ರಾಜ್ಯದಲ್ಲಿ ಮೂರು ದಿನ ಮಳೆ ಸಾಧ್ಯತೆ

Update: 2018-11-11 15:03 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ನ.11: ಬಂಗಾಳಕೊಲ್ಲಿಯಲ್ಲಿ ಉಂಟಾಗಿದ್ದ ವಾಯುಭಾರ ಕುಸಿತ ಚಂಡಮಾರುತವಾಗಿ ಪರಿವರ್ತನೆಯಾಗಿದ್ದು, ನ.15ರಿಂದ ಮೂರು ದಿನಗಳ ವರೆಗೆ ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆಗಳಿವೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸರೆಡ್ಡಿ ತಿಳಿಸಿದರು.

ಬಂಗಾಳಕೊಲ್ಲಿಯಲ್ಲಿ ಉಂಟಾಗಿದ್ದ ವಾಯುಭಾರ ಕುಸಿತ ಚಂಡಮಾರುತವಾಗಿ ಪರಿವರ್ತನೆಯಾಗಿದೆ. ಚಂಡಮಾರುತಕ್ಕೆ ಗಜ ಎಂಬ ಹೆಸರಿಡಲಾಗಿದ್ದು, ಅಂಡಮಾನ್ ದ್ವೀಪದ ಕಡೆಯಿಂದ ಚಂಡಮಾರುತ ಬರುತ್ತಿದೆ. ನ.14ರಂದು ಇಲ್ಲವೇ ನ.15ರಂದು ತಮಿಳುನಾಡಿನ ಕರಾವಳಿ ತಲುಪುವ ನಿರೀಕ್ಷೆ ಇದೆ. ಚಂಡಮಾರುತದ ಪ್ರಭಾವದಿಂದ ನಮ್ಮ ರಾಜ್ಯದ ದಕ್ಷಿಣ ಒಳನಾಡು ಹಾಗೂ ಕರಾವಳಿ ಭಾಗದಲ್ಲಿ ಮೂರು ದಿನಗಳ ಕಾಲ ಮಳೆಯಾಗುವ ನಿರೀಕ್ಷೆ ಇದೆ.

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಗಜ ಚಂಡಮಾರುತ ತೀವ್ರಗೊಳ್ಳುವ ಸಾಧ್ಯತೆಗಳಿದ್ದು, ಯಾವ ಕಡೆಗೆ ಮುನ್ನುಗ್ಗಲಿವೆ ಎಂಬ ಆಧಾರದ ಮೇಲೆ ರಾಜ್ಯದಲ್ಲಾಗುವ ಮಳೆ ಪ್ರಮಾಣವನ್ನು ನಿರ್ಧರಿಸಲಾಗುವುದು. ಇನ್ನೆರಡು ದಿನಗಳ ನಂತರ ಮಳೆ ನಿರ್ದಿಷ್ಟ ಲಕ್ಷಣ ಗೋಚರವಾಗಲಿದೆ ಎಂದು ಅವರು ಹೇಳಿದರು.

ನ.15ರಂದು ಮಳೆ ಪ್ರಾರಂಭವಾಗುವ ಸಾಧ್ಯತೆಗಳಿವೆ. ನ.16ರಂದು ಹೆಚ್ಚಿನ ಮಳೆಯನ್ನು ನಿರೀಕ್ಷಿಸಲಾಗುತ್ತಿದೆ. 17ರವರೆಗೂ ರಾಜ್ಯದಲ್ಲಿ ಮಳೆಯಾಗುವ ಮುನ್ಸೂಚನೆಗಳಿವೆ ಎಂದು ಶ್ರೀನಿವಾಸರೆಡ್ಡಿ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News