ಮಹಿಳೆಯ ಹೊಟ್ಟೆಯಿಂದ ಮಂಗಳಸೂತ್ರ, ಬಳೆ, ಮೊಳೆಗಳನ್ನು ಹೊರತೆಗೆದ ವೈದ್ಯರು

Update: 2018-11-14 08:20 GMT

ಅಹ್ಮದಾಬಾದ್, ನ.14:  ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರ ಹೊಟ್ಟೆಯಿಂದ ಅಹ್ಮದಾಬಾದ್ ಸಿವಿಲ್ ಆಸ್ಪತ್ರೆಯ ವೈದ್ಯರು ಶಸ್ತ್ರಕ್ರಿಯೆ ಮೂಲಕ ಮಂಗಳಸೂತ್ರ, ಬಳೆಗಳು  ಕಬ್ಬಿಣದ ಮೊಳೆಗಳ ಸಹಿತ ಹಲವಾರು ಲೋಹದ ವಸ್ತುಗಳನ್ನು ಹೊರತೆಗೆದಿದ್ದಾರೆ. ಈ ವಸ್ತುಗಳ ಒಟ್ಟು ತೂಕ ಸುಮಾರು ಒಂದೂವರೆ ಕೆಜಿಯಷ್ಟಿತ್ತು.

ಸಂಗೀತಾ ಎಂಬ ಈ ಮಹಿಳೆ ಅತ್ಯಂತ ಅಪರೂಪದ ಕಾಯಿಲೆ ಅಕ್ಯುಫೇಗಿಯಾದಿಂದ ಬಳಲುತ್ತಿದ್ದಳು. ಈ ರೋಗದಿಂದ ಬಳಲುವವರು  ಲೋಹದ ವಸ್ತುಗಳನ್ನು ತಿನ್ನುತ್ತಾರೆಂದು ವೈದ್ಯರು ಹೇಳುತ್ತಾರೆ.

ಮಹಿಳೆಯ ಉದರದಲ್ಲಿ ಮೇಲೆ ತಿಳಿಸಿದ ವಸ್ತುಗಳ ಹೊರತಾಗಿ ಬೋಲ್ಟ್‍ಗಳು, ಸೇಫ್ಟಿ ಪಿನ್, ಹೇರ್ ಪಿನ್, ಬ್ರೇಸ್‍ಲೆಟ್, ಚೈನ್, ಲೋಹದ ಉಂಗುರ, ಬಳೆಗಳು ಕೂಡ ಇದ್ದವು. ಶಸ್ತ್ರಕ್ರಿಯೆ ಸುಮಾರು ಎರಡು ಗಂಟೆಗಳ ಕಾಲ ನಡೆಯಿತು ಎಂದು ಡಾ. ನಿತಿನ್ ಪರ್ಮಾರ್ ತಿಳಿಸಿದ್ದಾರೆ.

ನಗರದ ರಸ್ತೆಗಳಲ್ಲಿ ಅಲೆದಾಡುತ್ತಿದ್ದ ಆಕೆಯನ್ನು ಮೊದಲು ಸರಕಾರಿ ಮಾನಸಿಕ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆಕೆ ಹೊಟ್ಟೆ ನೋವು ಎಂದು ದೂರಿದ್ದರಿಂದ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆಯ ಹೊಟ್ಟೆಯ ಭಾಗ ಕಲ್ಲಿನಂತೆ ಗಟ್ಟಿಯಾಗಿದ್ದನ್ನು ಗಮನಿಸಿದ ವೈದ್ಯರು  ಎಕ್ಸ್-ರೇ ತೆಗೆದು ನಂತರ ಶಸ್ತ್ರಕ್ರಿಯೆ ನಡೆಸಿದ್ದರು. ಆಕೆ ನುಂಗಿದ ಸೇಫ್ಟಿ ಪಿನ್‍ಗಳು ಶ್ವಾಸಕೋಶದ ಹೊರಗೆ ನೇತಾಡುತ್ತಿದ್ದವಲ್ಲದೆ ಹೊಟ್ಟೆಯನ್ನೂ ಹಾನಿಗೊಳಿಸಿತ್ತು ಎಂದು ಡಾ ಪರ್ಮಾರ್ ಹೇಳಿದ್ದಾರೆ.

ಆಕೆಯ ಸ್ಥಿತಿ ಈಗ ಸ್ಥಿರವಾಗಿದೆಯೆಂದು ವೈದ್ಯರು ತಿಳಿಸಿದ್ದಾರೆ. ಮಹಾರಾಷ್ಟ್ರದ ಶಿರ್ಡಿ ಮೂಲದ ಈ ಮಹಿಳೆಯ ಕುಟುಂಬವನ್ನು ಪತ್ತೆ ಹಚ್ಚಲು ಸದ್ಯ ಯತ್ನಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News