ಮೋದಿ ಸರ್ಕಾರ ಒಂದು ವರ್ಷದಲ್ಲಿ ಎಷ್ಟು ನಗರಗಳ ಹೆಸರು ಬದಲಿಸಿದೆ ಗೊತ್ತೇ ?

Update: 2018-11-12 04:34 GMT

ಹೊಸದಿಲ್ಲಿ, ನ. 12: ಅಲಹಾಬಾದ್ ಮತ್ತು ಫೈಝಾಬಾದ್ ನಗರಗಳ ಹೆಸರು ಬದಲಿಸಿದ ಮಾದರಿಯಲ್ಲೇ ಪಶ್ಚಿಮ ಬಂಗಾಳವನ್ನು "ಬಾಂಗ್ಲಾ" ಎಂದು ಮರುನಾಮಕರಣ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ರಾಜ್ಯವನ್ನು ಮರುನಾಮಕರಣ ಮಾಡುವ ಸಂಬಂಧದ ಪ್ರಸ್ತಾವ ಕೇಂದ್ರದ ಮುಂದಿದೆ ಎಂದು ಉನ್ನತ ಮೂಲಗಳು ಹೇಳಿವೆ.

ದೇಶಾದ್ಯಂತ ಕಳೆದ ಒಂದು ವರ್ಷದಲ್ಲಿ ಕೇಂದ್ರ ಸರ್ಕಾರ 25 ಪಟ್ಟಣ ಹಾಗೂ ಗ್ರಾಮಗಳ ಹೆಸರು ಬದಲಾವಣೆಗೆ ಅನುಮತಿ ನೀಡಿದೆ. ಬಾಕಿ ಇರುವ ಪ್ರಸ್ತಾವನೆಗಳ ಪೈಕಿ ಪಶ್ಚಿಮ ಬಂಗಾಳದ ಹೆಸರು ಬದಲಾವಣೆಯ ಪ್ರಮುಖವಾಗಿದೆ ಎಂದು ಮೂಲಗಳು ತಿಳಿಸಿವೆ.

ಸರ್ಕಾರದ ಹಲವು ಏಜೆನ್ಸಿ, ಇಲಾಖೆಗಳು ಹಾಗೂ ಸಚಿವಾಲಯಗಳನ್ನು ಒಳಗೊಂಡ ಸುಧೀರ್ಘ ಪ್ರಕ್ರಿಯೆ ಬಳಿಕ ಗೃಹ ವ್ಯವಹಾರಗಳ ಸಚಿವಾಲಯ ಒಟ್ಟು 25 ಗ್ರಾಮಗಳು ಹಾಗೂ ಪಟ್ಟಣಗಳ ಹೆಸರು ಬದಲಾವಣೆಗೆ ಒಪ್ಪಿಗೆ ನೀಡಿದೆ. ಅಲಹಾಬಾದ್ ಹೆಸರನ್ನು ಪ್ರಯಾಗ್‌ರಾಜ್ ಎಂದೂ, ಫೈಝಾಬಾದ್ ಹೆಸರನ್ನು ಅಯೋಧ್ಯೆ ಎಂದೂ ಮರುನಾಮಕರಣ ಮಾಡುವ ಪ್ರಸ್ತಾವವನ್ನು ಉತ್ತರ ಪ್ರದೇಶ ಸರ್ಕಾರ ಸಲ್ಲಿಸಿತ್ತು.

ಕೇಂದ್ರದ ಒಪ್ಪಿಗೆ ಪಡೆದ ಇತರ ಪ್ರಮುಖ ಪ್ರಸ್ತಾವಗಳೆಂದರೆ, ಆಂಧ್ರಪ್ರದೇಶದ ಗೋದಾವರಿ ಜಿಲ್ಲೆ ರಾಜಮುಂಡ್ರಿಯನ್ನು ರಾಜಮಹೇಂದ್ರಾವರಂ, ಒಡಿಶಾದ ಭದ್ರಕ್ ಜಿಲ್ಲೆಯ ಔಟರ್‌ವ್ಹೀಲರ್ ಪಟ್ಟಣವನ್ನು ಎಪಿಜೆ ಅಬ್ದುಲ್ ಕಲಾಂ ದ್ವೀಪ, ಕೇರಳದ ಮಲಪ್ಪುರ ಅರಿಕ್ಕೋಡ್ ಪಟ್ಟಣವನ್ನು ಅರೀಕೊಡೆ, ಹರ್ಯಾಣದ ಜಿಂದ್ ಜಿಲ್ಲೆಯ ಪಂಡು-ಪಿಂಡಾರ ನಗರವನ್ನು ಪಿಂಡಾರಿ, ನಾಗಲ್ಯಾಂಡ್‌ನ ಸಂಫುರ್ ಪಟ್ಟಣವನ್ನು ಸಂಪುರೆ ಎಂದು ಮರುನಾಮಕರಣ ಮಾಡುವುದು ಸೇರಿವೆ.

ಕಳೆದ ವರ್ಷ ಕೇಂದ್ರ ಸರ್ಕಾರ ಐತಿಹಾಸಿಕ ಮೊಘಲ್‌ಸರಾಯ್ ರೈಲು ನಿಲ್ದಾಣಕ್ಕೆ ದೀನದಯಾಳ್ ಉಪಾಧ್ಯಾಯ ರೈಲು ನಿಲ್ದಾಣ ಎಂದು ಮರುನಾಮಕರಣ ಮಾಡಿತ್ತು. ಜತೆಗೆ ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಸ್‌ಗೆ ಮಹಾರಾಜ ಛತ್ರಪತಿ ಶಿವಾಜಿ ಟರ್ಮಿನಸ್ ಎಂದೂ ನಾಮಕರಣ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News