ಲಂಡನ್ ನಲ್ಲಿ ಬಿಲ್ಲು ಬಾಣಗಳ ದಾಳಿಗೆ ಭಾರತ ಮೂಲದ ಗರ್ಭಿಣಿ ಸಾವು

Update: 2018-11-14 06:06 GMT

ಲಂಡನ್, ನ.14: ಬಿಲ್ಲು–ಬಾಣಗಳ ದಾಳಿಗೆ ಭಾರತ ಮೂಲದ ಗರ್ಭಿಣಿ ಮೃತಪಟ್ಟ ಘಟನೆ ಪೂರ್ವ ಲಂಡನ್ ನ ಇಲ್ಫೋರ್ಡ್ ಪ್ರದೇಶದಲ್ಲಿ ನಡೆದಿದೆ. ಸನಾ ಮುಹಮ್ಮದ್ (35) ಮೃತ ಮಹಿಳೆ. ಈಕೆಯನ್ನು ಮಾಜಿ ಪತಿ ಎಂಬಾತ ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ. ಆತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಯಾರೂ ಇಲ್ಲದೆ ವೇಳೆ  ಸನಾ ಮನೆಗೆ ನುಗ್ಗಿದ ದುಷ್ಕರ್ಮಿ ಬಿಲ್ಲು ಬಾಣಗಳಿಂದ ದಾಳಿ ನಡೆಸಿ ಪರಾರಿಯಾಗಿದ್ದಾನೆ. ಗಂಭೀರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಸನಾಳನ್ನು ನೋಡಿದ ಆಕೆಯ ಪತಿ ಮುಹಮ್ಮದ್ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗಿಲ್ಲ. ದುಷ್ಕರ್ಮಿ ಬಿಟ್ಟ ಬಾಣ ಸನಾ ಹೊಟ್ಟೆಯನ್ನು ಸೀಳಿದೆ. ಆದರೆ ಗರ್ಭ ಕೋಶಕ್ಕೆ ಏನೂ ಆಗಿಲ್ಲ. ವೈದ್ಯರು ಸಿಸೇರಿಯನ್ (ಶಸ್ತ್ರಚಿಕಿತ್ಸೆ) ಮೂಲಕ ಹೊಟ್ಟೆಯಲ್ಲಿದ್ದ ಮಗುವನ್ನು ಹೊರ ತೆಗೆದಿದ್ದಾರೆ. ಮಗು  ಆರೋಗ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸನಾರ ಮಾಜಿ ಪತಿಯನ್ನು ಬಂಧಿಸಿದ್ದಾರೆ. ಈತ ಪೂರ್ವದ್ವೇಷದ ಹಿನ್ನೆಲೆಯಲ್ಲಿ ತನ್ನ ಮಾಜಿ ಪತ್ನಿಯನ್ನು ಕೊಂದಿರುವುದಾಗಿ ಪೊಲೀಸರು ಗುಮಾನಿ ವ್ಯಕ್ತಪಡಿಸಿದ್ದಾರೆ.

ಸನಾ ಮೂಲ ಹೆಸರು ದೇವಿ. ಆಕೆ ಮೊದಲು ರಾಮನ್ಡೊಗೆ ಎಂಬಾತನನ್ನು ಮದುವೆಯಾಗಿದ್ದರು. ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ಏಳು ವರ್ಷಗಳ ಹಿಂದೆ ರಾಮನ್ಡೊಗೆ ವಿಚ್ಚೇದನ ನೀಡಿದ್ದರು. ಬಳಿಕ ಇಮ್ತಿಯಾಝ್ ಮುಹಮ್ಮದ್ ಎಂಬವರನ್ನು ಮದುವೆಯಾದ ದೇವಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ತನ್ನ ಹೆಸರನ್ನು ಸನಾ ಮುಹಮ್ಮದ್ ಎಂದು ಬದಲಾಯಿಸಿಕೊಂಡಿದ್ದರು. ಮುಹಮ್ಮದ್ ಮೂಲಕ ಸನಾ ಮೂವರು ಮಕ್ಕಳನ್ನು ಪಡೆದಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News