ಹೆಚ್ಚಿನ ನಕಲಿ ಸುದ್ದಿಗಳೆಲ್ಲವೂ ಮೋದಿ ಪರ ಪೋಸ್ಟ್ ಗಳು: ಬಿಬಿಸಿ ವರದಿ

Update: 2018-11-14 11:10 GMT

ಚೆನ್ನೈ, ನ.14:  ಮೋದಿ ಪರ ರಾಜಕೀಯ ಚಟುವಟಿಕೆಗಳಿಗೆ ಸಂಬಂಧಿಸಿದಂತೆ  ನಕಲಿ ಸುದ್ದಿಗಳು ಒಂದರ ಮೇಲೊಂದರಂತೆ ಬರುತ್ತಿವೆ ಎಂದು ಭಾರತದಲ್ಲಿ ನಕಲಿ ಸುದ್ದಿಗಳ ಹಾವಳಿಗೆ ಸಂಬಂಧಿಸಿದಂತೆ ಬಿಬಿಸಿ ವರದಿಯೊಂದು ಹೇಳಿದೆ. ಆಡಳಿತ ಪಕ್ಷವು ಪ್ರಧಾನಿ ಮೋದಿಗೆ ಸಂಬಂಧಿಸಿದಂತೆ ನಕಲಿ ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಾದ  ಟ್ವಿಟರ್, ವಾಟ್ಸ್ಯಾಪ್ ಮತ್ತು ಫೇಸ್‍ ಬುಕ್ ಮೂಲಕ ಹರಡುತ್ತಿವೆ ಎಂಬುದನ್ನು ಈ ವರದಿ ಸೂಚಿಸುತ್ತದೆ ಎಂದೇ ತಿಳಿಯಲಾಗಿದೆ.

ಭಾರತದ ಪ್ರಗತಿ, ಹಿಂದು  ಶಕ್ತಿಯ ಪುನರುಜ್ಜೀವನ ಎಂದೆಲ್ಲಾ ಹೇಳಿಕೊಂಡು ನಕಲಿ ಸುದ್ದಿಗಳನ್ನು ಅವುಗಳ ಸತ್ಯಾಸತ್ಯತೆಯ ಬಗ್ಗೆ ಅರಿಯುವ ಗೋಜಿಗೆ ಹೋಗದೆ ಶೇರ್ ಮಾಡಲಾಗುತ್ತಿದೆ. ಈ ರೀತಿ ಶೇರ್ ಮಾಡುವ ಮೂಲಕ ಕೆಲ ಜನರು ತಾವು ದೇಶ ಕಟ್ಟುವ ಕೆಲಸದಲ್ಲಿ ತೊಡಗಿದ್ದೇವೆ ಎಂಬ ಭಾವನೆ ಹೊಂದಿದ್ದಾರೆಂದೂ ಬಿಬಿಸಿಯ ಅಧ್ಯಯನದಿಂದ ತಿಳಿದು ಬಂದಿದೆ.

ಸೋಮವಾರ ಬಿಬಿಸಿ ನಗರದಲ್ಲಿ ಆಯೋಜಿಸಿದ್ದ `ಬಿಯಾಂಡ್ ಫೇಕ್ ನ್ಯೂಸ್' ಸಮ್ಮೇಳನದಲ್ಲಿ ಮಾತನಾಡಿದ ಹಿರಿಯ ನಟ  ಪ್ರಕಾಶ್ ರೈ ದೇಶ ಎದುರಿಸುತ್ತಿರುವ ನಕಲಿ ಸುದ್ದಿ ಹಾವಳಿಗೆ ಬಿಜೆಪಿ ಕಾರಣ ಎಂದರು. ``ರಾಷ್ಟ್ರವಾದ, ಧರ್ಮ ಮತ್ತು ದೇಶಭಕ್ತಿಯನ್ನು ಅವರು ಒಂದಕ್ಕೊಂದು ಜೋಡಿಸಿ ನಂತರ ತಮ್ಮ ಅಜೆಂಡಾ ಮುಂದುವರಿಸಿಕೊಂಡು ಹೋಗಲು ಐತಿಹಾಸಿಕ ವಾಸ್ತವಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಅಸ್ಪಷ್ಟಗೊಳಿಸುತ್ತಿದ್ದಾರೆ,'' ಎಂದರು.

``ನಕಲಿ ಸುದ್ದಿಗಳೆಂಬ ಕಾಳ್ಗಿಚ್ಚಿನಲ್ಲಿ ಮರಗಳಂತಿರುವ ಜನರೂ ಈ  ನಕಲಿ ಸುದ್ದಿ ಪ್ರಸಾರಕ್ಕೆ ಜವಾಬ್ದಾರರು'' ಎಂದು ರೈ  ಹೇಳಿದರಲ್ಲದೆ  ಈ ಮೂಲಕ ಜನರು  ತಮ್ಮ ಮುಂದಿರುವ ಸುದ್ದಿಯನ್ನು  ಪರಾಮರ್ಶಿಸಿಯೇ ಫಾರ್ವರ್ಡ್ ಮಾಡಬೇಕೆಂಬ ಸಲಹೆಯನ್ನು ಸೂಚ್ಯವಾಗಿ ನೀಡಿದ್ದಾರೆ.

ಸಮ್ಮೇಳನದಲ್ಲಿ ಭಾಗವಹಿಸಿದ ಬಿಜೆಪಿ ವಕ್ತಾರ ನಾರಾಯಣ್ ತಿರುಪತಿ  ಈ ನಕಲಿ ಸುದ್ದಿಗಳು ಬಿಜೆಪಿ ಬೆಂಬಲಿತ ಅಜೆಂಡಾ ಅಲ್ಲ ಎಂದು ವಾದಿಸಿದರು.

ಸಾಮಾಜಿಕ ಜಾಲತಾಣ ಮತ್ತು ಜಾಹೀರಾತುಗಳ ಮೂಲಕ  ಸುಳ್ಳು ಮಾಹಿತಿಗಳನ್ನು ಹೇಗೆ ಪಸರಿಸಲಾಗುತ್ತಿದೆ ಎಂಬುದನ್ನು ಬಿಂಬಿಸುವ ನಾಟಕವನ್ನು ಥಿಯೇಟರ್ ನಿಶಾ ಈ ಸಂದರ್ಭ ಪ್ರಸ್ತುತ ಪಡಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News