ಚಾಣಾಕ್ಷ ರಾಜಕಾರಣಿ, ಪ್ರಖರ ಆರೆಸೆಸ್ಸಿಗನಾಗಿದ್ದ ಅನಂತ್ ಕುಮಾರ್

Update: 2018-11-12 05:43 GMT

ಬೆಂಗಳೂರು, ನ. 12: ಅನಾರೋಗ್ಯದಿಂದ ಇಂದು ನಿಧನ ಹೊಂದಿದ ಹಿರಿಯ ಬಿಜೆಪಿ ನಾಯಕ ಹಾಗೂ ಕೇಂದ್ರ ಸಚಿವ ಅನಂತ್ ಕುಮಾರ್ ಓರ್ವ ಪ್ರಖರ ಆರೆಸ್ಸೆಸ್ ನಾಯಕರಾಗಿ, ಬೆಂಗಳೂರಿನ 'ಅತ್ಯಂತ ಪ್ರೀತಿಯ' ಸಂಸದನಾಗಿ ತಮ್ಮನ್ನು ಗುರುತಿಸಿಕೊಂಡಿದ್ದವರಾಗಿದ್ದರು. ವಿಶ್ವಸಂಸ್ಥೆಯಲ್ಲಿ ಪ್ರಥಮ ಬಾರಿಗೆ ಕನ್ನಡದಲ್ಲಿಯೇ ಭಾಷಣ ಮಾಡಿದ ಹೆಗ್ಗಳಿಕೆ ಕೂಡ ಅವರದ್ದಾಗಿತ್ತು.

ತಮ್ಮ ರಾಜಕೀಯ ಚಾಣಾಕ್ಷತೆಗೆ ಹೆಸರುವಾಸಿಯಾಗಿದ್ದ ಅವರು ಆರು ಬಾರಿ  ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದರು. ಚಾಣಾಕ್ಷ ರಾಜಕಾರಣಿಯಾಗಿದ್ದ ಅವರು ಕೇಂದ್ರ ಬಿಜೆಪಿ ನಾಯಕರಲ್ಲಿ ಪ್ರಮುಖರಾಗಿದ್ದರಲ್ಲದೆ  ಹಿರಿಯ ನಾಯಕರಾದ ಅಟಲ್ ಬಿಹಾರಿ ವಾಜಪೇಯಿ ಹಾಗೂ ಎಲ್ ಕೆ ಅಡ್ವಾಣಿ ಅವರಿಗೂ ಆತ್ಮೀಯರಾಗಿದ್ದರಲ್ಲದೆ ಈಗಿನ ಪ್ರಧಾನಿ ನರೇಂದ್ರ ಮೋದಿಗೂ ಹತ್ತಿರದವರಾಗಿದ್ದರು.

ಜುಲೈ 22, 1959ರಂದು ಮಧ್ಯಮ ವರ್ಗದ ಬ್ರಾಹ್ಮಣ ಕುಟುಂಬದಲ್ಲಿ ಬೆಂಗಳೂರಿನಲ್ಲಿ ಜನಿಸಿದ್ದ ಅನಂತ್ ಕುಮಾರ್ ಅವರ ತಂದೆ ನಾರಾಯಣ ಶಾಸ್ತ್ರಿ ರೈಲ್ವೆ ಉದ್ಯೋಗಿಯಾಗಿದ್ದರು. ಪದವೀಧರೆಯಾಗಿದ್ದ ಅವರ ತಾಯಿ ಗಿರಿಜಾ ಶಾಸ್ತ್ರಿ ಅವರೇ ತಮ್ಮ ಪುತ್ರನಿಗೆ ಮೊದಲ ಗುರುವಾಗಿದ್ದರು. ಬಿಎ ಮತ್ತು ಕಾನೂನು ಪದವೀಧರರಾಗಿದ್ದ ಅನಂತ್ ಕುಮಾರ್ ಅವರು ವಿದ್ಯಾರ್ಥಿ ದಿನಗಳಲ್ಲಿಯೇ ಸಂಘ ಪರಿವಾರದ ವಿದ್ಯಾರ್ಥಿ ಸಂಘಟನೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಪರಿಷತ್ತಿನ ರಾಜ್ಯ ಕಾರ್ಯದರ್ಶಿ ಹಾಗೂ ರಾಷ್ಟ್ರೀಯ ಕಾರ್ಯದರ್ಶಿ ಹುದ್ದೆ ಸಹಿತ ವಿವಿಧ ಹುದ್ದೆಗಳಲ್ಲಿ ಅವರು ಕಾರ್ಯ ನಿರ್ವಹಿಸಿದ್ದರು.

ತುರ್ತು ಪರಿಸ್ಥಿತಿಯ ಸಂದರ್ಭ ಆಗಿನ ಇಂದಿರಾ ಗಾಂಧಿ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿ 30 ದಿನಗಳ ಜೈಲು ಶಿಕ್ಷೆಯನ್ನೂ ಅವರು ಅನುಭವಿಸಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಜತೆ ನಿಕಟ ಸಂಬಂಧ ಹೊಂದಿದ್ದ ಅನಂತ ಕುಮಾರ್ 1987ರಲ್ಲಿ ಬಿಜೆಪಿ ಸೇರಿ ಮುಂದೆ ಪಕ್ಷದ ರಾಜ್ಯ ಕಾರ್ಯದರ್ಶಿ, ಯುವ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಹಾಗೂ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.

ಕರ್ನಾಟಕದಲ್ಲಿ ಬಿಜೆಪಿಯ ಬಲವರ್ಧನೆಯಲ್ಲಿ ರಾಜ್ಯಾಧ್ಯಕ್ಷ ಬಿ ಎಸ್ ಯಡ್ಡಿಯೂರಪ್ಪ ಸಹಿತ ಹಲವು ನಾಯಕರಂತೆ ಅನಂತ್ ಕುಮಾರ್ ಕೂಡ ಪ್ರಮುಖ ಪಾತ್ರ ವಹಿಸಿದ್ದರಲ್ಲದೆ ರಾಜ್ಯದಲ್ಲಿ ಪಕ್ಷದ ಪ್ರಥಮ ಸರಕಾರ ಸ್ಥಾಪನೆಯಲ್ಲೂ ಅವರ ಪಾತ್ರ ದೊಡ್ಡದಾಗಿತ್ತು. ಮುಂದೆ 1996ರಲ್ಲಿ ಮೊದಲ ಬಾರಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಗೆದ್ದು ಸಂಸತ್ ಪ್ರವೇಶಿಸಿದ ಅವರು ಈ ಕ್ಷೇತ್ರದಿಂದಲೇ ಸತತ ಆರು ಆವಧಿಗೆ ಆಯ್ಕೆಯಾಗಿದ್ದರು.

ವಾಜಪೇಯಿ ಸಂಪುಟದಲ್ಲಿ ಅತ್ಯಂತ ಕಿರಿಯ ಸದಸ್ಯರಾಗಿದ್ದ ಅನಂತ್ ಕುಮಾರ್ ಕೇಂದ್ರ ನಾಗರಿಕ ವಿಮಾನಯಾನ, ಪ್ರವಾಸೋದ್ಯಮ, ಕ್ರೀಡೆ, ಯುವಜನ ವ್ಯವಹಾರ, ಸಂಸ್ಕೃತಿ, ನಗರಾಡಳಿತ ಮತ್ತು ಬಡತನ ನಿರ್ಮಾಲನೆ ಖಾತೆಗಳನ್ನು ನಿರ್ವಹಿಸಿದ್ದರು. ಮೋದಿ ಸರಕಾರದಲ್ಲಿ ಅವರು ಸಂಸದೀಯ ವ್ಯವಹಾರಗಳ ಹಾಗೂ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾಗಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಅವರು ನಂದನ್ ನಿಲೇಕಣಿ ಅವರನ್ನು ಸೋಲಿಸಿದ್ದರು.

ಕರಿಬೇವು ಲೇಪಿತ ಯುರಿಯಾ ಉತ್ಪಾದನೆ ಹಾಗೂ ಜನ ಔಷಧಿ ಕೇಂದ್ರಗಳ ಸ್ಥಾಪನೆಯ ಹಿಂದೆ ಅವರು ಪ್ರಮುಖ ಪಾತ್ರ ವಹಿಸಿದ್ದರು. ಕರ್ನಾಟಕ ಬಿಜೆಪಿಯ ದಿಲ್ಲಿ ಮುಖವೆಂದೂ ಅವರು ಬಣ್ಣಿಸಲ್ಪಡುತ್ತಿದ್ದರು.

ಅನಂತ್ ಕುಮಾರ್ ಅವರು ತಮ್ಮ ಪತ್ನಿ ಡಾ. ತೇಜಸ್ವಿನಿ ಹಾಗೂ ಇಬ್ಬರು ಪುತ್ರಿಯರಾದ ಐಶ್ವರ್ಯ ಮತ್ತು ವಿಜೇತ ಅವರನ್ನಗಲಿದ್ದಾರೆ. ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಎನ್‍ಜಿಒ ಅದಮ್ಯ ಚೇತನದ ಮುಖ್ಯ ಪೋಷಕರಾಗಿ ಅನಂತ್ ಕುಮಾರ್ ಸೇವೆ ಸಲ್ಲಿಸುತ್ತಿದ್ದರು. ತಮ್ಮ ತಾಯಿ ಗಿರಿಜಾ ಅವರ ಸವಿನೆನಪಿಗಾಗಿ ಅವರು ಈ ಸಂಘಟನೆಯನ್ನು ಸ್ಥಾಪಿಸಿ ತಮ್ಮ ಪತ್ನಿಯ ಜತೆಗೂಡಿ ಅದನ್ನು ನಡೆಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News