ಟಿಪ್ಪು ಜಯಂತಿ ಆಚರಣೆ ತೀರ್ಮಾನಕ್ಕೆ ಸಮ್ಮಿಶ್ರ ಸರಕಾರ ಬದ್ಧವಾಗಿರಲಿ: ದೊರೆಸ್ವಾಮಿ

Update: 2018-11-11 15:08 GMT

ಬೆಂಗಳೂರು, ನ.11: ಒಂದೇ ಪಕ್ಷ ಅಥವಾ ಸಮ್ಮಿಶ್ರ, ಯಾವುದೇ ಸರಕಾರ ಆಗಿರಲಿ. ಟಿಪ್ಪು ಜಯಂತಿ ಆಚರಣೆ ವಿಚಾರದಲ್ಲಿ ಒಂದು ತೀರ್ಮಾನ ತೆಗೆದುಕೊಂಡರೆ ಅದಕ್ಕೆ ಬದ್ಧರಾಗಬೇಕು ಎಂದು ಸ್ವಾತಂತ್ರ ಹೋರಾಟಗಾರ ಎಚ್.ಎಸ್. ದೊರಸ್ವಾಮಿ ತಿಳಿಸಿದ್ದಾರೆ.

ರವಿವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ದಿಶಾ ಚಾರಿಟೇಬಲ್ ಟ್ರಸ್ಟ್ ಹಾಗೂ ನವ್ಯ ನಾಟ್ಯ ಸಂಗಮ ಜಂಟಿಯಾಗಿ ಆಯೋಜಿಸಿದ್ದ ‘ಕನ್ನಡ ನುಡಿ ಹಬ್ಬ’ ಹಾಗೂ ‘ಟಿಪ್ಪು ಸುಲ್ತಾನ್ ಪ್ರಶಸ್ತಿ ಪ್ರದಾನ’ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಯಾರೇ ವಿರೋಧ ಮಾಡಿದರೂ ಟಿಪ್ಪು ಜಯಂತಿ ಆಚರಿಸಿಯೇ ಸಿದ್ಧ ಎಂದು ಸರಕಾರ ಹೇಳಿತ್ತು. ಆದರೆ, ಕಾರ್ಯಕ್ರಮದಲ್ಲಿ ಅವರು ಬಂದರೆ, ಇವರು ಬಂದಿಲ್ಲ, ಇವರು ಹೋದರೆ, ಅವರು ವಿರೋಧ ಮಾಡಿದರು. ಈ ನಡವಳಿಕೆ ಜಯಂತಿ ಆಚರಿಸಿದ ಮಹನೀಯರಿಗೆ ಅಪಚಾರ ಮಾಡಿದಂತೆ. ಯಾರ ಪ್ರತಿಷ್ಠೆಗೆ ಈ ರೀತಿ ಮಾಡಿದರು ಗೊತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಒಂದೇ ಪಕ್ಷ ಅಥವಾ ಸಮ್ಮಿಶ್ರ. ಯಾವುದೇ ಸರಕಾರ ಆಗಿರಲಿ. ಜಯಂತಿಗಳ ಆಚರಣೆ ವಿಚಾರದಲ್ಲಿ ಒಂದು ತೀರ್ಮಾನ ತೆಗೆದುಕೊಂಡರೆ ಅದಕ್ಕೆ ಬದ್ಧರಾಗಬೇಕು. ಎಲ್ಲ ಮಂತ್ರಿ, ಶಾಸಕರು ಒಟ್ಟಾಗಿ ಮಾರ್ಯದೆ, ಘನತೆಯಿಂದ ನಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು.

ಈಗಾಗಲೇ ರಾಜ್ಯ ಸರಕಾರದಿಂದ 13 ಜಯಂತಿಗಳನ್ನು ಆಚರಿಸಲಾಗುತ್ತಿದೆ, ಇನ್ನೂ 25 ಜನಾಂಗಗಳು ತಮ್ಮ ಸಮುದಾಯದ ಮಹನೀಯರ ಜಯಂತಿಗಳನ್ನು ಸರಕಾರದಿಂದ ಆಚರಿಸಿ, ಸರಕಾರಿ ರಜೆ ಘೋಷಿಸಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಹೀಗೆಯೇ ಆದರೆ ವರ್ಷದಲ್ಲಿ 100 ದಿನ ಸರಕಾರಿ ರಜೆ ಕೊಡಬೇಕಾದೀತು ಎಂದು ದೊರೆಸ್ವಾಮಿ ಎಚ್ಚರಿಸಿದರು.

ಕಾರ್ಯಕ್ರಮದಲ್ಲಿ ಮೇಯರ್ ಗಂಗಾಂಬಿಕಾ ಮಲ್ಲಿಕಾರ್ಜುನ್, ವಿಧಾನಪರಿಷತ್ ಸದಸ್ಯ ಎಂ.ಸಿ.ವೇಣುಗೋಪಾಲ್, ಶಾಸಕಿ ಸೌಮ್ಯಾ ರೆಡ್ಡಿ, ಮಾಜಿ ಸಂಸದ ಸಿ. ನಾರಾಯಣಸ್ವಾಮಿ, ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ವೈ. ಸಯೀದ್ ಅಹ್ಮದ್, ದಿಶಾ ಚಾರಿಟಟಬಲ್ ಟ್ರಸ್ಟ್ ಅಧ್ಯಕ್ಷ ಇರ್ಷಾದ್ ಅಹ್ಮದ್ ಶೇಕ್, ನವ ನಾಟ್ಯ ಸಂಗಮದ ಡಿ. ಶ್ರೀನಾಥ್ ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News