ಬೆಂಗಳೂರಿನಲ್ಲಿ ಮಾಲಿನ್ಯದ ಸ್ಥಿತಿ ಚಿಂತಾಜನಕದತ್ತ: ತಜ್ಞರ ಆತಂಕ

Update: 2018-11-13 12:15 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ನ.13: ದಿನದಿಂದ ದಿನಕ್ಕೆ ಅಭಿವೃದ್ಧಿಯಾಗುತ್ತಿರುವ ಬೆಂಗಳೂರು ನಗರದಲ್ಲಿ ಹೊಸ ವಾಹನಗಳ ನಿಯಂತ್ರಣ, ಸಮೂಹ ಸಾರಿಗೆ ಅಭಿವೃದ್ಧಿ ಹಾಗೂ ಪರಿಸರ ಸಂರಕ್ಷಣೆಗೆ ಒತ್ತು ನೀಡದಿದ್ದರೆ ಬೆಂಗಳೂರು ಮಾಲಿನ್ಯ ಸ್ಥಿತಿ ಚಿಂತಾಜನಕವಾಗುವುದರಲ್ಲಿ ಅನುಮಾನವೇ ಇಲ್ಲ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ನಗರ ವಾಣಿಜ್ಯ, ಕೈಗಾರಿಕೆ, ತಂತ್ರಜ್ಞಾನ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಮುಂದುವರಿದಿದೆ. ಹೀಗಾಗಿ, ನಗರಕ್ಕೆ ಗ್ರಾಮಾಂತರ ಪ್ರದೇಶದಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರತಿದಿನ ವಲಸೆ ಬರುತ್ತಿದ್ದಾರೆ. ಅಲ್ಲದೆ, 1.20 ಕೋಟಿ ಜನಸಂಖ್ಯೆ ಇದೆ. ಹೀಗಾಗಿ, ಜನದಟ್ಟಣೆ ಹೆಚ್ಚು ಆಗುತ್ತಿರುವಂತೆ ವಾಹನಗಳು, ಸಂಚಾರ ದಟ್ಟಣೆಯೂ ಅಧಿಕವಾಗುತ್ತಿದೆ. ಇದರ ಪರಿಣಾಮ ನಗರದ ಮಾಲಿನ್ಯದ ಮೇಲೆ ಪರಿಣಾಮ ಬೀರುತ್ತಿದ್ದು, ನಮ್ಮ ಬೆಂಗಳೂರು ದಿಲ್ಲಿಯ ಸ್ಥಿತಿ ತಲುಪುವ ದಿನಗಳು ದೂರವಿಲ್ಲ ಎಂದಿದ್ದಾರೆ.

ಅಧಿಕಾರದಲ್ಲಿರುವ ಸರಕಾರಗಳು ನಗರದ ಮೇಲಿನ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲು ಈಗಲೇ ಮುಂದಾಗಬೇಕಿದೆ. ಅದರ ಭಾಗವಾಗಿ ಬೆಂಗಳೂರು ನಗರದಲ್ಲಿರುವ ಹಲವು ಕೈಗಾರಿಕೆ ಮತ್ತು ಕಂಪೆನಿಗಳನ್ನು ಎರಡನೆ ದರ್ಜೆಯ ನಗರಗಳು ಎಂದು ಹೆಸರುವಾಸಿಯಾದ ನಗರಗಳಿಗೆ ವರ್ಗಾವಣೆ ಮಾಡಬೇಕು. ಇದರಿಂದ ಹೊರಗಡೆಯಿಂದ ಬೆಂಗಳೂರಿಗೆ ವಲಸೆ ಬರುವ ಜನಸಂಖ್ಯೆ ಕಡಿಮೆಯಾಗುತ್ತದೆ ಹಾಗೂ ಜನದಟ್ಟಣೆಯೂ ಕಡಿಮೆಯಾಗುತ್ತದೆ ಎಂದು ಪರಿಸರವಾದಿಗಳು ಅಭಿಪ್ರಾಯಪಟ್ಟಿದ್ದಾರೆ.

ನಗರದಲ್ಲಿ ಸಮೂಹ ಸಾರಿಗೆಗೆ ಹೆಚ್ಚು ಆದ್ಯತೆ ನೀಡಿ, ಖಾಸಗಿ ವಾಹನಗಳ ಬಳಕೆಗಿಂತಲೂ ಕಡಿಮೆಯ ಬೆಲೆಗೆ ಸಮೂಹ ಸಾರಿಗೆ ಸೇವೆಗಳು ದೊರೆಯಬೇಕಿದೆ. ಇದರೊಂದಿಗೆ ಮೆಟ್ರೋ ನಿಲ್ದಾಣಗಳಿಂದ ಕೊನೆಯ ಹಂತದ ಸಂಪರ್ಕ ವ್ಯವಸ್ಥೆ ಮಾಡಿದಾಗ ಸ್ವಂತ ವಾಹನಗಳ ಬಳಕೆ ಕಡಿಮೆಯಾಗುತ್ತದೆ. ಹೀಗಾಗಿ ಸರಕಾರ ಹಾಗೂ ಸ್ಥಳೀಯ ಸಂಸ್ಥೆಗಳು ಶೀಘ್ರ ಕ್ರಮ್ಕಕೆ ಮುಂದಾಗಬೇಕು ಎಂದು ಪರಿಸರವಾದಿಗಳು ಹೇಳಿದ್ದಾರೆ.

ಬೆಂಗಳೂರು ನಗರದಲ್ಲಿ ಮಾಲಿನ್ಯದ ಪ್ರಮಾಣ ಅಧಿಕವಾಗುತ್ತಿದೆ. ಮಾಲಿನ್ಯವನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ 150 ಕ್ಕೂ ಅಧಿಕ ಪ್ರಬೇಧದ ಮರಗಳ ಪಟ್ಟಿ ಹಾಗೂ ಮಾಲಿನ್ಯ ನಿಯಂತ್ರಣ, ವಾತಾವರಣಕ್ಕನುಗುಣವಾಗಿ ನೆಡಬೇಕಾದ ಮರಗಳ ಕುರಿತ ಮಾಹಿತಿಯನ್ನು ಪಾಲಿಕೆಗೆ ಸಲ್ಲಿಸಿ ಹಲವಾರು ವರ್ಷಗಳು ಕಳೆಯುತ್ತಿದ್ದರೂ, ಅದನ್ನು ಅನುಷ್ಠಾನ ಮಾಡಿಲ್ಲ. ಅದನ್ನು ಮಾಡಿದರೆ ಸ್ವಲ್ಪ ಮಟ್ಟಿಗೆ ನಿಯಂತ್ರಣವಾಗಬಹುದು.

-ಆ.ನ.ಯಲ್ಲಪ್ಪರೆಡ್ಡಿ, ನಿವೃತ್ತ ಐಎಫ್ ಅಧಿಕಾರಿ ಹಾಗೂ ಪರಿಸರವಾದಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News