‘ರೈತರ ಕೃಷಿ ಸಾಲ ಮನ್ನಾ’ ಅನುಮಾನ ಬೇಡ: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2018-11-14 13:41 GMT

ಬೆಂಗಳೂರು, ನ.14: ರೈತರು ಪಡೆದಿರುವ ಕೃಷಿ ಸಾಲ ಮನ್ನಾ ಮಾಡುವ ವಿಚಾರದಲ್ಲಿ ಯಾವುದೇ ಅನುಮಾನಗಳು ಬೇಡ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುನರುಚ್ಚರಿಸಿದ್ದಾರೆ.

ಬುಧವಾರ ಮಾಜಿ ಪ್ರಧಾನಿ ಪಂಡಿತ್ ಜವಾಹರ್‌ಲಾಲ್ ನೆಹರೂರವರ 129ನೆ ಜನ್ಮದಿನದ ಅಂಗವಾಗಿ ವಿಧಾನಸೌಧದ ಆವರಣದಲ್ಲಿರುವ ಅವರ ಪತ್ರಿಮೆ ಬಳಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಬಳಿಕ ಮುಖ್ಯಮಂತ್ರಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಸಾಲ ವಸೂಲಾತಿಗಾಗಿ ರೈತರಿಗೆ ಅನಗತ್ಯವಾಗಿ ತೊಂದರೆ ಕೊಟ್ಟರೆ ಬ್ಯಾಂಕ್ ಮ್ಯಾನೇಜರ್‌ಗಳನ್ನೆ ಬಂಧಿಸಬೇಕಾಗಬಹುದು ಎಂದು ಎಚ್ಚರಿಕೆ ನೀಡಿದ ಅವರು, ರೈತರ ಸಾಲ ಮನ್ನಾ ವಿಷಯಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಬರುತ್ತಿರುವ ಎಲ್ಲ ವರದಿಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ಸಾಲ ಮನ್ನಾ ವಿಚಾರದಲ್ಲಿ ಹಲವಾರು ಗೊಂದಲಗಳಾಗುತ್ತಿವೆ. ಅರ್ಹ ರೈತರ ಸಾಲವನ್ನು ಮನ್ನಾ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಆದರೆ, ನಮ್ಮ ಮುಂದೆ ಹೆಚ್ಚಾಗಿ ಕೃಷಿಯೇತರ ಸಾಲಗಳ ಪ್ರಕರಣಗಳೆ ಬರುತ್ತಿವೆ. ಮನೆಗಳನ್ನು ಕಟ್ಟಿಕೊಳ್ಳಲು ಸಾಲ ಮಾಡಿ, ಅದನ್ನು ತೀರಿಸದೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳು ಇವೆ ಎಂದು ಅವರು ಹೇಳಿದರು.

ರಾಜ್ಯ ಸರಕಾರವು ರೈತರ ಪರವಾಗಿದೆ. ಯಾವುದೇ ಕಾರಣಕ್ಕೂ ಆತ್ಮಸ್ಥೈರ್ಯ ಕಳೆದುಕೊಂಡು ಆತ್ಮಹತ್ಯೆಗೆ ಶರಣಾಗಿ, ತಮ್ಮ ಕುಟುಂಬಗಳನ್ನು ಬೀದಿಪಾಲು ಮಾಡಬೇಡಿ ಎಂದು ರೈತರಲ್ಲಿ ನಾನು ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಮಾಜಿ ಸಚಿವ ಜನಾರ್ದನ ರೆಡ್ಡಿ ವಿಚಾರದಲ್ಲಿ ರಾಜ್ಯ ಸರಕಾರ ಯಾವುದೇ ದ್ವೇಷದ ರಾಜಕಾರಣವನ್ನಾಗಲಿ, ಅಧಿಕಾರದ ದುರ್ಬಳಕೆಯಾಗಲಿ ಮಾಡುತ್ತಿಲ್ಲ. ತಪ್ಪು ಮಾಡಿದ್ದರೆ ಶಿಕ್ಷೆ ಆಗುತ್ತದೆ. ಪೊಲೀಸರ ತನಿಖೆಯಲ್ಲಿ ನಾನಾಗಲಿ, ನನ್ನ ಸಂಪುಟದ ಸಚಿವರಾಗಲಿ ಹಸ್ತಕ್ಷೇಪ ಮಾಡುತ್ತಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ಜನಾರ್ದನ ರೆಡ್ಡಿ ಅವರ ಆಪ್ತರೊಬ್ಬರು 18 ಕೋಟಿ ರೂ.ಗಳನ್ನು ತಿರುಪತಿ ಹುಂಡಿಗೆ ಹಾಕಿದ್ದೇವೆ ಎಂದಿದ್ದಾರೆ. ಇದು ವ್ಯಂಗ್ಯವೋ, ಸತ್ಯವೋ ಎಂಬುದು ನನಗೆ ಗೊತ್ತಿಲ್ಲ. ಈ ಬಗ್ಗೆ ನನಗೂ ಹೆಚ್ಚಿನ ಮಾಹಿತಿಯಿಲ್ಲ. ಈ ಬಗ್ಗೆ ಮಾಧ್ಯಮಗಳಲ್ಲಿ ಬಂದಿರುವ ಸುದ್ದಿಗಳನ್ನು ಗಮನಿಸಿದ್ದೇನೆ ಎಂದು ಅವರು ತಿಳಿಸಿದರು.

ದೇಶದ ಪ್ರಥಮ ಪ್ರಧಾನಿ ಪಂಡಿತ್ ಜವಾಹರ್‌ಲಾಲ್ ನೆಹರು, ನಾವು ಹುಟ್ಟುವ ಮುನ್ನವೇ ಪ್ರಧಾನಿಯಾಗಿ ಈ ದೇಶದ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದ್ದಾರೆ. ಅವರಿಗೆ ಮಕ್ಕಳು ಎಂದರೆ ತುಂಬಾ ಪ್ರೀತಿ. ಆದುದರಿಂದಲೇ, ಪ್ರತಿ ವರ್ಷ ನ.14ರಂದು ಅವರ ಹುಟ್ಟುಹಬ್ಬದ ಪ್ರಯುಕ್ತ ದೇಶಾದ್ಯಂತ ಮಕ್ಕಳ ದಿನಾಚರಣೆ ಆಚರಿಸಲಾಗುತ್ತದೆ ಎಂದು ಕುಮಾರಸ್ವಾಮಿ ಹೇಳಿದರು.

ಮಡಿಕೇರಿಯಲ್ಲಿ ಪತ್ರಕರ್ತ ಸಂತೋಷ್ ತಮ್ಮಯ್ಯರನ್ನು ಪೊಲೀಸರು ಬಂಧಿಸಿರುವ ವಿಚಾರದ ಕುರಿತು ತನಗೆ ಹೆಚ್ಚಿನ ಮಾಹಿತಿಯಿಲ್ಲ. ಅಧಿಕಾರಿಗಳ ಮಟ್ಟದಲ್ಲಿ ಮತ್ತು ಜಿಲ್ಲಾಮಟ್ಟದಲ್ಲಿ ಕೈಗೊಂಡಿರುವ ಕ್ರಮ ಅದಾಗಿದೆ. ಮಾಹಿತಿ ಪಡೆದ ಬಳಿಕ ನಾನು ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತೇನೆ ಎಂದು ಅವರು ತಿಳಿಸಿದರು.

ನ.17ರಂದು ಸರ್ವಪಕ್ಷ ಸಭೆ

ಮಹಾದಾಯಿ ನದಿ ನೀರು ಹಂಚಿಕೆ ಸಂಬಂಧ ನ್ಯಾಯಾಧೀಕರಣ ನೀಡಿರುವ ತೀರ್ಪು ಹಾಗೂ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚಿಸಲು ನ.17ರಂದು ಸಂಜೆ 5 ಗಂಟೆಗೆ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸರ್ವಪಕ್ಷಗಳ ಮುಖಂಡರ ಸಭೆ ಕರೆದಿದ್ದಾರೆ ಎಂದು ತಿಳಿದು ಬಂದಿದೆ.

ಟಿಪ್ಪು ಜಯಂತಿ ರದ್ದು ಇಲ್ಲ

ಟಿಪ್ಪು ಸುಲ್ತಾನ್ ಜಯಂತಿಯನ್ನು ರದ್ದು ಮಾಡುವುದಾಗಲಿ ಅಥವಾ ಅದರಲ್ಲಿ ಬದಲಾವಣೆ ಮಾಡುವ ಯಾವ ಪ್ರಸ್ತಾವನೆಯೂ ನಮ್ಮ ಮುಂದಿಲ್ಲ. ಸರಕಾರದ ಎಲ್ಲ ಕಾರ್ಯಕ್ರಮಗಳಲ್ಲೂ ಮುಖ್ಯಮಂತ್ರಿ ಭಾಗವಹಿಸಬೇಕೆಂದೇನು ಇಲ್ಲ. ಟಿಪ್ಪು ಜಯಂತಿಯೂ ಸರಕಾರಿ ಕಾರ್ಯಕ್ರಮ. ಅದರಲ್ಲಿ ನಮ್ಮ ಸರಕಾರದ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಟಿಪ್ಪು ಜಯಂತಿ ಹೆಸರಿನಲ್ಲಿ ಗೊಂದಲ ಸೃಷ್ಟಿಸಿರುವುದು ಒಂದು ಪಕ್ಷದ ರಾಜಕೀಯ ಲಾಭಕ್ಕಾಗಿ ಮಾತ್ರ. ಅವರೇ ಟಿಪ್ಪು ಜಯಂತಿಯಲ್ಲಿ ಭಾಗವಹಿಸಿರುವ ಚಿತ್ರಗಳು ನಮ್ಮ ಮುಂದಿದೆ. ಬೇರೆ ಯಾವ ಜಯಂತಿಯಲ್ಲೂ ಈ ರೀತಿಯ ಗೊಂದಲಗಳಿಲ್ಲ.

-ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News