ಡಾ.ಸ್ವಾಮಿನಾಥನ್ ವರದಿ ಬಗ್ಗೆ ವಿಶೇಷ ಅಧಿವೇಶನ ಕರೆದು ಸಮಗ್ರ ಚರ್ಚೆ ನಡೆಸಲು ಪಿ.ಸಾಯಿನಾಥ್ ಒತ್ತಾಯ

Update: 2018-11-13 16:12 GMT

ಬೆಂಗಳೂರು, ನ.13: ಕೇಂದ್ರ ಸರಕಾರ ವಿಶೇಷ ಅಧಿವೇಶನ ನಡೆಸಿ ಡಾ.ಸ್ವಾಮಿನಾಥನ್ ವರದಿ ಬಗ್ಗೆ ಸಮಗ್ರವಾಗಿ ಚರ್ಚೆ ನಡೆಯಬೇಕು ಎಂದು ಹಿರಿಯ ಪತ್ರಕರ್ತ ಪಿ.ಸಾಯಿನಾಥ್ ಒತ್ತಾಯಿಸಿದ್ದಾರೆ.

ರೈತ ಸಂಘಟನೆಗಳ ಸಮನ್ವಯ ಸಮಿತಿ ವತಿಯಿಂದ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ರೈತರ ದಿಲ್ಲಿ ಚಲೋ ಕುರಿತ ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸರಕಾರ ಕಾರ್ಪೋರೇಟ್ ವ್ಯವಸ್ಥೆಗೆ ಪೂರಕವಾದ ಯೋಜನೆಗಳನ್ನು ಜಾರಿ ಮಾಡಲು ಆಸಕ್ತಿ ತೋರಿಸುತ್ತಿದೆ. ಆದರೆ, ರೈತರ ಪರವಾದ ಯೋಜನೆಗಳ ಜಾರಿಗೆ ಯಾಕೆ ಆಸಕ್ತಿ ತೋರುತ್ತಿಲ್ಲ ಎಂದರು.

ಕೇಂದ್ರ ಸರಕಾರ ರಾತ್ರೋರಾತ್ರಿ ಕಾರ್ಪೋರೇಟ್‌ಗಳಿಗೆ ಪೂರಕವಾಗಿರುವ ಜಿಎಸ್‌ಟಿ ಹಾಗೂ ನೋಟು ಅಮಾನ್ಯೀಕರಣದಂತಹ ನೀತಿಗಳನ್ನು ಜಾರಿ ಮಾಡಲು ಸಾಧ್ಯವಾಗುತ್ತದೆ. ಆದರೆ, ದೇಶದ ಜನರಿಗೆ ಅನ್ನ ನೀಡುವ ರೈತರ ಸಮಸ್ಯೆಗಳನ್ನೇ ಆಧಾರವಾಗಿಸಿಕೊಂಡು ತಯಾರಿಸಿರುವ ಸ್ವಾಮಿನಾಥನ್ ವರದಿಯನ್ನು ಜಾರಿ ಮಾಡಲು ಯಾಕೆ ಆಸಕ್ತಿ ತೋರಿಸುತ್ತಿಲ್ಲ ಎಂದು ಅವರು ಕಿಡಿಕಾರಿದರು.

ಭಾರತದಲ್ಲಿ ಕಳೆದ 20 ವರ್ಷಗಳಲ್ಲಿ ಮೂರು ಲಕ್ಷಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸರಕಾರದ ದಾಖಲೆಗಳು ಹೇಳುತ್ತಿವೆ. ಅಂದರೆ, ಮುಂದಿನ 2020 ರ ವೇಳೆ ಇನ್ನೆಷ್ಟು ರೈತರು ಸಾವನ್ನಪ್ಪಬೇಕಿದೆ. ಅಲ್ಲದೆ, ದೇಶದಾದ್ಯಂತ ಲಕ್ಷಾಂತರ ರೈತರು ಕೃಷಿ ಬಿಟ್ಟು ವಲಸೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂದು ಕೃಷಿ ಕ್ಷೇತ್ರವನ್ನೂ ಕಾರ್ಪೋರೇಟ್ ವ್ಯವಸ್ಥೆ ನಿಯಂತ್ರಣ ಮಾಡುತ್ತಿರುವುದು ವಿಷಾದಕರ ಎಂದು ಹೇಳಿದರು.

ಮಹಾರಾಷ್ಟ್ರದಲ್ಲಿ ಸಹಕಾರಿ ಬ್ಯಾಂಕ್‌ಗಳಿಂದ ನೀಡುವ ಸಾಲದಲ್ಲಿ ಶೇ.53 ರಷ್ಟು ಕೃಷಿ ಹೆಸರಿನಲ್ಲಿ ಉದ್ಯಮ ನಡೆಸುತ್ತಿರುವವರ ಪಾಲಾಗುತ್ತಿದೆ. ಇದೇ ಪರಿಸ್ಥಿತಿ ದೇಶದಾದ್ಯಂತ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ವಿಶೇಷ ಅಧಿವೇಶನ ಕರೆಯಬೇಕು. ಅದರಲ್ಲಿ ಸ್ವಾಮಿನಾಥನ್ ಆಯೋಗದ ಪ್ರಕಾರ ಬೆಂಬಲ ಬೆಲೆ ನಿಗದಿ ಮಾಡಬೇಕು ಹಾಗೂ ಸಾಲ ನೀಡುವ ಮತ್ತು ಹಿಂಪಡೆಯುವ ಮಸೂದೆಗಳ ಬಗ್ಗೆ ಚರ್ಚೆ ನಡೆದು, ಅದನ್ನು ಅಂಗೀಕಾರ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಮಾತನಾಡಿ, ಜಾಗತೀಕರಣದಿಂದ ಬಂದ ಮುಕ್ತ ಆರ್ಥಿಕ ನೀತಿಗಳು ಜನರನ್ನು ಜೀವ ಮುಕ್ತ ಆರ್ಥಿಕ ನೀತಿಯನ್ನಾಗಿ ಮಾಡಿದೆ. ಆದರೆ, ದೇಶಕ್ಕೆ ಬೇಕಾಗಿರುವುದು ರೈತರನ್ನು ಒಳಗೊಂಡ ಗ್ರಾಮೀಣ ಆರ್ಥಿಕ ನೀತಿಯಾಗಿದೆ ಎಂದು ಹೇಳಿದರು.

ಹೈಕೋರ್ಟ್‌ನ ನಿವೃತ್ತ ಮುಖ್ಯನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್‌ ದಾಸ್ ಮಾತನಾಡಿ, ನಾನು ರೈತ ಕುಟುಂಬದಿಂದ ಬಂದವನಾಗಿದ್ದೇನೆ. ಮೊದಲು ನಮ್ಮ ಜಮೀನಿನಲ್ಲಿ ಎಲ್ಲವನ್ನೂ ಬೆಳೆದುಕೊಳ್ಳುತ್ತಿದ್ದೆವು. ಆದರೆ, ಈಗ ಎಲ್ಲವೂ ಮಾರುಕಟ್ಟೆಯಿಂದ ಖರೀದಿ ಮಾಡುತ್ತಿದ್ದೇವೆ ಎಂದರು.

ನಮ್ಮದು 40 ಎಕರೆ ಭೂಮಿ ಇದೆ. ಆದರೆ, ಎಲ್ಲವೂ ಈಗ ಗೆದ್ದಿಲು ಹುತ್ತ ಬೆಳೆದು ನಿಂತಿದೆ. ನಮ್ಮ ಕುಟುಂಬದ ಎಲ್ಲರೂ ಬೆಂಗಳೂರಿಗೆ ವಲಸೆ ಬಂದಿದ್ದಾರೆ. ನಾನು ಪ್ರೌಢಶಾಲೆಯಲ್ಲಿದ್ದಾಗಿನಿಂದಲೂ ಕನಿಷ್ಠ ಬೆಂಬಲ ಬೆಲೆ ಕೊಡಬೇಕು ಎಂದು ಹೋರಾಟ ನಡೆಯುತ್ತಿದೆ. 50 ವರ್ಷಗಳು ಕಳೆದರೂ, ಇಂದಿಗೂ ಬೇಡಿಕೆ ಈಡೇರಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕೃಷಿಕರ, ಕೂಲಿ ಕಾರ್ಮಿಕರ, ಚಿಲ್ಲರೆ ವ್ಯಾಪಾರಿಗಳ ಬಿಕ್ಕಟ್ಟು ಪರಿಹಾರಕ್ಕಾಗಿ ವಿಶೇಷ ಅಧಿವೇಶನ ನಡೆಸಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ಕೃಷಿ ಕೂಲಿ ಕಾರ್ಮಿಕರ ವೇದಿಕೆ ನೇತೃತ್ವದಲ್ಲಿ ನ.29 ಮತ್ತು 30 ರಂದು ದಿಲ್ಲಿ ಚಲೋ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಮಧ್ಯಮ ವರ್ಗದವರು, ರೈತರು, ವಿದ್ಯಾರ್ಥಿ-ಯುವಜನರು, ವೈದ್ಯರು, ವಕೀಲರು ಸೇರಿದಂತೆ ಎಲ್ಲ ವರ್ಗದ ಜನರು ತಮ್ಮ ಬ್ಯಾನರ್ ಅಡಿಯಲ್ಲಿ ಈ ಚಲೋದಲ್ಲಿ ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಬೇಕು.

-ಪಿ.ಸಾಯಿನಾಥ್, ಹಿರಿಯ ಪತ್ರಕರ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News