ಸಕಲ ಸರಕಾರಿ ಗೌರವದೊಂದಿಗೆ ಅನಂತಕುಮಾರ್ ಅಂತ್ಯ ಸಂಸ್ಕಾರ

Update: 2018-11-13 14:25 GMT

ಬೆಂಗಳೂರು,ನ.13: ಬಹು ಅಂಗಾಂಗಗಳ ವೈಫಲ್ಯದಿಂದಾಗಿ ಮೃತರಾಗಿದ್ದ ಕೇಂದ್ರ ಸಚಿವ ಅನಂತ್‌ ಕುಮಾರ್ ಸರಕಾರಿ ಸಕಲ ಗೌರವಗಳೊಂದಿಗೆ ನಗರದ ಚಾಮರಾಜಪೇಟೆಯಲ್ಲಿರುವ ರುದ್ರಭೂಮಿಯಲ್ಲಿ ಅಗ್ನಿಯಲ್ಲಿ ಲೀನವಾದರು.

ಬಿಜೆಪಿಯ ಕೇಂದ್ರ ಮತ್ತು ರಾಜ್ಯ ಮುಖಂಡರು, ಕೇಂದ್ರ ಸಚಿವರು, ಸಂಸದರು, ಶಾಸಕರು ಹಾಗೂ ಮತ್ತಿತರೆ ಮುಖಂಡರ ಸಮ್ಮುಖದಲ್ಲಿ ಅನಂತ್‌ಕುಮಾರ್ ಪಾರ್ಥಿವ ಶರೀರಕ್ಕೆ ಅವರ ಸಹೋದರ ನಂದಕುಮಾರ್ ಸ್ಮಾರ್ಥ ಬ್ರಾಹ್ಮಣ ಸಂಪ್ರದಾಯದಂತೆ ವಿಧಿವಿಧಾನ ಪೂರೈಸುತ್ತಿದ್ದಂತೆ ಅವರು ಪಂಚಭೂತಗಳಲ್ಲಿ ಲೀನವಾದರು.

ನಗರದ ಹಿರಿಯ ಪುರೋಹಿತ ಎಂ.ಜಿ.ಶ್ರೀನಾಥ್ ಅವರ ನೇತೃತ್ವದಲ್ಲಿ ಗಂಗಾಜಲದಿಂದ ಪಾರ್ಥಿವ ಶರೀರದ ಶುದ್ಧೀಕರಣ ನಡಸಿ, 50 ಕೆಜಿ ತುಪ್ಪ, 10 ಕೆಜಿ ಕರ್ಪೂರ, ಬೆರಣಿ, ಗಂಧದ ಚೆಕ್ಕೆ, 1 ಟನ್ ಕಟ್ಟಿಗೆ ಬಳಸಿ ಅಂತ್ಯಸಂಸ್ಕಾರದ ವಿಧಿ-ವಿಧಾನಗಳನ್ನು ನೆರವೇರಿಸಲಾಯಿತು. ಅಂತಿಮ ವಿಧಿ-ವಿಧಾನದ ವೇಳೆ ಪತ್ನಿ ತೇಜಸ್ವಿನಿ ಅನಂತ್ ಕುಮಾರ್, ಮಕ್ಕಳು ಹಾಗೂ ಸಹೋದರಿ ಸೇರಿದಂತೆ ಕುಟುಂಬದ ಸದಸ್ಯರು ಪೂಜಾ ವಿಧಿ-ವಿಧಾನಗಳಲ್ಲಿ ಪಾಲ್ಗೊಂಡಿದ್ದರು.

ಮಂಗಳವಾರ ಅನಂತ್‌ ಕುಮಾರ ಅವರ ಪಾರ್ಥಿವ ಶರೀರವವನ್ನು ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಗೆ ತಂದು ಅಗಲಿದ ನಾಯಕನಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಉಪರಾಷ್ಟ್ರಪತಿ ವೆಂಕಯ್ಯನಾಯ್ಡು, ಬಿಜೆಪಿ ಹಿರಿಯ ನಾಯಕ ಎಲ್.ಕೆ ಅಡ್ವಾಣಿ, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಡಿ.ವಿ. ಸದಾನಂದಗೌಡ, ರಮೇಶ್ ಜಿಗಜಿಣಗಿ, ಅನಂತ್‌ಕುಮಾರ್ ಹೆಗಡೆ, ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರರಾವ್, ಕೆ.ಎಸ್. ಈಶ್ವರಪ್ಪ, ಆರ್.ಅಶೋಕ್ ಸೇರಿದಂತೆ ರಾಜ್ಯದ ಬಿಜೆಪಿ ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರು, ಮಾಜಿ ಸಚಿವರು, ಮಾಜಿ ಶಾಸಕರು, ಪದಾಧಿಕಾರಿಗಳು, ಸೇರಿದಂತೆ ಅನೇಕ ಗಣ್ಯರು ಅಂತಿಮ ನಮನ ಸಲ್ಲಿಸಿದರು.

ಸುಮಾರು ಒಂದೂವರೆ ಗಂಟೆಕಾಲ ಬಿಜೆಪಿ ಕಚೇರಿಯಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಅಂತಿಮ ದರ್ಶನ ಪಡೆದ ಎಲ್ಲರೂ ಅನಂತ್‌ ಕುಮಾರ್‌ರನ್ನು ಗುಣಗಾನ ಮಾಡುತ್ತಿದ್ದರು. ಇದಕ್ಕೂ ಮುನ್ನ ಬಸವನಗುಡಿಯಲ್ಲಿರುವ ಅನಂತ್‌ಕುಮಾರ್ ಅವರ ನಿವಾಸ ಸುಮೇರುನಿಂದ ಸೇನಾ ವಾಹನದ ಮೂಲಕ ಬಿಜೆಪಿ ಕಚೇರಿವರೆಗೂ ಮೆರವಣಿಗೆ ಮೂಲಕ ಪಾರ್ಥಿವ ಶರೀರವನ್ನು ತರಲಾಯಿತು. ಈ ಸಂದರ್ಭದಲ್ಲಿ ದಾರಿಯುದ್ದಕ್ಕೂ ನಿಂತಿದ್ದ ಜನ ಅನಂತ್‌ ಕುಮಾರ್‌ರ ಅಂತಿಮ ದರ್ಶನ ಪಡೆದರು. ಸುಮೇರುನಿಂದ ಹೊರಟ ವಾಹನ ಎಸ್.ಪಿ.ಸಮಾಜ ರಸ್ತೆ, ಬಸವನಗುಡಿ ಮೆಡಿಕಲ್ ಸೆಂಟರ್, ಲಾಲ್‌ಬಾಗ್ ವೆಸ್ಟ್ ಗೇಟ್, ಆರ್.ವಿ.ರಸ್ತೆ, ಮಿನರ್ವ ಸರ್ಕಲ್, ಶಿವಾಜಿ ವೃತ್ತ, ಎನ್.ಆರ್.ವೃತ್ತ, ಹೈಗ್ರೌಂಡ್ಸ್ ಜಂಕ್ಷನ್, ಪಿ.ಜಿ.ಹಳ್ಳಿ ಜಂಕ್ಷನ್, ಕಾವೇರಿ ಜಂಕ್ಷನ್‌ನಿಂದ ಸಂಪಿಗೆ ರಸ್ತೆ ಮೂಲಕ ಬಿಜೆಪಿ ಕಚೇರಿಗೆ ತರಲಾಯಿತು.

ಬಿಜೆಪಿ ಕಚೇರಿಯಲ್ಲಿ ಅಂತಿಮ ದರ್ಶನ ಹಾಗೂ ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ಅಲ್ಲಿಂದ ಕಾಡು ಮಲ್ಲೇಶ್ವರ ದೇಗುಲ ಬಳಿ ಬಲ ತಿರುವು ಪಡೆದು ಸಂಪಿಗೆ ರಸ್ತೆ, ಸ್ಯಾಂಕಿ ಟ್ಯಾಂಕಿ ರಸ್ತೆ , ಪಿ.ಜಿ.ಹಳ್ಳಿ ಜಂಕ್ಷನ್, ಹಳೆಯ ಹೈ ಗ್ರೌಂಡ್ ಪೊಲೀಸ್ ಸ್ಟೇಷನ್ ಜಂಕ್ಷನ್, ಕೆ.ಆರ್.ಸರ್ಕಲ್, ನೃಪತುಂಗ ರಸ್ತೆ, ಕಾರ್ಪೊರೇಷನ್ ಸರ್ಕಲ್, ಪೂರ್ಣಿಮಾ ಜಂಕ್ಷನ್, ವಾಣಿ ವಿಲಾಸ್ ರಸೆ,್ತ ಪಂಪ ಮಹಾಕವಿ ರಸ್ತೆ ಮೂಲಕ ನ್ಯಾಷನಲ್ ಕಾಲೇಜು ಮೈದಾನಕ್ಕೆ ಮೃತರ ಪಾರ್ಥಿವ ಶರೀರ ತಂದು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು.

ಬಿಗಿಭದ್ರತೆ
ಕೇಂದ್ರ ಸಚಿವ ಅನಂತ್‌ ಕುಮಾರ್‌ರ ಅಂತಿಮ ದರ್ಶನ ಸಂದರ್ಭದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಬಿಜೆಪಿ ಕಚೇರಿ ಹಾಗೂ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸೂಕ್ತ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಒಬ್ಬರು ಡಿವೈಎಸ್‌ಪಿ, ಐದು ಜನ ಇನ್ಸ್‌ಪೆಕ್ಟರ್‌ಗಳು, 20 ಜನ ಸಬ್ ಇನ್ಸ್‌ಪೆಕ್ಟರ್‌ಗಳು, 220 ಮಂದಿ ಪೊಲೀಸರನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News