ಕಸಾಪದಿಂದ ಆಧುನಿಕ ದಲಿತ ಸಾಹಿತ್ಯ ಸಂಪುಟ ಪ್ರಕಟ: 25 ಲಕ್ಷ ರೂ. ವೆಚ್ಚದಲ್ಲಿ ಮುದ್ರಣ

Update: 2018-11-11 17:01 GMT

ಬೆಂಗಳೂರು, ನ.11: ದಲಿತ ಸಾಹಿತ್ಯದ ಕುರಿತಾದ ಸಮಗ್ರ ಸಂಪುಟವನ್ನು ‘ಆಧುನಿಕ ದಲಿತ ಸಾಹಿತ್ಯ ಸಂಪುಟ’ಗಳು ಎಂಬ ಹೆಸರಿನಲ್ಲಿ ಕನ್ನಡ ಸಾಹಿತ್ಯ ಪ್ರಕಟಿಸಲು ಮುಂದಾಗಿದೆ. ಸ್ವಾತಂತ್ರ ಭಾರತದ ನಂತರ ದೇಶದಲ್ಲಿ ದಲಿತ ಸಾಹಿತ್ಯದಲ್ಲಿ ಉಂಟಾದ ಬದಲಾವಣೆಯನ್ನು ಈ ಸಂಪುಟ ಕಟ್ಟಿಕೊಡಲಿದೆ. 

ಸುಮಾರು ಎಂಟು ಸಂಪುಟಗಳಲ್ಲಿ ಪ್ರಕಟಗೊಳ್ಳಲಿರುವ ಈ ಸಂಪುಟವು ಸಂಸ್ಕೃತ ಚಿಂತಕ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ಅವರ ಮಾರ್ಗದರ್ಶನದಲ್ಲಿ ಪ್ರಕಟವಾಗಲಿದೆ. ಸಂಪುಟದಲ್ಲಿ ಪ್ರಕಟವಾಗುವ ‘ಕಾವ್ಯ ಸಂಪಾದನೆ’ ಜವಾಬ್ದಾರಿ ಮೂಡ್ನಕೂಡು ಚಿನ್ನಸ್ವಾಮಿ ಅವರಿಗೆ, ‘ಜಾನಪದ’ಕ್ಕೆ ಸಂಬಂಧಿಸಿದ ವಿಷಯ ಸಂಗ್ರಹಣೆಯ ಹೊಣೆ ಕಲಬುರ್ಗಿ ವಿವಿಯ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಚ್.ಟಿ.ಕೋಟೆ ಅವರಿಗೆ, ‘ವೈಚಾರಿಕೆ ಬರಹ’ಕ್ಕೆ ಸಂಬಂಧಿಸಿದ ವಿಷಯ ಸಂಗ್ರಹಣೆ ಜವಾಬ್ದಾರಿ ಡಾ.ಬಿ.ಎಂ.ಪುಟ್ಟಯ್ಯಗೆ ವಹಿಸಲಾಗಿದೆ. ಆತ್ಮಕತನಗಳ’ ಕುರಿತು ಅರ್ಜುನ್ ಗೊಳಸಂಗಿ ಹಾಗೂ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ದಲಿತ ಕನ್ನಡ ಸಂಶೋಧನೆ’ ಕುರಿತು ಸಂಪುಟದಲ್ಲಿ ದಾಖಲಿಸಲಿದ್ದಾರೆ.

ದಲಿತ ಸಾಹಿತಿಗಳ ಬರಹಗಳ ಮೇಲೆ ಸಮಾಜವಾದಿ ಚಿಂತಕ ರಾಮ ಮನೋಹರ ಲೋಹಿಯಾ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪ್ರಭಾವ. ಕಥೆ, ಕವಿತೆ, ನಾಟಕ, ಪ್ರಬಂಧ, ಆತ್ಮಕಥೆ, ವಿಮರ್ಶೆ ಮತ್ತು ಸಂಶೋಧನೆಯ ಪ್ರಕಾರಗಳಲ್ಲಿ ದಲಿತ ಲೇಖಕರು ಹೇಗೆ ತೊಡಗಿಸಿಕೊಂಡಿದ್ದಾರೆ, ಅವರ ಆಕಾಂಕ್ಷೆಗಳು ಏನಿದ್ದವು, ಅಕ್ಷರ ಕಲಿತ ಮೇಲೆ ಅವರಲ್ಲಿ ಉಂಟಾದ ಭಾವನೆ ಹೇಗಿತ್ತು,ಪ್ರಸ್ತುತ ಅವರು ಯಾವ ರೀತಿಯ ಬರವಣಿಗೆಯಲ್ಲಿ ತೊಡಗಿಕೊಂಡಿದ್ದಾರೆ ಎಂಬುವುದರ ಕುರಿತ ಸಮಗ್ರ ನೋಟವನ್ನು ಸಂಪುಟ ಕಟ್ಟಿಕೊಡಲಿದೆ.

25 ಲಕ್ಷ ಹಣ ಖರ್ಚು: ಸಾಹಿತ್ಯ ಪರಿಷತ್ತಿನಿಂದ ಸಂಶೋಧನಾ ವಿದ್ಯಾರ್ಥಿಗಳಿಗೆ ಉಪಯೋಗವಾಗಲಿ ಎಂಬ ಉದ್ದೇಶದಿಂದ ಸಮಗ್ರ ಸಂಪುಟ ತರಲು ಮುಂದಾಗಿದೆ. ದಲಿತ ಸಾಹಿತ್ಯಕ್ಕೆ ಸಂಬಂಧಿಸಿದ ಲೇಖನಗಳು, ಕೃತಿಗಳು ಒಂದು ಕಡೆ ಸಿಗಬೇಕು ಎಂಬ ಸದುದ್ದೇಶದಿಂದ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಸಂಪುಟವನ್ನು ಸುಮಾರು 25 ಲಕ್ಷ ರೂ.ಗಳ ಖರ್ಚಿನಲ್ಲಿ ರೂಪಿಸಲಾಗುತ್ತಿದೆ ಎಂದು ಕಸಾಪ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಡಿಸೆಂಬರ್‌ನಲ್ಲಿ ಮುದ್ರಣ ಆರಂಭ?: ಸಂಪುಟಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲಿಯೇ ಮಲ್ಲೇಪುರಂ ಜಿ.ವೆಂಕಟೇಶ್ ಅವರ ನೇತೃತ್ವದಲ್ಲಿ ಸಭೆ ನಡೆಯಲಿದೆ. ಅಲ್ಲಿ ವಿಷಯ ಜೋಡಣೆ ಹಾಗೂ ಸಮಗ್ರ ಸಂಪುಟದ ರೂಪರೇಷಗಳ ಬಗ್ಗೆ ಚರ್ಚೆ ನಡೆಯಲಿದ್ದು, ಮುಂದಿನ ತಿಂಗಳು ಮುದ್ರಣ ಕಾರ್ಯ ಆರಂಭವಾಗುವ ನಿರೀಕ್ಷೆಯಿದೆ.

ದಕ್ಷಿಣ ಭಾರತದಲ್ಲಿ ಮೊದಲ ಪ್ರಯತ್ನ: ದಲಿತ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಚರಿತ್ರೆ ದಾಖಲು ಮಾಡಲು ಇದು ಮೂಲ ಆಕಾರ ಗ್ರಂಥವಾಗಲಿದೆ. ದಲಿತ ಸಾಹಿತ್ಯದ ಬದಲಾವಣೆ ಕುರಿತಂತೆ ದಕ್ಷಿಣ ಭಾರತದಲ್ಲಿ ಇಂತಹ ಪ್ರಯತ್ನ ನಡೆದಿಲ್ಲ. ಈ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಸಂಪುಟ ಹೊರತರುವ ಕುರಿತು ಸಲಹೆ ನೀಡಲಾಗಿದೆ ಎಂದು ಮಲ್ಲೇಪುರಂ ಜಿ.ವೆಂಕಟೇಶ್ ಅಭಿಪ್ರಾಯಪಟ್ಟಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತಿನಿಂದ ಮೊದಲ ಬಾರಿಗೆ ದಲಿತ ಸಾಹಿತ್ಯಕ್ಕೆ ಸಂಬಂಧಿಸಿದಂತೆ ವಿಭಿನ್ನ ಪ್ರಯತ್ನ ಕೈಗೊಳ್ಳಲಾಗುತ್ತಿದ್ದು, ಮುಂದಿನ ವರ್ಷದ ಮಾರ್ಚ್‌ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

- ಡಾ.ಮನುಬಳಿಗಾರ್, ಕಸಾಪ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News