ರಫೇಲ್ ಒಪ್ಪಂದ ಪರಿಶೀಲಿಸುವುದು ತಜ್ಞರ ಕೆಲಸ, ನ್ಯಾಯಾಲಯದ್ದಲ್ಲ: ಸುಪ್ರೀಂ ಕೋರ್ಟಿಗೆ ಕೇಂದ್ರದ ಆಕ್ಷೇಪ

Update: 2018-11-14 08:40 GMT

ಹೊಸದಿಲ್ಲಿ, ನ.14:  “ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದ ವಿವರಗಳನ್ನು ಪರಿಶೀಲಿಸುವುದು ತಜ್ಞರ ಕೆಲಸವೇ ಹೊರತು ನ್ಯಾಯಾಲಯದ್ದಲ್ಲ” ಎಂದು ರಫೇಲ್ ಒಪ್ಪಂದದ ಕುರಿತಂತೆ ಪರಿಶೀಲಿಸುತ್ತಿರುವ ಸುಪ್ರೀಂ ಕೋರ್ಟಿಗೆ ಕೇಂದ್ರ ತನ್ನ ಆಕ್ಷೇಪ ಸೂಚಿಸಿದೆ.

ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಕುರಿತಂತೆ ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಲಾಗಿರುವ ಹಲವು ಅಪೀಲುಗಳ ಮೇಲಿನ ವಿಚಾರಣೆಯನ್ನು ಇಂದು ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಾಗ ಕೇಂದ್ರದ ಈ ಆಕ್ಷೇಪ ಬಂದಿದೆ. ``ರಫೇಲ್ ಒಪ್ಪಂದವನ್ನು ವಿಮರ್ಶಿಸಲು ನ್ಯಾಯಾಲಯ ಸಮರ್ಥವೇ?'' ಎಂಬ ಪ್ರಶ್ನೆಯನ್ನೂ ಕೇಂದ್ರದ ಪರ ವಕೀಲರು ಕೇಳಿದ್ದಾರೆ.

ಒಟ್ಟು 36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸುವ ಬಗ್ಗೆ ಹೇಗೆ ನಿರ್ಧಾರ ಕೈಗೊಳ್ಳಲಾಯಿತು ಎಂದು ಸರಕಾರ ಸೋಮವಾರ ಸೀಲ್ ಮಾಡಲ್ಪಟ್ಟ ಲಕೊಟೆಯಲ್ಲಿ ಸುಪ್ರೀಂ ಕೋರ್ಟ್ ಗೆ  ಹಾಗೂ ಒಪ್ಪಂದದ ಕುರಿತಂತೆ ತನಿಖೆ ನಡೆಸುವಂತೆ ಕೋರಿರುವ ಅಪೀಲುದಾರರಿಗೆ ಸಲ್ಲಿಸಿತ್ತು. ಗೌಪ್ಯವಾಗಿರಿಸಲಾಗಿರುವ ರಫೇಲ್ ದರ ವಿವರಗಳನ್ನೂ ಸೀಲ್ ಮಾಡಲ್ಪಟ್ಟ ಲಕೋಟೆಯಲ್ಲಿ ಕೇಂದ್ರ ಈಗಾಗಲೇ ಸಲ್ಲಿಸಿದೆ.

ರಫೇಲ್ ದರಗಳ ಗೌಪ್ಯತೆ ರಕ್ಷಿಸುವುದನ್ನು ಸಮರ್ಥಿಸಿದ ಅಟಾರ್ನಿ ಜನರಲ್ ವೇಣುಗೋಪಾಲ್, “ದರಗಳಿಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿಗಳನ್ನು ಬಹಿರಂಗಪಡಿಸಿದಲ್ಲಿ ನಮ್ಮ ವಿರೋಧಿಗಳು ಅದರ ಲಾಭ ಪಡೆಯಬಹುದು'' ಎಂದರು. ``ದರಗಳಿಗೆ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿಯನ್ನು ನ್ಯಾಯಾಲಯಕ್ಕೆ ಒದಗಿಸಲು ಸಾಧ್ಯವಿಲ್ಲ. ನಾನೇ ಅದನ್ನು ನೋಡದಿರಲು ನಿರ್ಧರಿಸಿದೆ. ಏನಾದರೂ ಸೋರಿಕೆಯಾದರೆ ನಂತರ ನನ್ನ ಕಚೇರಿಯನ್ನು ಜವಾಬ್ದಾರನನ್ನಾಗಿಸಬಹುದು. ಸಂಸತ್ತಿಗೂ ಸಂರ್ಪೂಣ ಮಾಹಿತಿ ನೀಡಲಾಗಿಲ್ಲ. ವಿಮಾನದ ಹೊರ ಮೈಕಟ್ಟಿನ ದರ ವಿವರಗಳನ್ನು ಮಾತ್ರ ನೀಡಲಾಗಿದೆ. ಸರ್ವಸಜ್ಜಿತ ವಿಮಾನದ ದರಗಳ ಬಗ್ಗೆ ಮಾಹಿತಿ ನೀಡಲಾಗಿಲ್ಲ'' ಎಂದು ಅವರು ಹೇಳಿದರು.

``ನ್ಯಾಯಾಲಯದ ಮೇಲಿನ ಗೌರವದಿಂದ ಸಂಪೂರ್ಣ ದರ ವಿವರಗಳನ್ನು ಸರಕಾರ ಅದಕ್ಕೆ ನೀಡಿದೆ'' ಎಂದೂ ಅವರು ತಿಳಿಸಿದರು.

ಸರಕಾರ ಗೌಪ್ಯತಾ ವಿಚಾರವನ್ನೇ ಮುಂದಿಟ್ಟುಕೊಂಡು ಬಚಾವಾಗಲು ಯತ್ನಿಸುತ್ತಿದೆ ಎಂದು ವಕೀಲರೂ ರಫೇಲ್ ಒಪ್ಪಂದದ ಕುರಿತಂತೆ ತನಿಖೆಗೆ ಕೋರಿ ಅಪೀಲು ಸಲ್ಲಿಸಿದವರಲ್ಲಿ ಒಬ್ಬರಾಗಿರುವ ಪ್ರಶಾಂತ್ ಭೂಷಣ್ ಅವರು ಹೇಳಿದಾಗ ವೇಣುಗೋಪಾಲ್ ಮೇಲಿನಂತೆ ಪ್ರತಿಕ್ರಿಯಿಸಿದರು.

ನ್ಯಾಯಾಲಯ ವಾಯುಪಡೆಯ ಅಧಿಕಾರಿಯೊಬ್ಬರ ಬಳಿ ಕೆಲ ಪ್ರಶ್ನೆಗಳನ್ನು ಕೇಳಬೇಕಿದೆ ವಿಚಾರಣೆಯ ಸಂದರ್ಭ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಹೇಳಿದಾಗ ಅಧಿಕಾರಿ ನ್ಯಾಯಾಲಯವನ್ನು 10 ನಿಮಿಷಗಳಲ್ಲಿ ತಲುಪುತ್ತಾರೆಂದು ಅಟಾರ್ನಿ ಜನರಲ್ ತಿಳಿಸಿದರು.  ವಿಚಾರಣೆ ಆರಂಭವಾಗುವಾಗಲೇ ಅಧಿಕಾರಿ ಹಾಜರಿರಬೇಕಿತ್ತೆಂದು ಆಗ ಮುಖ್ಯ ನ್ಯಾಯಮೂರ್ತಿ ಆಕ್ಷೇಪ ಸೂಚಿಸಿದರು.

``ನಾವು ಅನುಮತಿಸಿದರೆ ಮಾತ್ರ ದರಗಳ ವಿವರ ಸಾರ್ವಜನಿಕವಾಗಿ ಲಭ್ಯವಾಗುತ್ತದೆ. ಈಗ ಅದರ ಅಗತ್ಯವಿಲ್ಲ ಹಾಗೂ ಈ ಬಗ್ಗೆ ನಾವು ನಿರ್ಧಾರವನ್ನೂ ಕೈಗೊಂಡಿಲ್ಲ'' ಎಂದು ಮುಖ್ಯ ನ್ಯಾಯಮೂರ್ತಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News