂಸ್ಥೆಗಳ ಮೇಲೆ 12,540, ನೆದರ್ಲ್ಯಾಂಡ್ ಮೇಲೆ 9,267, ಅಮೆರಿಕದ ಮೇಲೆ 6,347, ಜಪಾನ್ 4,701 ಹಾಗೂ ಉಕ್ರೇನ್‌ನ 3,708 ಸಂಸ್ಥೆಗಳ ಮೇಲೆ ಸೈಬರ್ ದಾಳಿ ನಡೆಸಿದ್ದಾರೆ ಎಂದು ವರದಿ ತಿಳಿಸಿದೆ. ಜಾಗತಿಕವಾಗಿ ಈ ವರ್ಷ ಬ್ರಿಟನ್‌ನ ಸಂಸ್ಥೆಗಳ ಮೇಲೆ 9,76,80,746 ಸೈಬರ್ ದಾಳಿ ನಡೆದು ಅಗ್ರಸ್ಥಾನದಲ್ಲಿದ್ದರೆ, ಅಮೆರಿಕ 1,10,10,212 ಸೈಬರ್ ದಾಳಿಗೆ ಒಳಗಾಗಿದೆ. ಸೈಬರ್ ದಾಳಿಗೆ ಒಳಗಾದ ರಾಷ್ಟ್ರಗಳ ಜಾಗತಿಕ ಪಟ್ಟಿಯಲ್ಲಿ ಭಾರತ 21ನೇ ಸ್ಥಾನದಲ್ಲಿದೆ.

 ಇದೇ ವೇಳೆ ಇತರ ದೇಶಗಳ ಸಂಸ್ಥೆಗಳ ಮೇಲೆ ಸೈಬರ್ ದಾಳಿ ನಡೆಸಿದ ರಾಷ್ಟ್ರಗಳ ಪಟ್ಟಿಯಲ್ಲಿ 73,482 ದಾಳಿ ಘಟನೆಯೊಂದಿಗೆ ಭಾರತ 13ನೇ ಸ್ಥಾನದಲ್ಲಿದೆ ಎಂದು ಎಫ್-ಸೆಕ್ಯೂರ್‌ನ ಸೈಬರ್ ಭದ್ರತೆ ವಿಭಾಗದ ಉಪಾಧ್ಯಕ್ಷ ಲೀಝೆಕ್ ಟಾಸಿಮ್‌ಸ್ಕಿ ತಿಳಿಸಿದ್ದಾರೆ. ಭಾರತವು ಡಿಜಿಟಲೀಕರಣ ವ್ಯವಹಾರದತ್ತ ಹೆಚ್ಚಿನ ಒತ್ತು ನೀಡುತ್ತಿರುವಂತೆಯೇ ದೇಶದ ಸಂಸ್ಥೆಗಳ ಮೇಲೆ ಸೈಬರ್ ದಾಳಿ ಪ್ರಕರಣ ಹೆಚ್ಚಿರುವುದು ಜಾಗತಿಕ ಸೈಬರ್ ವಂಚಕರಿಗೆ ಭಾರತದ ಸೈಬರ್‌ಕ್ಷೇತ್ರ ಹೆಚ್ಚು ಲಾಭದಾಯಕವಾಗಿರುವುದರ ಸಂಕೇತವಾಗಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News