ದಾಭೋಲ್ಕರ್ ಹತ್ಯೆ ಪ್ರಕರಣ : ಆರೋಪಿಗಳ ವಿರುದ್ಧ ಅಕ್ರಮ ಚಟುವಟಿಕೆ ನಿಯಂತ್ರಣ ಕಾಯಿದೆ ಹೇರಿದ ಸಿಬಿಐ

Update: 2018-11-13 11:44 GMT

ಪುಣೆ,ನ.13 : ವಿಚಾರವಾದಿ ಡಾ. ನರೇಂದ್ರ ದಾಭೋಲ್ಕರ್ ಅವರ ಹತ್ಯೆ ಪ್ರಕರಣದ ಆರೋಪಿಗಳ ವಿರುದ್ಧ  ಅಕ್ರಮ ಚಟುವಟಿಕೆಗಳ (ನಿಯಂತ್ರಣ)ಕಾಯಿದೆ ಅನ್ವಯ ಪ್ರಕರಣವನ್ನು ಸಿಬಿಐ ದಾಖಲಿಸಿದೆ.

ಪ್ರಕರಣದ ತನಿಖಾಧಿಕಾರಿ ಎಎಸ್‍ಪಿ ಎಸ್ ಆರ್ ಸಿಂಗ್ ಅವರು ಪುಣೆ ನ್ಯಾಯಾಲಯಕ್ಕೆ ಸೋಮವಾರ ಸಲ್ಲಿಸಿದ ವರದಿಯಲ್ಲಿ ಈ ಬಗ್ಗೆ ತಿಳಿಸಲಾಗಿದ್ದು ಅದರಲ್ಲಿ ಕೃತ್ಯದ ಬಗ್ಗೆ ವಿವರಣೆಯಿರುವ ಕಾಯಿದೆಯ ಸೆಕ್ಷನ್ 15  ಹಾಗೂ ಈ ಕೃತ್ಯದಿಂದ ಸಾವು ಸಂಭವಿಸಿದಲ್ಲಿ ಶಿಕ್ಷೆ ಮರಣದಂಡನೆ ಅಥವಾ ಜೀವಾವಧಿ ಎಂದು ವಿವರಿಸಲಾಗಿರುವ ಸೆಕ್ಷನ್ 16ರ ಬಗ್ಗೆ ಉಲ್ಲೇಖವಿದೆ. ಈ ಕಾಯಿದೆಯನ್ವಯ ದೋಷಾರೋಪ ಪಟ್ಟಿಯನ್ನು 90 ದಿನಗಳೊಳಗಾಗಿ ಸಲ್ಲಿಸಬೇಕಿದ್ದು ತಪ್ಪಿದಲ್ಲಿ ತನಿಖಾ ಏಜನ್ಸಿ ಇನ್ನೂ 90 ದಿನಗಳ ಕಾಲಾವಕಾಶ ಕೇಳಬಹುದಾಗಿದೆ, ನವೆಂಬರ್ 18ರಂದು ಸಿಬಿಐ ದೋಷಾರೋಪ ಪಟ್ಟಿ ಸಲ್ಲಿಸುವುದೆಂದು ಈ ಹಿಂದೆ ತಿಳಿಯಲಾಗಿದ್ದರೂ ಅದು ಸಮಯಾವಕಾಶ ವಿಸ್ತರಣೆ ಕೋರಿ ಅಪೀಲು ಸಲ್ಲಿಸಿದೆ ಎಂದು ತಿಳಿದು ಬಂದಿದೆ.

ಈ ಪ್ರಕರಣ ಕುರಿತಂತೆ ಇಲ್ಲಿಯ ತನಕ ಆರು ಮಂದಿಯನ್ನು ಬಂಧಿಸಲಾಗಿದೆ. ಜೂನ್ 2016ರಲ್ಲಿ ಕೊಲೆ ಪ್ರಕರಣದ ರೂವಾರಿಯೆಂದೇ ತಿಳಿಯಲಾದ ಇಎನ್‍ಟಿ ವೈದ್ಯ ಹಾಗೂ ಸನಾತನ ಸಂಸ್ಥಾ ಸದಸ್ಯ ಡಾ. ವೀರೇಂದ್ರ ತಾವ್ಡೆ ಬಂಧನವಾಗಿದ್ದರೆ ಉಳಿದ ಐದು ಮಂದಿಯನ್ನು ಈ ವರ್ಷದ ಆಗಸ್ಟ್-ಸೆಪ್ಟೆಂಬರ್ ತಿಂಗಳುಗಳಲ್ಲಿ ಬಂಧಿಸಲಾಗಿತ್ತು. ದಾಭೋಲ್ಕರ್ ಮೇಲೆ ಆಗಸ್ಟ್ 20, 2013ರಂದು ಗುಂಡು ಹಾರಿಸಿದವರೆನ್ನಲಾದ ಸಚಿನ್ ಅಂದೂರೆ ಹಾಗೂ ಶರದ್ ಕಲಸ್ಕರ್ ಅವರನ್ನು ಈ ವರ್ಷದ ಆಗಸ್ಟ್ ತಿಂಗಳಲ್ಲಿ ಬಂಧಿಸಲಾಗಿದ್ದರೆ ಉಳಿದ ಮೂವರಾದ ಅಮೋಲ್ ಕಾಳೆ, ಅಮಿತ್ ದಿಗ್ವೇಕರ್ ಹಾಗೂ ರಾಜೇಶ್ ಬಂಗೇರಾ ಅವರನ್ನು ಸೆಪ್ಟೆಂಬರಿನಲ್ಲಿ ಬಂಧಿಸಲಾಗಿತ್ತು. ಇವರು ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಗಳಲ್ಲೂ ಬೇಕಾದವರೆಂದು ಹೇಳಲಾಗಿದೆ.

ಈ ಪ್ರಕರಣದಲ್ಲಿ ಅಕ್ರಮ ಚಟುವಟಿಕೆ ನಿಯಂತ್ರಣ ಕಾಯಿದೆ ಅನ್ವಯವಾಗದು ಎಂದು ಐದು ಮಂದಿ ಆರೋಪಿಗಳ ವಕೀಲರು ಹೇಳುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News