ಪುಸ್ತಕಗಳ ಓದು ಪರಿಪೂರ್ಣ ಪ್ರಜೆಯನ್ನಾಗಿಸುತ್ತದೆ: ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ

Update: 2018-11-11 15:06 GMT

ಬೆಂಗಳೂರು, ನ.11: ಪುಸ್ತಕಗಳ ಓದಿನಿಂದ ನಮ್ಮ ಮನಸ್ಥಿತಿ ಬದಲಾಗುತ್ತದೆ ಹಾಗೂ ಪರಿಪೂರ್ಣ ಪ್ರಜೆಯಾಗಿ ಗುರುತಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಸಾಹಿತಿ ಹಾಗೂ ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ಅಭಿಪ್ರಾಯ ಪಟ್ಟಿದ್ದಾರೆ.

ರವಿವಾರ ಅಗ್ರಹಾರ ದಾಸರಹಳ್ಳಿಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಆಯೋಜಿಸಿದ್ದ ನಿಮ್ಮ ಮನೆಗೆ ನಮ್ಮ ಪುಸ್ತಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಗತ್ತಿನ ವಿವಿಧ ಸಾಹಿತ್ಯ, ಸಂಸ್ಕೃತಿ ಪರಿಚಯ ಪುಸ್ತಕಗಳು ಮಾಡಿಕೊಡುತ್ತವೆ. ಅಲ್ಲದೆ, ಪುಸ್ತಕಗಳ ಓದಿನಿಂದ ಕೆಟ್ಟ ಆಲೋಚನೆಗಳು ದೂರವಾಗಿ, ಉತ್ತಮ ಪ್ರಜೆಯಾಗಿ ಮಾರ್ಪಡುವ ಸಾಧ್ಯತೆಗಳು ಹೆಚ್ಚಿರುತ್ತವೆ ಎಂದರು.

ನಾನೊಂದು ರೌಡಿಯನ್ನು ನೋಡಿದ್ದೆ. ಆತುರದ ನಿರ್ಧಾರದಿಂದ ಜೈಲು ಸೇರಿದ್ದ ವ್ಯಕ್ತಿ, ಪುಸ್ತಕಗಳ ಓದಿನಿಂದ ಶಿಕ್ಷೆ ಪೂರ್ತಿಯಾಗುವುದರೊಳಗೆ ಸಂಪೂರ್ಣ ಬದಲಾಗಿದ್ದ. ಅಲ್ಲದೆ, ಕಡಿಮೆ ಅವಧಿಯಲ್ಲಿಯೇ ಶಿಕ್ಷೆಯಿಂದ ಮುಕ್ತನಾದ ಎಂದ ಅವರು, ಓದಿನಲ್ಲಿ ಸಿಗುವ ಆನಂದ, ಅನುಭವ, ಒಳ್ಳೆಯ ವಿಚಾರ ಬೇರೆ ಎಲ್ಲಿಂದಲೂ ಸಿಗುವುದಿಲ್ಲ. ಹೀಗಾಗಿ, ಪುಸ್ತಕ ಓದುವ ಮೂಲಕ ಅದಲ್ಲಿರುವ ವಿಷಯಗಳನ್ನು ಅರ್ಥೈಸಿಕೊಳ್ಳಬೇಕ ಎಂದು ಸಲಹೆ ನೀಡಿದರು.

ಮಕ್ಕಳೇ ನಮ್ಮ ಸಮಾಜದ ಆಸ್ತಿಯಾಗಿದ್ದು, ಅವರನ್ನು ವಿದ್ಯಾವಂತರನ್ನಾಗಿ ಮಾಡಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ. ಹೀಗಾಗಿ, ಮಕ್ಕಳನ್ನು ಶಾಲೆಗಳಿಗೆ ಕಳುಹಿಸುವ ಮೂಲಕ ಓದಿಸಬೇಕು. ಮಕ್ಕಳ ಶಿಕ್ಷಣಕ್ಕಾಗಿ ಸರಕಾರಗಳು ವಿವಿಧ ಯೋಜನೆಗಳನ್ನು ಜಾರಿ ಮಾಡಿದೆ. ಮಕ್ಕಳಿಗೆ ಶಾಲಾ ಶಿಕ್ಷಣದ ಜತೆಗೆ ಪಠ್ಯೇತರ ಶಿಕ್ಷಣವನ್ನೂ ಸಿಗುವಂತೆ ಮಾಡಬೇಕು ಎಂದು ಹೇಳಿದರು.

ಇಂದಿನ ಮಕ್ಕಳು ಕುವೆಂಪು, ಅಂಬೇಡ್ಕರ್, ಪುಲೆ, ತೇಜಸ್ವಿ ಸೇರಿದಂತೆ ಎಲ್ಲ ಕವಿಗಳು, ಸಾಹಿತಿಗಳ ಪುಸ್ತಕಗಳನ್ನು ಓದಬೇಕು. ಜೀವನ ಚರಿತ್ರೆಗಳನ್ನು, ಆತ್ಮಕಥೆಗಳನ್ನು ಓದಬೇಕು. ಎಲ್ಲಿದೀವಿ, ಹೇಗಿದೀವಿ ಎಂಬುವುದಕ್ಕಿಂತ ಹೇಗೆ ಜೀವನ ರೂಪಿಸಿಕೊಂಡಿದ್ದೇವೆ ಎಂಬುದು ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಪ್ರಾಧಿಕಾರ ಉತ್ತಮ ಕಾರ್ಯ ಮಾಡುತ್ತಿದ್ದು, ಎಲ್ಲರೂ ಇದನ್ನು ಉಪಯೋಗ ಮಾಡಿಕೊಳ್ಳಬೇಕು ಎಂದರು.

ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಮಾತನಾಡಿ, ಸಮಯ ಸಿಕ್ಕಾಗ ಸಿನಿಮಾ ನೋಡುವುದು, ಸೀರಿಯಲ್ ನೋಡುವುದನ್ನು ಇಂದಿನ ಸಮಾಜ ಬೆಳೆಸಿಕೊಳ್ಳುತ್ತಿದೆ. ಆದರೆ, ಸಮಯ ಸಿಕ್ಕಾಗ ಒಂದು ಪುಸ್ತಕ ಓದೋಣ ಎಂಬ ಮನಸ್ಥಿತಿಯನ್ನು ಬೆಳೆಸಿಕೊಂಡರೆ ನಮ್ಮ ವ್ಯಕ್ತಿತ್ವ ವೃದ್ಧಿಗೊಳ್ಳುತ್ತದೆ ಹಾಗೂ ಸಮಾಜದಲ್ಲಿ ವಿಭಿನ್ನವಾದ ರೀತಿಯಲ್ಲಿ ಬದುಕಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಪುಸ್ತಕಗಳು ಮನೆಗಳಲ್ಲಿ ಎಲ್ಲರ ಸಂಗಾತಿಗಳಾಗಬೇಕು. ಮನೆಯಲ್ಲಿ ಮಕ್ಕಳ ಕೈಗೆ ಮೊಬೈಲ್ ನೀಡುವ ಬದಲಿಗೆ ಪುಸ್ತಕಗಳನ್ನು ನೀಡಬೇಕು. ಹೆಚ್ಚು ಪುಸ್ತಕಗಳು ಓದಿದಂತೆ ಹೆಚ್ಚು ಸಂಸ್ಕಾರ ಬೆಳೆಯುತ್ತದೆ. ಈ ನಿಟ್ಟಿನಲ್ಲಿ ಪ್ರಾಧಿಕಾರ ರಾಜ್ಯದ ಎಲ್ಲ ಕಡೆ ಈ ಅಭಿಯಾನವನ್ನು ನಡೆಸಲಾಗುತ್ತಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕಲಾ ಸಂಘಟಕ ನಾಗರಾಜಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News