ಉತ್ತರ ತಮಿಳುನಾಡು, ದಕ್ಷಿಣ ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ ‘ಗಜ’ ಚಂಡಮಾರುತ

Update: 2018-11-11 17:51 GMT

ಹೊಸದಿಲ್ಲಿ, ನ. 11: ಬಂಗಾಳ ಕೊಲ್ಲಿಯ ಮೇಲೆ ಬೀಸುತ್ತಿರುವ ಚಂಡ ಮಾರುತ ‘ಗಜ’ ಮುಂದಿನ 24 ಗಂಟೆಯಲ್ಲಿ ತೀವ್ರಗೊಳ್ಳುವ ಸಾಧ್ಯತೆ ಇದೆ. ಈ ಚಂಡಮಾರುತ ಸೋಮವಾರ ಸಂಜೆ ಉತ್ತರ ತಮಿಳುನಾಡು ಹಾಗೂ ದಕ್ಷಿಣ ಆಂಧ್ರಪ್ರದೇಶದ ಕರಾವಳಿಗೆ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

 ಆಗ್ನೇಯ ಹಾಗೂ ಸಮೀಪದ ಕೇಂದ್ರ ಬಂಗಾಳ ಕೊಲ್ಲಿ ಮೇಲಿನ ವಾಯು ಭಾರ ಕುಸಿತ ಕಳೆದ 6 ಗಂಟೆಗಳಿಂದ ಗಂಟೆಗೆ 12 ಕಿ.ಮೀ. ವೇಗದಲ್ಲಿ ಪಶ್ಚಿಮ-ವಾಯುವ್ಯದತ್ತ ಸಾಗಿತು ಹಾಗೂ ಚಂಡಮಾರುತ ‘ಗಜ’ವಾಗಿ ಪರಿವರ್ತನೆಗೊಂಡಿತು. ಇದು ಪೂರ್ವ-ಕೇಂದ್ರ, ಸಮೀಪದ ಪಶ್ಚಿಮ-ಕೇಂದ್ರ ಹಾಗೂ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಕೇಂದ್ರೀಕೃತವಾಗಿತ್ತು ಎಂದು ಹವಾಮಾನ ಇಲಾಖೆ ರವಿವಾರ ತಿಳಿಸಿದೆ.

ಈ ಚಂಡಮಾರುತ ಮುಂದಿನ 24 ಗಂಟೆಯಲ್ಲಿ ತೀವ್ರ ಚಂಡ ಮಾರುತವಾಗಿ ಬದಲಾಗಲಿದೆ. ಮುಂದಿನ 36 ಗಂಟೆಗಳಲ್ಲಿ ಪಶ್ಚಿಮ ವಾಯುವ್ಯ ದಿಕ್ಕಿನತ್ತ ಸಾಗಲಿದೆ ಹಾಗೂ ಪಶ್ಚಿಮ ನೈಋತ್ಯ ದಿಕ್ಕಿನಲ್ಲಿ ಉತ್ತರ ತಮಿಳುನಾಡು ಹಾಗೂ ದಕ್ಷಿಣ ಆಂಧ್ರಪ್ರದೇಶದತ್ತ 48 ಗಂಟೆಗಳಲ್ಲಿ ಸಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

 ಬಂಗಾಳ ಕೊಲ್ಲಿಯ ಆಗ್ನೇಯದಲ್ಲಿ ಸೋಮವಾರ ಮೀನುಗಾರಿಕೆ ನಡೆಸದಂತೆ ತಮಿಳುನಾಡಿನ ಮೀನುಗಾರಿಕೆ ಇಲಾಖೆ ಮೀನುಗಾರರಿಗೆ ಎಚ್ಚರಿಕೆ ನೀಡಿದೆ. ಮುಂದಿನ 24 ಗಂಟೆಗಳ ಕಾಲ ಮೀನುಗಾರಿಕೆ ನಡೆಸದಂತೆ ಆಂಧ್ರಪ್ರದೇಶದ ಮೀನುಗಾರರಿಗೆ ಆಂಧ್ರಪ್ರದೇಶದ ಮೀನುಗಾರಿಕಾ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News