ಶಬರಿಮಲೆ ವಿವಾದ ಚರ್ಚೆಗೆ ನಾಳೆ ಸರ್ವಪಕ್ಷ ಸಭೆ

Update: 2018-11-14 03:59 GMT

ತಿರುವನಂತಪುರ, ನ.14: ಶಬರಿಮಲೆ ವಿವಾದದ ಬಗ್ಗೆ ಚರ್ಚಿಸಲು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗುರುವಾರ (ನವೆಂಬರ್ 15) ಸರ್ವಪಕ್ಷಗಳ ಸಭೆ ಕರೆದಿದ್ದಾರೆ. ಅಯ್ಯಪ್ಪ ದೇವಸ್ಥಾನಕ್ಕೆ ಎಲ್ಲ ವಯಸ್ಸಿನ ಮಹಿಳೆಯರೂ ಪ್ರವೇಶಿಸಲು ಅವಕಾಶ ನೀಡಿದ ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ವ್ಯಾಪಕ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸರ್ವಪಕ್ಷ ಸಭೆ ವಿಶೇಷ ಮಹತ್ವ ಪಡೆದಿದೆ.

ಸುಪ್ರೀಂಕೋರ್ಟ್ ಸೆಪ್ಟೆಂಬರ್ 18ರಂದು ನೀಡಿದ್ದ ತೀರ್ಪಿಗೆ ತಡೆಯಾಜ್ಞೆ ನೀಡಲು ನಿರಾಕರಿಸಿದ ಬೆನ್ನಲ್ಲೇ ಕೇರಳ ಸರ್ಕಾರ ಸರ್ವಪಕ್ಷ ಸಭೆ ಕರೆದಿದೆ. ಜನವರಿ 22ರಂದು ಪರಾಮರ್ಶನಾ ಅರ್ಜಿಗಳ ವಿಚಾರಣೆ ನಡೆಸಲು ಸುಪ್ರೀಂ ನಿರ್ಧರಿಸಿದೆ.

ಎರಡು ತಿಂಗಳ ಅವಧಿಯ "ಮಂಡಲ ಮಕರವಿಳಕ್ಕು" ಋತು ನವೆಂಬರ್ 17ರಂದು ಆರಂಭವಾಗುತ್ತಿದ್ದು, ಭಕ್ತರಿಗೆ ಕಲ್ಪಿಸಿರುವ ಸೌಕರ್ಯಗಳ ಬಗ್ಗೆ ಕೂಡಾ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ಉನ್ನತ ಮೂಲಗಳು ಹೇಳಿವೆ.

ಮಾಸಿಕ ಪೂಜೆಗೆ ಅಕ್ಟೋಬರ್‌ ನಲ್ಲಿ ದೇಗುಲ ತೆರೆದಾಗ ಮತ್ತು ಈ ತಿಂಗಳು ಎರಡು ದಿನ ಕಾಲ ದೇವಾಲಯ ತೆರೆದ ಸಂದರ್ಭದಲ್ಲಿ ಭಕ್ತರಿಂದ ವ್ಯಾಪಕ ಪ್ರತಿಭಟನೆ ನಡೆದಿತ್ತು. ಈ ಸಂಬಂಧ 3,700ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದ್ದು, 546 ಪ್ರಕರಣಗಳು ದಾಖಲಾಗಿವೆ. ಕಳೆದ ವಾರ ಅಯ್ಯಪ್ಪ ದರ್ಶನಕ್ಕೆ ಅವಕಾಶ ಕೋರಿ 500 ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News