ಮಾವೋವಾದಿಗಳಿಂದ ಐಇಡಿ ಸ್ಫೋಟ: ಬಿಎಸ್‌ಎಫ್ ಅಧಿಕಾರಿ ಹುತಾತ್ಮ

Update: 2018-11-11 14:48 GMT

ರಾಯಪುರ, ನ. 11: ಚತ್ತೀಸ್‌ಗಢದ ಕಂಕಾರ್ ಜಿಲ್ಲೆಯಲ್ಲಿ ಮಾವೋವಾದಿಗಳು ರವಿವಾರ 6 ಐಇಡಿ ಸ್ಫೋಟಿಸಿದ ಪರಿಣಾಮ ಗಡಿ ಭದ್ರತಾ ಪಡೆಯ ಸಬ್ ಇನ್ಸ್‌ಪೆಕ್ಟರ್ ಒಬ್ಬರು ಸಾವನ್ನಪ್ಪಿದ್ದಾರೆ.

ಚತ್ತೀಸ್‌ಘಡದ ನಕ್ಸಲ್ ಪ್ರಭಾವಿತ ಬಿಜಾಪುರ ಜಿಲ್ಲೆಯಲ್ಲಿ ನಡೆದ ಇನ್ನೊಂದು ಘಟನೆಯಲ್ಲಿ ಭದ್ರತಾ ಪಡೆ ನಡೆಸಿದ ಎನ್‌ಕೌಂಟರ್‌ನಲ್ಲಿ ಮಾವೋವಾದಿಯೋರ್ವ ಹತರಾಗಿದ್ದಾರೆ.

ಕಟ್ಟಕಾಲ ಹಾಗೂ ಗೋಮ್ ಗ್ರಾಮಗಳ ನಡುವೆ ಭದ್ರತಾ ಪಡೆಯನ್ನು ಗುರಿಯಾಗಿರಿಸಿ ಮಾವೋವಾದಿಗಳು 6 ಐಇಡಿಗಳನ್ನು ಸ್ಫೋಟಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಕೋಲಿಯಬೇಡ ಪ್ರದೇಶದಲ್ಲಿ ಗಡಿ ಭದ್ರತಾ ಪಡೆ ಯೋಧರು ಎಂದಿನಂತ ಗಸ್ತು ತಿರುಗುತ್ತಿದ್ದಾಗ ಬೆಳಗ್ಗೆ 8.30ಕ್ಕೆ ಮಾವೋವಾದಿಗಳು ಈ ಸ್ಪೋಟ ನಡೆಸಿದ್ದಾರೆ. ಗುಂಡು ಹಾಗೂ ಸ್ಪಿಂಟರ್‌ನಿಂದ ಗಂಭೀರ ಗಾಯಗೊಂಡ ಸಬ್ ಇನ್ಸ್‌ಪೆಕ್ಟರ್ ಮಹೇಂದ್ರ ಸಿಂಗ್ ಅವರನ್ನು ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ, ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು ಎಂದು ಕಂಕೇರ್ ಎಸ್‌ಪಿ ಧ್ರುವೆ ಹೇಳಿದ್ದಾರೆ. ಸ್ಫೋಟದ ಬಳಿಕ ನಾವು ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿದ್ದೇವೆ ಎಂದು ಅವರು ಹೇಳಿದ್ದಾರೆ.

ವಿಶೇಷ ಕಾರ್ಯ ಪಡೆ (ಎಸ್‌ಟಿಎಫ್) ತಂಡ ನಕ್ಸಲ್ ವಿರೋಧಿ ಕಾರ್ಯಾಚರಣೆ ನಡೆಸುತ್ತಿದ್ದಾಗ ಬೆದ್ರೆ ಪೊಲೀಸ್ ಠಾಣಾ ವ್ಯಾಪ್ತಿಯ ಅರಣ್ಯದಲ್ಲಿ ಗುಂಡಿನ ಚಕಮಕಿ ನಡೆಯಿತು ಎಂದು ಬಿಜಾಪುರ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್ ಕುರಿತು ವಿಶೇಷ ಪೊಲೀಸ್ ಮಹಾ ನಿರ್ದೇಶಕ (ನಕ್ಸಲ್ ವಿರೋಧಿ ಕಾರ್ಯಾಚರಣೆ) ಡಿ.ಎಂ. ಅವಸ್ಥಿ ತಿಳಿಸಿದ್ದಾರೆ.

ಸೋಮವಾರ ನಡೆಯಲಿರುವ ಮೊದಲ ಹಂತದ ಚುನಾವಣೆ ಹಿನ್ನೆಲೆಯಲ್ಲಿ ಬಸ್ತಾರ್ ವಿಭಾಗದ 7 ಜಿಲ್ಲೆಗಳು ಹಾಗೂ ರಾಜಾನಂದ್ ಗಾಂವ್ ಜಿಲ್ಲೆಯಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಚುನಾವಣೆ ಸುಸೂತ್ರವಾಗಿ ನೆರೆವೇರಲು ಸುಮಾರು 1 ಲಕ್ಷ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News