ಬಿಜೆಪಿಯ ಹಿರಿಯ ನಾಯಕ, ಕೇಂದ್ರ ಸಚಿವ ಅನಂತ್ ಕುಮಾರ್ ನಿಧನ

Update: 2018-11-12 14:25 GMT

ಬೆಂಗಳೂರು, ನ.12: ಬಹು ಅಂಗಾಂಗಗಳ ವೈಫಲ್ಯದಿಂದ ಬಳಲುತ್ತಿದ್ದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ, ಸಂಸದೀಯ ವ್ಯವಹಾರಗಳ ಸಚಿವ ಎಚ್.ಎನ್.ಅನಂತ್‌ಕುಮಾರ್ ಇಂದು ಮುಂಜಾನೆ ಇಹಲೋಕ ತ್ಯಜಿಸಿದ್ದಾರೆ.

ಮೂರು ತಿಂಗಳಿನಿಂದ ಅನಾರೋಗ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅನಂತ್‌ ಕುಮಾರ್, ವಿದೇಶದಲ್ಲಿ ಚಿಕಿತ್ಸೆ ಪಡೆದು ಹಿಂದಿರುಗಿದ ಬಳಿಕ ಕಳೆದ ಇಪ್ಪತ್ತು ದಿನಗಳಿಂದ ನಗರದ ಶಂಕರ ಕ್ಯಾನ್ಸರ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮುಂಜಾನೆ 3.30ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ಖಚಿತಪಡಿಸಿದರು.

ಅನಂತ್‌ ಕುಮಾರ್ ಪತ್ನಿ, ಇಬ್ಬರು ಹೆಣ್ಣು ಮಕ್ಕಳು ಹಾಗೂ ಬಂಧು ಬಳಗ, ಅಪಾರವಾದ ಬೆಂಬಲಿಗರನ್ನು ಅಗಲಿದ್ದಾರೆ. ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ ಅನಂತ್ ಕುಮಾರ್ ಪಾರ್ಥೀವ ಶರೀರವನ್ನ ಅವರ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕಿಡಲಾಗಿತ್ತು. ನ.13 ರಂದು ನಗರದ ಚಾಮರಾಜಪೇಟೆಯಲ್ಲಿರುವ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದ್ದು, ಅದಕ್ಕೂ ಮೊದಲು ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಗೆ ಅವರ ಪಾರ್ಥೀವ ಶರೀರವನ್ನು ಕೊಂಡೊಯ್ದು ಅಂತಿಮ ದರ್ಶನ ಸಲ್ಲಿಸಿ ಅನಂತರ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. 

ಸದಾ ರಾಜಕೀಯ ಚಟುವಟಿಕೆಯಿಂದ ಕೂಡಿರುತ್ತಿದ್ದ ಅನಂತ್‌ ಕುಮಾರ್ ನಿವಾಸದಲ್ಲಿಂದು ಮುಡುಗಟ್ಟಿದ ಮೌನ ಆವರಿಸಿತ್ತು. ಅವರ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಲು ಬಂದವರು ಮೌನಕ್ಕೆ ಶರಣಾಗಿದ್ದರು. ಹಲವು ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಅವರ ನಿವಾಸಕ್ಕೆ ಬಂದು, ಸಂತಸದಿಂದ ಹೊರಬರುತ್ತಿದ್ದ ಸಾರ್ವಜನಿಕರಿಂದ ಪಾರ್ಥೀವ ಶರೀರಕ್ಕೆ ನಮನ ಸಲ್ಲಿಸಿ ಭಾರವಾದ ಮನಸ್ಸಿನಿಂದ ಹೊರಬರುತ್ತಿದ್ದರು.

ರಾಜಕೀಯದಲ್ಲಿ ಯಾರೊಂದಿಗೂ ವಿರೋಧವನ್ನು ಕಟ್ಟಿಕೊಳ್ಳದೇ ಸಂಘಟನೆಗೆ ಹೊಸ ಶಕ್ತಿ ತುಂಬಿದ ವಿಶಿಷ್ಟ ರಾಜಕೀಯ ಶೈಲಿಯೊಂದಿಗೆ ಸಾರ್ವಜನಿಕ ಬದುಕಿನಲ್ಲಿ ಬಿಜೆಪಿಯಲ್ಲಿ ಪ್ರಭಾವಿ ನಾಯಕರಾಗಿ ಬೆಳೆದಿದ್ದರು. ಹುಬ್ಬಳ್ಳಿ ಮೂಲದವರಾಗಿದ್ದರೂ, ಬಹುಬೇಗ ಬೆಂಗಳೂರಿನ ರಾಜಕಾರಣದಲ್ಲಿ ಜನರಿಗೆ ಹತ್ತಿರವಾಗಿ ಎತ್ತರಕ್ಕೆ ಬೆಳೆದವರಾಗಿದ್ದರು. ವಿಶ್ವಸಂಸ್ಥೆಯಲ್ಲಿ ಕನ್ನಡದಲ್ಲಿಯೇ ಮಾತನಾಡಿ ಇತಿಹಾಸದ ಪುಟಗಳಲ್ಲಿ ದಾಖಲಿಸಿದ್ದರು.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಆರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಅವರು, ಎನ್‌ಡಿಎ ಸರಕಾರದಲ್ಲಿ ಕೇಂದ್ರ ಸಚಿವರಾಗಿದ್ದರು. ಬಾಲ್ಯದಲ್ಲಿಯೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಪ್ರೇರಣೆಗೊಂಡು ಆರೆಸ್ಸೆಸ್ ಶಾಖೆಗಳಿಗೆ ಭೇಟಿ ನೀಡುತ್ತಿದ್ದ ಅವರು, ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಅಪಾರವಾದ ಎತ್ತರಕ್ಕೆ ಬೆಳೆದಿದ್ದರು. 

ಮೂರು ದಿನ ಶೋಕಾಚರಣೆ

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತ್‌ಕುಮಾರ್ ನಿಧನದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ರಾಜ್ಯ ಸರಕಾರ ಮೂರು ದಿನ ಶೋಕಾಚರಣೆ ಘೋಷಣೆ ಮಾಡಿದ್ದು, ಸೋಮವಾರ ಎಲ್ಲ ಸರಕಾರಿ ಶಾಲಾ-ಕಾಲೇಜು ಹಾಗೂ ಕಚೇರಿಗಳಿಗೆ ರಜೆಯನ್ನು ಘೋಷಿಸಲಾಗಿತ್ತು. ಎಲ್ಲ ಸರಕಾರಿ ಕಚೇರಿಗಳ ಮೇಲೆ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಲಾಗಿತ್ತು

ಪರೀಕ್ಷೆ ಮುಂದೂಡಿಕೆ

ಅನಂತಕುಮಾರ್ ನಿಧನ ಹಿನ್ನೆಲೆಯಲ್ಲಿ ಬೆಂಗಳೂರು ವಿವಿ ಪರೀಕ್ಷೆಗಳನ್ನ ಮುಂದೂಡಿಕೆ ಮಾಡಲಾಗಿದೆ. ಯುಜಿ ಪ್ರಾಯೋಗಿಕ ಪರೀಕ್ಷೆ ಹಾಗೂ ಎಂಇ ಕೋರ್ಸ್ ಪರೀಕ್ಷೆಗಳನ್ನ ಮುಂದೂಡಿಕೆ ಮಾಡಲಾಗಿದೆ. ಮುಂದೂಡಿಕೆ ಮಾಡಲಾಗಿರುವ ಪ್ರಾಯೋಗಿಕ ಪರೀಕ್ಷಾ ದಿನಾಂಕವನ್ನ ಸದ್ಯದಲ್ಲೇ ಪ್ರಕಟ ಮಾಡಲಾಗುವುದು ಎಂದು ವಿವಿ ಪರೀಕ್ಷಾ ವಿಭಾಗದ ರಿಜಿಸ್ಟ್ರಾರ್ ಪ್ರೊ.ಶಿವರಾಜು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News