ಗಾಂಧೀಜಿ, ನೆಹರೂ ಕುಟುಂಬಕ್ಕೆ ಕಳಂಕ ತರುವುದೇ ಆರೆಸ್ಸೆಸ್‌ನ ಮುಖ್ಯ ಸಿದ್ಧಾಂತ: ದಿನೇಶ್‌ ಗುಂಡೂರಾವ್

Update: 2018-11-14 13:56 GMT

ಬೆಂಗಳೂರು, ನ.14: ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಜವಾಹರ ಲಾಲ್ ನೆಹರೂ ವ್ಯಕ್ತಿತ್ವಕ್ಕೆ ಹಾಗೂ ಕುಟುಂಬಕ್ಕೆ ಕಳಂಕ ತರುವುದು ಆರೆಸ್ಸೆಸ್‌ನ ಪ್ರಮುಖ ಸಿದ್ಧಾಂತವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್ ಆರೋಪಿಸಿದರು.

ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದ ಸ್ವಾತಂತ್ರ ಸಂಗ್ರಾಮದಲ್ಲಿ ಹಾಗೂ ಸ್ವಾತಂತ್ರ ನಂತರದಲ್ಲಿ ದೇಶದ ಪ್ರಥಮ ಪ್ರಧಾನಿಯಾಗಿ ಜವಾಹರಲಾಲ್ ನೆಹರೂ ಮಾಡಿರುವ ತ್ಯಾಗ, ಕೊಡುಗೆಗಳನ್ನು ಜನಸಾಮಾನ್ಯರಿಂದ ದೂರ ಮಾಡುವ ನಿಟ್ಟಿನಲ್ಲಿ ಆರೆಸ್ಸೆಸ್ ಹಾಗೂ ಬಿಜೆಪಿ ವ್ಯವಸ್ಥಿತವಾಗಿ ಷಡ್ಯಂತ್ರಗಳನ್ನು ನಡೆಸುತ್ತಾ ಬರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆರೆಸ್ಸೆಸ್ ಹಾಗೂ ಬಿಜೆಪಿ ಜವಾಹರಲಾಲ್ ನೆಹರೂ, ಸುಭಾಷ್‌ ಚಂದ್ರ ಬೋಸ್ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ನಡುವೆ ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸಿ ಜನತೆಗೆ ತಪ್ಪು ಸಂದೇಶಗಳನ್ನು ನೀಡುತ್ತಿದ್ದಾರೆ. ಈ ನಾಯಕರ ಹೋರಾಟದ ಮಾರ್ಗಗಳಲ್ಲಿ ಭಿನ್ನತೆ ಇತ್ತೇ ವಿನಃ ಚಿಂತನೆಯಲ್ಲಿ, ದೇಶದ ಐಕ್ಯತೆಯ ವಿಷಯದಲ್ಲಿ ಒಂದೆ ದಾರಿಯಲ್ಲಿ ನಡೆದಿದ್ದಾರೆ. ಬಿಜೆಪಿ ಈ ನಾಯಕರನ್ನು ಬೇರ್ಪಡಿಸಿ ರಾಜಕೀಯ ಮಾಡಲು ಹೊರಟಿದೆ ಎಂದು ಅವರು ಕಿಡಿಕಾರಿದರು.

ದೇಶಕ್ಕಾಗಿ ಜವಾಹರ್‌ಲಾಲ್ ನೆಹರೂ ಸುಮಾರು 3ಸಾವಿರಕ್ಕೂ ಹೆಚ್ಚು ದಿನಗಳು ಜೈಲಿನಲ್ಲಿ ಕಳೆದಿದ್ದಾರೆ. ಆಗರ್ಭ ಶ್ರೀಮಂತ ಕುಟುಂಬದಿಂದ ಬಂದಿದ್ದರೂ ದೇಶಕ್ಕಾಗಿ ಎಲ್ಲವನ್ನು ತ್ಯಾಗ ಮಾಡಿದ್ದರು. ಆದರೆ, ಆರೆಸ್ಸೆಸ್‌ನ ಎಲ್ಲ ನಾಯಕರನ್ನು ಒಟ್ಟು ಸೇರಿಸಿದರೆ ದೇಶಕ್ಕಾಗಿ ಹತ್ತು ದಿವಸ ಜೈಲಿನಲ್ಲಿ ಕಳೆದಿರುವ ಉದಾಹರಣೆ ಸಿಗುವುದಿಲ್ಲ. ಇಂತವರು ದೇಶ ಪ್ರೇಮದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.

ನೂರು ವರ್ಷಗಳ ಇತಿಹಾಸವಿರುವ ಆರೆಸ್ಸೆಸ್‌ಗೆ ಇಂದಿಗೂ ಆದರ್ಶವಾಗುವಂತಹ ನಾಯಕನಿಲ್ಲ. ಹೀಗಾಗಿ ಕಾಂಗ್ರೆಸ್‌ನ ಧೀಮಂತ ನಾಯಕ ಸರ್ದಾರ್ ವಲ್ಲಭ ಬಾಯಿ ಪಟೇಲ್‌ರ ಮೂಲ ಚಿಂತನೆಗಳನ್ನು ತಿರುಚಿ, ಕೇಸರಿ ಮಯಗೊಳಿಸಿ, ತಮ್ಮ ನಾಯಕನೆಂದು ಬಿಂಬಿಸಲು ಹೊರಟಿದ್ದಾರೆ ಎಂದು ಅವರು ಆರೋಪಿಸಿದರು.

ಮಾಜಿ ಸಭಾಪತಿ ವೀರಣ್ಣ ಮತ್ತಿಗಟ್ಟಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯ ಸರ್ವಾಧಿಕಾರಿ ನಡವಳಿಕೆಯ ಬಗ್ಗೆ ಬಿಜೆಪಿ ನಾಯಕರಲ್ಲೆ ಭಿನ್ನಾಭಿಪ್ರಾಯವಿದೆ. ಇನ್ನು ಜನಸಾಮಾನ್ಯರಿಗೆ ಎಂತಹ ಭಾವನೆಯಿರಬಹುದು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜನತೆ ಎಲ್ಲವನ್ನು ನಿರ್ಧಾರ ಮಾಡಲಿದ್ದಾರೆ ಎಂದು ತಿಳಿಸಿದರು.

ಮಾಜಿ ಸಂಸತ್ ಸದಸ್ಯ ಹನುಮಂತಪ್ಪ ಮಾತನಾಡಿ, ಜವಾಹರ್‌ ಲಾಲ್ ನೆಹರೂ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗ ದೇಶದ ಅಭಿವೃದ್ಧಿ ಅಧೋಗತಿಯಲ್ಲಿತ್ತು. ಆ ನಂತರದಲ್ಲಿ ಪಂಚವಾರ್ಷಿಕ ಯೋಜನೆ, ಕೈಗಾರಿಕೆಗಳನ್ನು ಸ್ಥಾಪನೆ ಮಾಡುವ ಮೂಲಕ ಪ್ರಗತಿಯತ್ತ ಮುನ್ನಡೆಸಿದರು ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಬಿಇಎಲ್, ಬಿಎಚ್‌ಇಎಲ್, ಎಚ್‌ಎಎಲ್, ಎಚ್‌ಎಂಟಿ ಕಾರ್ಖಾನೆಗಳ ಸ್ಥಾಪನೆಯಾಗುವಲ್ಲಿ ಮಾಜಿ ಪ್ರಧಾನಿ ಜವಾಹರ್‌ಲಾಲ್ ನೆಹರೂ ಪಾತ್ರ ಮುಖ್ಯವಾಗಿತ್ತು. ಆದರೆ, ಈಗಿನ ಪ್ರಧಾನಿ ನರೇಂದ್ರ ಮೋದಿ ಈ ಕಂಪೆನಿಗಳಿಗೆ ಕಂಟಕವಾಗುವ ರೀತಿಯಲ್ಲಿ ಕಾನೂನುಗಳನ್ನು ಜಾರಿಗೆ ತರುತ್ತಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯರಾದ ವೆಂಕಟೇಶ್, ಪ್ರಕಾಶ್ ರಾಠೋಡ್ ಮತ್ತಿರರಿದ್ದರು.

ಪ್ರಧಾನಿ ನರೇಂದ್ರ ಮೋದಿ ಪ್ರಧಾನಿಯಾಗುತ್ತಿದ್ದಂತೆ ಬಿಜೆಪಿಯ ಹಿರಿಯ ನಾಯಕರಾದ ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ ಜೋಶಿ, ಸುಷ್ಮಾ ಸ್ವರಾಜ್, ಯಶವಂತ ಸಿನ್ಹಾ ಸೇರಿದಂತೆ ಹಲವು ನಾಯಕರನ್ನು ಮೂಲೆಗುಂಪು ಮಾಡಿದರು. ಇಂತಹ ಮನಸ್ಥಿತಿವುಳ್ಳವರಿಗೆ ಜವಾಹರ್‌ಲಾಲ್ ನೆಹರೂ ಹಾಗೂ ಸರ್ದಾರ್ ವಲ್ಲಭ ಬಾಯಿ ಪಟೇಲರ ಸಂಬಂಧದ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ.

-ದಿನೇಶ್‌ ಗುಂಡೂರಾವ್, ಅಧ್ಯಕ್ಷ ಕೆಪಿಸಿಸಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News