ಕ್ಯಾನ್ಸರ್ ರೋಗಿಗಳ ಸಹಾಯಕ್ಕೆ ಶ್ರಮಿಸಿದ್ದ ಅನಂತ್ ಕುಮಾರ್

Update: 2018-11-12 14:36 GMT

ಬೆಂಗಳೂರು, ನ.12: ನಗರದ ಶಂಕರಪುರಂನಲ್ಲಿ ಆರು ಅಂತಸ್ತಿನ ವಿಶಾಲ ಕಟ್ಟಡದಲ್ಲಿ ಶ್ರೀ ಶಂಕರ ಕ್ಯಾನ್ಸರ್ ಫೌಂಡೇಷನ್ ಮತ್ತು ಸಂಶೋಧನಾ ಕೇಂದ್ರ 2012ರಲ್ಲಿ ಪ್ರಾರಂಭಗೊಂಡಿತ್ತು. ಸಂಸದ ಅನಂತ್ ಕುಮಾರ್ ಅವರ ಪರಿಶ್ರಮದ ಫಲವೇ ಶ್ರೀ ಶಂಕರ್ ಕ್ಯಾನ್ಸರ್ ಆಸ್ಪತ್ರೆ ಎದ್ದು ನಿಂತಿತ್ತು.

ಸಂಸದರ ಈ ಯತ್ನಕ್ಕೆ ಡಾ.ಶ್ರೀನಾಥ್, ಡಾ.ಎಚ್.ಎಸ್.ನಾಗರಾಜ್, ಡಾ.ಸೆಬಾಸ್ಟಿಯನ್, ಅಭಿನವ್ ರಮಾನಂದ ಮತ್ತು ಡಾ.ಕೆ.ಎನ್.ಶಂಕರ್ ಅವರ ಸತತ ಪರಿಶ್ರಮವೂ ಜೊತೆಗೂಡಿ, ಕ್ಯಾನ್ಸರ್ ಫೌಂಡೇಷನ್‌ಗೆ ಚಾಲನೆ ಸಿಕ್ಕಿತ್ತು. ಇವರೆಲ್ಲರ ಶ್ರಮದಿಂದಾಗಿಯೇ ಶಂಕರಪುರಂನ ಶಂಕರಮಠದ ಆವರಣದಲ್ಲಿರುವ ರಂಗದೊರೈ ಆಸ್ಪತ್ರೆಯಲ್ಲಿ 2007ರಲ್ಲಿ ಫೌಂಡೇಶನ್ ಚಟುವಟಿಕೆ ಸಣ್ಣಮಟ್ಟದಲ್ಲಿ ಶುರುವಾಗಿತ್ತು.

ಡಾ.ಶ್ರೀನಾಥ್ ಕನಸು ನನಸಾಗಲು ಸಂಸದ ಅನಂತ್ ಕುಮಾರ್ ಅವರ ಸಹಕಾರ ಭಾರಿ ಮಹತ್ವದ್ದಾಗಿತ್ತು. ಅವಿರತ ಶ್ರಮದ ನಂತರ 2012ರಲ್ಲಿ ಸಂಸ್ಥೆ ಕಾರ್ಯಾರಂಭ ಮಾಡಿತ್ತು. ಈವರೆಗೂ ಸಾವಿರಾರು ರೋಗಿಗಳು ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ರೇಡಿಯೊಥೆರಪಿ, ಕಿಮೊಥೆರಪಿ, ಶಸ್ತ್ರಚಿಕಿತ್ಸೆ, ನೋವು ಶಮನ ಘಟಕ, ಫಿಸಿಯೋಥೆರಪಿ, ರೇಡಿಯೊ ತಪಾಸಣೆ, ಪ್ರಯೋಗಾಲಯ, ರಕ್ತನಿಧಿ, ನ್ಯೂಕ್ಲಿಯರ್ ಮೆಡಿಸಿನ್, ಹೊರರೋಗಿ ವಿಭಾಗಗಳು ಶ್ರೀ ಶಂಕರ ಆಸ್ಪತ್ರೆಯಲ್ಲಿವೆ. ಬಡವರಿಗಾಗಿ ಹಾಗೂ ಭೀಕರ ರೋಗದಿಂದ ಬಳಲುತ್ತಿರುವವರಿಗಾಗಿ ಆರಂಭವಾಗಿದ್ದ ಆಸ್ಪತ್ರೆಗೆ ಅನಂತ್ ಕುಮಾರ್ ಅವರ ಕೊಡುಗೆ ಅಪಾರವಾಗಿದೆ. ಆಸ್ಪತ್ರೆ ಬಡವರಿಗೆ, ಮಧ್ಯಮ ವರ್ಗಕ್ಕೆ ಅನುಕೂಲವಾಗಲಿ ಎನ್ನುವುದು ಸಂಸದರ ಕನಸಾಗಿತ್ತು. ಆದರೆ, ದುರ್ದೈವ ಎಂದರೆ, ಅನಂತ್ ಕುಮಾರ್ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾಯಿತು.

ನ್ಯೂಯಾರ್ಕ್, ಲಂಡನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಅನಂತ್ ಕುಮಾರ್, ತಾವೇ ಮುಂದೆ ನಿಂತು ಸಹಾಯ ಮಾಡಿದ್ದ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾಗಿ ಬಂದದ್ದು ದುರ್ದೈವದ ಸಂಗತಿ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಕ್ಯಾನ್ಸರ್ ಔಷಧಗಳು ನಮ್ಮ ದೇಶದಲ್ಲಿ ತಯಾರಾಗುವುದಿಲ್ಲ. ಹೀಗಾಗಿ ಅವುಗಳ ಬೆಲೆ ದುಬಾರಿ. ಒಂದು ವೇಳೆ ಔಷಧಗಳು ಇಲ್ಲಿಯೇ ತಯಾರಾದರೆ ಕಿಮೋಥೆರಪಿಯನ್ನು ಕಡಿಮೆ ವೆಚ್ಚದಲ್ಲಿ ನಿರ್ವಹಿಸಲು ಸಾಧ್ಯ. ಬ್ಲಡ್ ಕ್ಯಾನ್ಸರ್‌ಗೆ ಅಗತ್ಯವಾದ ಚುಚ್ಚುಮದ್ದಿನ ಬೆಲೆ 1.18 ಲಕ್ಷ ರೂ. ಇದು ನಮ್ಮ ದೇಶದಲ್ಲಿಯೇ ತಯಾರಾದರೆ 50 ಸಾವಿರಕ್ಕೆ ಕೊಡಬಹುದು. ಒಬ್ಬ ರೋಗಿಯ ಚಿಕಿತ್ಸೆಗೆ ಸುಮಾರು 18 ಇಂಜೆಕ್ಷನ್ ಬೇಕಾಗುತ್ತದೆ. ಹೀಗಾಗಿಯೇ ಸಚಿವ ಅನಂತ್ ಕುಮಾರ್ ಶ್ರೀ ಶಂಕರ ಕ್ಯಾನ್ಸರ್ ಫೌಂಡೇಷನ್ ಮತ್ತು ಸಂಶೋಧನಾ ಕೇಂದ್ರಕ್ಕೆ ಸಹಕಾರ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News