ನಮ್ಮೊಳಗೂ ಒಬ್ಬ ವಂಚಕ

Update: 2018-11-14 04:40 GMT

ಹಲವು ಕೋಟಿಗಳ ವಂಚನೆಯನ್ನು ಗೈದ ‘ಆ್ಯಂಬಿಡೆಂಟ್ ಮಾರ್ಕೆಟಿಂಗ್‌ಪ್ರೈ. ಲಿ.’ನ ಕುರಿತ ತನಿಖೆ ಮುಂದುವರಿದಂತೆಯೇ ಹಲವು ಪ್ರತಿಷ್ಠಿತರೆನಿಸಿಕೊಂಡವರ ಮುಖವಾಡ ಬಯಲಾಗುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿಗಾಗಿ ನ್ಯಾಯಾಂಗದ ಆದೇಶವನ್ನು ಭಾಗಶಃ ಉಲ್ಲಂಘಿಸಿ ಒಳಗೊಳಗೆ ಶ್ರಮಿಸಿದ ಜನಾರ್ದನ ರೆಡ್ಡಿಯ ಬಂಧನವಾಗುತ್ತಿದ್ದಂತೆಯೇ ಈ ವಂಚನೆಯ ಆಳ, ಅಗಲ ತೆರೆದುಕೊಳ್ಳುತ್ತಿದೆ. ರಾಷ್ಟ್ರಮಟ್ಟದ ಬಿಜೆಪಿ ನಾಯಕರು ಮತ್ತೆ ಜನಾರ್ದನ ರೆಡ್ಡಿಯ ಜೊತೆಗೆ ಅಂತರ ಕಾಯ್ದುಕೊಳ್ಳಲು ಹೆಣಗುತ್ತಿದ್ದಾರೆ. ಆ್ಯಂಬಿಡೆಂಟ್ ಅಕ್ರಮ ಬರೇ ಒಬ್ಬನಿಂದ ನಡೆದಿರುವುದಲ್ಲ, ಅದರಲ್ಲಿ ಸಾಮೂಹಿಕ ಭಾಗೀದಾರಿಕೆಯಿದೆ ಎನ್ನುವುದು ಇದೀಗ ಬಯಲಾಗುತ್ತಿದೆ. ಕೆಲವೊಮ್ಮೆ ವಂಚನೆಗೊಳಗಾಗುವವನಲ್ಲೂ ಒಬ್ಬ ವಂಚಕನಿರುತ್ತಾರೆ. ಆ ವಂಚನೆಯ ಮನಸ್ಥಿತಿಯೇ ಅವನನ್ನು ಇನ್ನೊಬ್ಬ ಬೃಹತ್ ವಂಚಕ ತೋಡಿದ ಹಳ್ಳಕ್ಕೆ ಬೀಳಿಸುತ್ತದೆ. ಆ್ಯಂಬಿಡೆಂಟ್ ಪ್ರಕರಣದಲ್ಲಂತೂ ಇದು ನೂರಕ್ಕೆ ನೂರು ಸಾಬೀತಾಗಿದೆ. ಇಲ್ಲಿ ನಾವು ಈ ಮೋಸದ ಕಂಪೆನಿಯ ಹಿಂದಿರುವ ಮಾಲಕನನ್ನಷ್ಟೇ ಹೊಣೆ ಮಾಡಿ ಕೈ ತೊಳೆದುಕೊಳ್ಳುವಂತಿಲ್ಲ. ಅಥವಾ ಈ ಕಂಪೆನಿಯ ಬೆನ್ನಿಗೆ ನಿಂತ ರೆಡ್ಡಿಯನ್ನಷ್ಟೇ ಖಳನಾಯಕನಾಗಿಸುವುದರಿಂದಲೂ ಬಗೆ ಹರಿಯುವುದಿಲ್ಲ. ಈ ಪ್ರಕರಣದಲ್ಲಿ ಪತ್ರಕರ್ತರ ಹೆಸರೂ ಕೇಳಿ ಬರುತ್ತಿದೆ.

‘ಬ್ರೇಕಿಂಗ್ ಸುದ್ದಿ’ ‘ತನಿಖಾ ವರದಿ’ಯ ಹೆಸರಿನಲ್ಲಿ ಟಿವಿ ಚಾನೆಲ್‌ಗಳೂ ಹೇಗೆ ಭ್ರಷ್ಟರ ಜೊತೆಗೆ ಶಾಮೀಲಾಗಿವೆ ಎನ್ನುವುದು ಬಹಿರಂಗವಾಗಿದೆ. ಈ ಹಿಂದೆಯೂ ಹಲವು ಚಾನೆಲ್‌ಗಳು ಭ್ರಷ್ಟರನ್ನು ಬ್ಲಾಕ್‌ಮೇಲ್ ಮಾಡುತ್ತಾ ಹಣ ಮಾಡಿಕೊಂಡು ಬಂದಿವೆ. ಸಮಾಜಕ್ಕೆ ಪ್ರಾಮಾಣಿಕತೆಯ ಪಾಠ ಹೇಳುತ್ತಲೇ, ಭ್ರಷ್ಟರಿಂದ ತಿಜೋರಿ ತುಂಬಿಸಿಕೊಳ್ಳುವ ಚಾನೆಲ್‌ಗಳ ಬಣ್ಣವನ್ನು ಆ್ಯಂಬಿಡೆಂಟ್ ಪ್ರಕರಣ ಕಳಚಿದೆ. ಆ್ಯಂಬಿಡೆಂಟ್ ಮಾರ್ಕೆಟಿಂಗ್‌ನ ವಂಚನೆಯ ಗುಣಲಕ್ಷಣಗಳನ್ನು ಗಮನಿಸೋಣ. ರಿಯಲ್ ಎಸ್ಟೇಟ್ ವ್ಯವಹಾರಗಳಿಗೆ ಹಣ ಹೂಡಿ, ಬಂದ ಲಾಭವನ್ನು ನಿಮಗೆ ನೀಡುತ್ತೇವೆ ಎಂದಾಕ್ಷಣ ತಿಜೋರಿಗಳಲ್ಲಿ ಬಚ್ಚಿಟ್ಟ ದುಡ್ಡನ್ನು ಹಿಂದು ಮುಂದು ನೋಡದೆ ಕಂಪೆನಿಗೆ ಸುರಿದವರನ್ನು ನಾವು ಸಂತ್ರಸ್ತರು ಎಂದು ಕರೆಯುತ್ತಿದ್ದೇವೆ. ಆದರೆ ಆಳದಲ್ಲಿ ಇವರಲ್ಲೂ ಸುಲಭದಲ್ಲಿ ಹಣ ಗಳಿಸುವ ‘ವಂಚಕ’ನೊಬ್ಬ ಇದ್ದಾನೆ. ಈ ದೇಶದ ರೈತರು, ಶ್ರಮ ಪಟ್ಟು ದುಡಿಯುವ ಸಣ್ಣ ಪುಟ್ಟ ಉದ್ದಿಮೆದಾರರ ಜೊತೆಗೆ ಹಣ ಹೂಡಲು ಹಿಂದೇಟು ಹಾಕುವ ಇವರು, ಹೇಗಾದರೂ ಸರಿ, ಕುಳಿತಲ್ಲೇ ನಮಗೆ ಲಾಭವಾಗಬೇಕು ಎಂದು ಬಯಸುವವರು. ಈ ಸ್ವಾರ್ಥವೇ ಇಂತಹ ಕಂಪೆನಿಗಳಿಗೆ ಅವರಿಂದ ಹಣ ಹೂಡುವಂತೆ ಮಾಡಿದೆ. ಹೀಗೆ ಹಣ ಹೂಡಿದವರಲ್ಲಿ ಅಧಿಕಾರಿಗಳಿದ್ದಾರೆ, ಸಜ್ಜನರೆನಿಸಿಕೊಂಡ ಅಪಾರ ಸಂಖ್ಯೆಯ ಜನರಿದ್ದಾರೆ. ಇಂಥವರೊಳಗಿರುವ ದುರಾಸೆಯನ್ನೇ, ಈ ಮೋಸದ ಕಂಪೆನಿ ತನ್ನ ಬಂಡವಾಳವನ್ನಾಗಿ ಮಾಡಿದೆ. ಹಾಗೆಯೇ ಮಾಧ್ಯಮಗಳ ದುಷ್ಟತನಗಳೂ ಈ ಕಂಪೆನಿಗೆ ಚೆನ್ನಾಗಿ ಗೊತ್ತು. ಜೊತೆಗೆ, ಮೋಸ ಬಹಿರಂಗವಾದರೆ ತನ್ನನ್ನು ರಕ್ಷಿಸಲು ಜನಾರ್ದನ ರೆಡ್ಡಿಯಂತಹ ಭ್ರಷ್ಟ ರಾಜಕೀಯ ನಾಯಕರಿದ್ದಾರೆ ಎನ್ನುವುದೂ ಅವರಿಗೆ ಸ್ಪಷ್ಟವಿದೆ.

ಇಷ್ಟಕ್ಕೂ ಜನಾರ್ದನ ರೆಡ್ಡಿ ಯಾರ ಧೈರ್ಯದ ಮೇಲೆ 20 ಕೋಟಿ ರೂಪಾಯಿ ಪಡೆದುಕೊಂಡರು? ಕೇಂದ್ರದಲ್ಲಿರುವ ತಮ್ಮ ನಾಯಕರ ಮೇಲಿನ ಭರವಸೆಯಿಲ್ಲದೆ, ಈ ವಂಚಕನಿಗೆ ಅಭಯ ನೀಡುವ ಶಕ್ತಿ ಜನಾರ್ದನರೆಡ್ಡಿಗೆ ಎಲ್ಲಿಂದ ಬರಬೇಕು? ರೆಡ್ಡಿಯಂತಹ ಕುಖ್ಯಾತರಿಂದ ಪಡೆದ ಹಣವನ್ನು ಭಾರೀ ಪ್ರಮಾಣದಲ್ಲಿ ಸುರಿದ ಪಕ್ಷಗಳು ಪರೋಕ್ಷವಾಗಿ ಆ್ಯಂಬಿಡೆಂಟ್ ವಂಚನೆಯಲ್ಲಿ ಭಾಗಿಯಾಗಿಲ್ಲವೇ? ಅಷ್ಟೇ ಅಲ್ಲ, ಇದೇ ರೆಡ್ಡಿಗಳು ಸುರಿದ ಹಣವನ್ನು ಬಾಚಿಕೊಂಡು ಅವರು ಹೇಳಿದ ಪಕ್ಷಗಳಿಗೆ ಮತ ಹಾಕಿದ ಮತದಾರರೂ ಈ ವಂಚನೆಯಲ್ಲಿ ತಮ್ಮದೇ ಕೊಡುಗೆಗಳನ್ನು ನೀಡಿದ್ದಾರೆ. ಆದುದರಿಂದ ಆ್ಯಂಬಿಡೆಂಟ್‌ನಂತಹ ಕಂಪೆನಿಗಳ ಮಾಲಕರನ್ನು ದೂಷಿಸುವಾಗ ನಾವೆಲ್ಲರೂ ನಮ್ಮ ನಮ್ಮ ಪಾಲು ಈ ವಂಚನೆಯಲ್ಲಿ ಎಷ್ಟಿದೆ ಎನ್ನುವುದನ್ನು ಎದೆ ಮುಟ್ಟಿ ನೋಡಿಕೊಳ್ಳಬೇಕು. ರಾಜಕೀಯದ ಮುಖವಾಡದಲ್ಲಿ ನಾಡನ್ನು ದೋಚುವ ರೆಡ್ಡಿಯಂತಹ ರಾಜಕಾರಣಿಗಳಿಗೂ, ಪತ್ರಕರ್ತರ ವೇಷದಲ್ಲಿ ಈ ಕಂಪೆನಿಯಿಂದ ಕೋಟಿ ಕೋಟಿ ಬಾಚಿಕೊಂಡಿರುವ ಟಿವಿ ಚಾನೆಲ್‌ಗಳ ಮುಖ್ಯಸ್ಥರಿಗೂ ದೊಡ್ಡ ವ್ಯತ್ಯಾಸವೇನೂ ಇಲ್ಲ. ಕಂಪೆನಿಯ ವಂಚನೆಯಲ್ಲಿ ಇವರು ಸಮಾನ ಭಾಗೀದಾರರು. ಅಥವಾ ಈ ರಾಜಕಾರಣಿಗಳಿಗಿಂತಲೂ ಪತ್ರಿಕೆಯ ವೇಷದಲ್ಲಿರುವ ಈ ‘ಬ್ಲಾಕ್‌ಮೇಲರ್’ಗಳೇ ಹೆಚ್ಚು ಅಪಾಯಕಾರಿಗಳು. ಇವರು ಪ್ರತಿ ದಿನ ಟಿವಿ ಮೂಲಕ ಸಮಾಜಕ್ಕೆ ಒಳಿತನ್ನು ಬೋಧಿಸುತ್ತಾರೆ.

ರಾಜಕಾರಣಿಗಳನ್ನು ಟೀಕಿಸುವ, ತಿದ್ದುವ ಮಾತುಗಳನ್ನಾಡುತ್ತಾರೆ. ಆದರೆ ಆಳದಲ್ಲಿ ಇವರೂ ವಂಚಕರ ಜೊತೆಗೆ ಕೈಜೋಡಿಸಿಕೊಂಡಿರುತ್ತಾರೆ. ಇವರಿಂದಾಗಿ ಮಾಧ್ಯಮಗಳ ‘ವಿಶ್ವಾಸಾರ್ಹತೆ’ಗೆ ಭಾರೀ ಧಕ್ಕೆಯಾಗುತ್ತದೆ. ಮುಂದೆ ಯಾವುದೇ ರಾಜಕೀಯ ನಾಯಕರ ಭ್ರಷ್ಟಾಚಾರಗಳನ್ನು ಬಯಲುಗೊಳಿಸುವ ಸಂದರ್ಭದಲ್ಲಿ ಪತ್ರಕರ್ತರ ಮುಂದೆ ನೈತಿಕ ಪ್ರಶ್ನೆ ಎದುರಾಗುತ್ತದೆ. ‘ಇದರಲ್ಲಿ ನಿಜವೆಷ್ಟು, ಸುಳ್ಳೆಷ್ಟು’ ಎಂದು ಜನರು ಅನುಮಾನ ಪಡುವಂತಾಗುತ್ತದೆ. ಇದರ ಅಂತಿಮ ಲಾಭವನ್ನೂ ಆ್ಯಂಬಿಡೆಂಟ್‌ನಂತಹ ವಂಚಕರು, ಜನಾರ್ದನರೆಡ್ಡಿಯಂತಹ ರಾಜಕಾರಣಿಗಳೇ ತಮ್ಮದಾಗಿಸಿಕೊಳ್ಳುತ್ತಾರೆ. ಆದುದರಿಂದ, ಈ ವಂಚಕರ ಜೊತೆಗೆ ಪತ್ರಕರ್ತರೇನಾದರೂ ಶಾಮೀಲಾಗಿದ್ದರೆ ಅವರನ್ನು ತಕ್ಷಣ ತನಿಖಾಧಿಕಾರಿಗಳು ಬಂಧಿಸಬೇಕಾಗಿದೆ. ಇಂತಹ ವಂಚನೆಗೈದು ಸರಕಾರದ ಮೇಲೆ ಒತ್ತಡ ಹಾಕಿ ಪಾರಾಗಬಹುದು ಎನ್ನುವುದು ಗೊತ್ತಾದರೆ, ಪತ್ರಕರ್ತರ ವೇಷದಲ್ಲಿ ಬ್ಲಾಕ್‌ಮೇಲರ್‌ಗಳ ಸಂಖ್ಯೆ ಹೆಚ್ಚಾಗುತ್ತದೆ. ಇವು ಇನ್ನಷ್ಟು ವಂಚಕರನ್ನು ಸೃಷ್ಟಿಸುತ್ತದೆ. ಮಾಧ್ಯಮ ಕ್ಷೇತ್ರವನ್ನು ಇನ್ನಷ್ಟು ಭ್ರಷ್ಟಗೊಳಿಸುತ್ತದೆ.

ಒಂದನ್ನು ನಾವು ಗಮನಿಸಬೇಕು. ಸುಲಭ ದಾರಿಯಲ್ಲಿ ಹಣ ದುಪ್ಪಟ್ಟು ಮಾಡಿಕೊಡುತ್ತೇವೆ, ನಿಮ್ಮ ಹಣವನ್ನು ನಮ್ಮಲ್ಲಿ ಹೂಡಿ ಎಂದು ಹೇಳುವ ನೂರಾರು ಕಂಪೆನಿಗಳು ನಮ್ಮ ನಡುವೆ ಹುಟ್ಟಿಕೊಳ್ಳುತ್ತ್ತಿವೆ ಮತ್ತು ಮುಳುಗುತ್ತ್ತಿವೆ. ಪೊಲೀಸ್ ಅಧಿಕಾರಿಗಳೇ ಇಂತಹ ಕಂಪೆನಿಗಳಲ್ಲಿ ಹಣ ಹೂಡಿ, ಸಾರ್ವಜನಿಕವಾಗಿ ಹೇಳಿಕೊಳ್ಳಲಾಗದೇ ಒದ್ದಾಡಿದ್ದುಂಟು. ಹಾಗೆಯೇ ಸರಪಣಿಯ ಮೂಲಕ ಸುಲಭದಲ್ಲಿ ಹಣ ಮಾಡುವ ದಾರಿ ಹೇಳಿಕೊಡುವ ಭೂಪರೂ ಇದ್ದಾರೆ. ಅವರು ಹಣ ಮುಳುಗಿಸಿದಾಗ ಹಣ ಹೂಡಿದವರು ಅವರನ್ನು ವಂಚಕರೆಂದು ಕರೆದು, ತಮ್ಮನ್ನು ತಾವು ಸಂತ್ರಸ್ತರಾಗಿ ಬಿಂಬಿಸಿಕೊಳ್ಳಲು ಯತ್ನಿಸುತ್ತಾರೆ. ಸುಲಭದಲ್ಲಿ ಹಣ ಮಾಡುವುದು ಎಂದರೆ ಯಾರನ್ನೋ ವಂಚಿಸಿ ಹಣ ಮಾಡುವುದು ಎಂದರ್ಥ. ಆ ವಂಚನೆಗೆ ಹಣ ಹೂಡುವುದೇ ಮೊದಲ ತಪ್ಪು. ಆದುದರಿಂದ, ಮೊತ್ತ ಮೊದಲು ಸುಲಭದಲ್ಲಿ ಹಣ ಗಳಿಸುವ ಮನಸ್ಥಿತಿಯಿಂದ ಸಾರ್ವಜನಿಕರು ಹೊರ ಬರಬೇಕು. ಇಂತಹ ಮೋಸದ ಕಂಪೆನಿಗಳಿಗೆ ಹಣ ಹೂಡಿ ಕೂತು ಉಣ್ಣುವ ಕನಸು ಬಿಟ್ಟು, ತಮ್ಮದೇ ಸಹಕಾರಿ ಬಳಗವೊಂದನ್ನು ಕಟ್ಟಿ ಸಣ್ಣ ಪುಟ್ಟ ಉದ್ದಿಮೆಗಳನ್ನು ಮಾಡಿದರೆ ಅದರಿಂದ ಸಮಾಜಕ್ಕೂ ಒಳಿತಾಗುತ್ತದೆ. ವಂಚಕರಿಗೆ ಹಣ ಕೊಟ್ಟು ಕೈ ಸುಟ್ಟುಕೊಳ್ಳುವುದೂ ತಪ್ಪುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News