2015 ಪೊಲೀಸ್ ಗೋಲಿಬಾರ್ ಪ್ರಕರಣ : ಪಂಜಾಬ್ ಮಾಜಿ ಮುಖ್ಯಮಂತ್ರಿ ಬಾದಲ್, ಸುಖಬೀರ್, ನಟ ಅಕ್ಷಯ್ ಕುಮಾರ್ ಗೆ ಸಮನ್ಸ್

Update: 2018-11-12 07:19 GMT
ಪ್ರಕಾಶ್ ಸಿಂಗ್ ಬಾದಲ್, ಅಕ್ಷಯ್ ಕುಮಾರ್

ಹೊಸದಿಲ್ಲಿ, ನ. 12: ಸಿಖ್ಖರ ಪವಿತ್ರ ಗ್ರಂಥವಾದ ಗುರು ಗ್ರಂಥ್ ಸಾಹಿಬ್ ಅನ್ನು ಅಪವಿತ್ರಗೊಳಿಸಲಾಗಿದೆ ಎಂದು ಆರೋಪಿಸಿ ಫರೀದ್‍ ಕೋಟ್ ಜಿಲ್ಲೆಯ ಬೆಹ್ಬಲ್ ಕಲನ್ ಗ್ರಾಮದಲ್ಲಿ ಸಿಖ್ ಸಮುದಾಯದವರು ನಡೆಸುತ್ತಿದ್ದ ಪ್ರತಿಭಟನೆ ವೇಳೆ ಪ್ರತಿಭಟನಕಾರರ ಮೇಲೆ ಪೊಲೀಸ್ ಗೋಲಿಬಾರ್ ನಡೆದ 2015ರ ಘಟನೆಯ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು ಪಂಜಾಬ್ ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್, ಅವರ ಪುತ್ರ ಸುಖಬೀರ್ ಸಿಂಗ್ ಹಾಗೂ ನಟ ಅಕ್ಷಯ್ ಕುಮಾರ್ ಅವರಿಗೆ ಸಮನ್ಸ್ ಕಳುಹಿಸಿದೆ.

ಬಾದಲ್ ಅವರನ್ನು ವಿಶೇಷ ತನಿಖಾ ತಂಡದ ಮುಖ್ಯಸ್ಥ ಐಜಿ ಕುನ್ವರ್ ವಿಜಯ್ ಪ್ರತಾಪ್ ಸಿಂಗ್ ಮುಂದೆ ನ. 16ರಂದು ಹಾಜರಾಗಲು ಹೇಳಲಾಗಿದ್ದರೆ, ಸುಖಬೀರ್ ಅವರನ್ನು ನ. 19ರಂದು ಹಾಗೂ ಅಕ್ಷಯ್ ಕುಮಾರ್ ಅವರನ್ನು ನ. 21ರಂದು ಅಮೃತಸರ್ ಸರ್ಕಿಟ್ ಹೌಸ್‍ಗೆ ಆಗಮಿಸುವಂತೆ ಸೂಚಿಸಲಾಗಿದೆ.

ಮೂವರಿಗೂ ಪ್ರತ್ಯೇಕ ಸಮನ್ಸ್ ಕಳುಹಿಸಲಾಗಿದ್ದು ನಮ್ಮ ತನಿಖೆ ನಿಷ್ಪಕ್ಷಪಾತ ಹಾಗೂ ಪಾರದರ್ಶಕವಾಗಿರುವುದು ಎಂದು ಐಜಿ ವಿಜಯ್ ಪ್ರತಾಪ್ ಸಿಂಗ್ ತಿಳಿಸಿದ್ದಾರೆ.

ಕೊಟ್ಕಪುರ ಹಾಗೂ ಬೆಹ್ಬಲ್ ಕಲನ್ ಗ್ರಾಮಗಳಲ್ಲಿ ನಡೆದ ಪೊಲೀಸ್ ಗೋಲಿಬಾರ್ ಪ್ರಕರಣಗಳನ್ನು ವಿಶೇಷ ತನಿಖಾ ತಂಡ ತನಿಖೆ ನಡೆಸುತ್ತಿದ್ದು ಬೆಹ್ಬಲ್ ಕಲನ್ ಗೋಲಿಬಾರ್ ನಲ್ಲಿ ಇಬ್ಬರು ಸಾವನ್ನಪ್ಪಿದ್ದರು.

ಅಕ್ಷಯ್ ಕುಮಾರ್ ಹೆಸರು ಜಸ್ಟಿಸ್ ರಂಜಿತ್ ಸಿಂಗ್ ಆಯೋಗದ ವರದಿಯಲ್ಲೂ ಇತ್ತು. ಡೇರಾ ಸಚ್ಛಾ ಸೌದಾ ಮುಖ್ಯಸ್ಥ ಗುರ್ಮೀತ್ ಸಿಂಗ್‍ನ ಚಿತ್ರ 'ಎಂಎಸ್‍ಜಿ' ಬಿಡುಗಡೆಗೆ ಸಂಬಂಧಿಸಿದಂತೆ ಆತನ ಹಾಗೂ ಪಂಜಾಬ್ ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಸುಖಬೀರ್ ನಡುವಣ ಸಭೆ  ಅಕ್ಷಯ್ ಕುಮಾರ್ ಗೆ ಸೇರಿದ ಮುಂಬೈ ಫ್ಲ್ಯಾಟಿನಲ್ಲಿ ನಡೆದಿತ್ತೆಂದು ಆಯೋಗದ ವರದಿ ತಿಳಿಸಿತ್ತು. ಧರ್ಮ ನಿಂದನೆ ಪ್ರಕರಣದಲ್ಲಿ ಗುರ್ಮೀತ್  ಸಿಂಗ್‍ಗೆ ಕ್ಷಮಾದಾನ ದೊರಕುವ ಮುನ್ನ ಸಭೆ ನಡೆದಿತ್ತಾದರೂ ಅಕ್ಷಯ್ ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದರು.

ವಿಶೇಷ ತನಿಖಾ ತಂಡವು ಈ ಹಿಂದೆ ಎಡಿಜಿಪಿ ಜಿತೇಂದ್ರ ಜೈನ್, ಆಗಿನ ಐಜಿಪಿ ಪರಮ್‍ ರಾಜ್ ಸಿಂಗ್, ಐಜಿಪಿ ಅಮರ್ ಸಿಂಗ್ ಚಹಲ್, ಆಗಿನ ಕೊಟ್ಖಪುರ ಶಾಸಕ ಮಂತರ್ ಸಿಂಗ್ ಬ್ರಾರ್ ಸಹಿತ ಹಲವರ ವಿಚಾರಣೆ ನಡೆಸಿತ್ತು.

ವಿಶೇಷ ತನಿಖಾ ತಂಡವನ್ನು ಈ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ನೇತೃತ್ವದ ಸರಕಾರ ರಚಿಸಿತ್ತು. ಸಿಬಿಐ ಈ ಪ್ರಕರಣದ ತನಿಖೆಯಿಂದ ಹಿಂದೆ ಸರಿದ ನಂತರ ಈ ಕ್ರಮ ಕೈಗೊಳ್ಳಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News