ಹಜ್‌ ಯಾತ್ರೆ-2019: ರಾಜ್ಯದ ಕೋಟಾ ಹೆಚ್ಚಳಕ್ಕೆ ಸಚಿವ ಝಮೀರ್‌ ಅಹ್ಮದ್ ಮನವಿ

Update: 2018-11-14 14:46 GMT

ಬೆಂಗಳೂರು, ನ.14: ರಾಜ್ಯದ ಹಜ್‌ ಯಾತ್ರಿಗಳ ಕೋಟಾವನ್ನು 6624 ರಿಂದ ಕನಿಷ್ಠ 9 ಸಾವಿರಕ್ಕೆ ಹೆಚ್ಚಳ ಮಾಡಬೇಕು ಎಂದು ಭಾರತೀಯ ಹಜ್ ಸಮಿತಿಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಬಿ.ಝೆಡ್. ಝಮೀರ್ ಅಹ್ಮದ್‌ ಖಾನ್ ಮನವಿ ಮಾಡಿದ್ದಾರೆ.

ಬುಧವಾರ ನಗರದ ತಿರುಮೇನಹಳ್ಳಿಯಲ್ಲಿರುವ ಹಜ್‌ ಭವನದಲ್ಲಿ ಭಾರತೀಯ ಹಜ್ ಸಮಿತಿಯ ಅಧ್ಯಕ್ಷ ಚೌಧರಿ ಮೆಹಬೂಬ್ ಅಲಿ ಖೈಸರ್ ಜೊತೆ ನಡೆಸಿದ ಸಭೆಯಲ್ಲಿ ಅವರು ಈ ಮನವಿ ಸಲ್ಲಿಸಿದರು.

2011ರ ಜನಗಣತಿ ಆಧಾರದ ಹಿನ್ನೆಲೆಯಲ್ಲಿ ರಾಜ್ಯದ ಹಜ್ ಯಾತ್ರಿಗಳ ಕೋಟಾವನ್ನು ನಿಗದಿ ಮಾಡಲಾಗುತ್ತಿದೆ. ಆಗ ಮುಸ್ಲಿಮರ ಜನಸಂಖ್ಯೆ ಶೇ.13ರಷ್ಟಿತ್ತು. ಆದರೆ, ಈಗ ಶೇ.17-18ರಷ್ಟು ಮುಸ್ಲಿಮರಿದ್ದಾರೆ. ಆದುದರಿಂದ, ನಮ್ಮ ಕೋಟಾವನ್ನು 6624 ರಿಂದ 9 ಸಾವಿರಕ್ಕೆ ಹೆಚ್ಚಳ ಮಾಡಬೇಕು ಎಂದು ಅವರು ತಿಳಿಸಿದರು.

ಜಯನಗರದ ಹರೀಮ್ ಟೂರ್ಸ್‌ನವರು ಹಜ್‌ ಯಾತ್ರೆಗೆ ಕರೆದೊಯ್ಯುವುದಾಗಿ 136 ಮಂದಿಯಿಂದ ಹಣ ಪಡೆದು, ವಂಚನೆ ಮಾಡಿದ್ದಾರೆ. ಈಗಾಗಲೆ ವಂಚಕರ ವಿರುದ್ಧ ಎರಡು ಪ್ರತ್ಯೇಕ ಎಫ್‌ಐಆರ್ ದಾಖಲಾಗಿದ್ದು, ಅವರನ್ನು ಬಂಧಿಸಲಾಗಿದೆ. ವಂಚನೆಗೊಳಗಾದ 136 ಮಂದಿಯು ಬೀದಿ ಬದಿ ವ್ಯಾಪಾರಿಗಳು, ಟೈಲರ್, ದಿನಗೂಲಿ ನೌಕರರು ಹೀಗೆ ಆರ್ಥಿಕವಾಗಿ ಸಬಲರಲ್ಲದವರಾಗಿದ್ದಾರೆ ಎಂದು ಭಾರತೀಯ ಹಜ್ ಸಮಿತಿ ಅಧ್ಯಕ್ಷರಿಗೆ ಝಮೀರ್‌ ಅಹ್ಮದ್‌ ಖಾನ್ ತಿಳಿಸಿದರು.

ಈ 136 ಮಂದಿಯನ್ನು 2019ನೆ ಸಾಲಿನ ಹಜ್‌ ಯಾತ್ರೆ ಕೈಗೊಳ್ಳಲು ಅನುಕೂಲವಾಗುವಂತೆ ನೇರವಾಗಿ ಆಯ್ಕೆ ಮಾಡಿಕೊಡಬೇಕು. ಇವರ ಪೈಕಿ 22 ಮಂದಿ ಆರ್ಥಿಕವಾಗಿ ಸಾಕಷ್ಟು ಸಂಕಷ್ಟದಲ್ಲಿರುವುದರಿಂದ ಅವರ ಯಾತ್ರೆಯ ಸಂಪೂರ್ಣ ಖರ್ಚನ್ನು ನಾನೇ ವೈಯಕ್ತಿಕವಾಗಿ ಭರಿಸುತ್ತೇನೆ ಎಂದು ಅವರು ಹೇಳಿದರು.

ನಮ್ಮ ರಾಜ್ಯದಿಂದ ಹಜ್‌ ಯಾತ್ರೆಗೆ ತೆರಳುವ ಯಾತ್ರಿಗಳಿಗೆ ಜಿದ್ದಾ ವಿಮಾನ ನಿಲ್ದಾಣದಿಂದ ಮಕ್ಕಾ, ಮಕ್ಕಾದಿಂದ ಮದೀನಾ ಹಾಗೂ ಮದೀನಾದಿಂದ ಪುನಃ ಜಿದ್ದಾ ವಿಮಾನ ನಿಲ್ದಾಣಕ್ಕೆ ಕಲ್ಪಿಸಲಾಗುವ ಸಾರಿಗೆ ವ್ಯವಸ್ಥೆಗೆ 391 ರಿಯಾಲ್(ಸೌದಿ ಕರೆನ್ಸಿ)ಗಳನ್ನು ಪಡೆಯಲಾಗುತ್ತಿದೆ. ಸಾರಿಗೆ ವ್ಯವಸ್ಥೆಗೆ 50-60 ರಿಯಾಲ್‌ಗಳಿದ್ದರೆ ಸಾಕು. ಆದರೆ, ಇಷ್ಟೊಂದು ದುಬಾರಿ ಶುಲ್ಕವನ್ನು ವಿಧಿಸುವುದು ಸರಿಯಲ್ಲ. ಈ ಬಗ್ಗೆ ಗಮನ ಹರಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ಹಜ್‌ ಯಾತ್ರಿಗಳಿಗೆ ಬಕೆಟ್ ಹಾಗೂ ಜಗ್‌ಗಳನ್ನು ನೀಡುವುದಾಗಿ 50 ರಿಯಾಲ್ ಶುಲ್ಕ ಪಡೆಯಲಾಗುತ್ತದೆ. ಆದರೆ, ಈವರೆಗೆ ಯಾರಿಗೂ ಅದನ್ನು ನೀಡಲಾಗಿಲ್ಲ. ಮೀನಾದಲ್ಲಿ ನಿರ್ಮಿಸಲಾಗುವ ಟೆಂಟ್‌ಗಳಲ್ಲಿ ಹೆಚ್ಚುವರಿ ಯಾತ್ರಿಗಳನ್ನು ಇರಿಸಲಾಗುತ್ತಿದೆ. ಅವರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು. ಅಲ್ಲದೆ, ಊಟದ ಗುಣಮಟ್ಟದ ಕುರಿತು ಆರೋಪಗಳು ಕೇಳಿ ಬರುತ್ತಿರುವುದರಿಂದ, ಉತ್ತಮವಾದ ಆಹಾರ ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಝಮೀರ್‌ ಅಹ್ಮದ್ ಕೋರಿದರು.

ಹಜ್‌ ಯಾತ್ರಿಗಳು ನೀಡುವ ಕುರ್ಬಾನಿ ಕುರಿತು ಅವರಿಗೆ ಯಾವುದೇ ಮಾಹಿತಿ ಸಿಗುವುದಿಲ್ಲ. ಆದುದರಿಂದ, ಭಾರತೀಯ ಹಜ್ ಸಮಿತಿ ವತಿಯಿಂದ ಒಂದು ಆ್ಯಪ್ ಅಭಿವೃದ್ಧಿಪಡಿಸಿ, ಯಾತ್ರಿಗಳ ಕುರ್ಬಾನಿ ಆಗುತ್ತಿದ್ದಂತೆ ಅವರಿಗೆ ಸಂದೇಶ ಬರುವಂತೆ ವ್ಯವಸ್ಥೆ ಮಾಡಬೇಕು ಎಂದು ಅವರು ಮನವಿ ಸಲ್ಲಿಸಿದರು.

ಸಚಿವ ಝಮೀರ್‌ ಅಹ್ಮದ್ ಸಲ್ಲಿಸಿದ ಮನವಿಯನ್ನು ಸ್ವೀಕರಿಸಿದ ಚೌಧರಿ ಮೆಹಬೂಬ್ ಅಲಿ ಖೈಸರ್, ಕೇಂದ್ರ ಸರಕಾರದೊಂದಿಗೆ ಚರ್ಚಿಸಿ ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಸಭೆಯಲ್ಲಿ ರಾಜ್ಯ ಹಜ್ ಸಮಿತಿಯ ಸದಸ್ಯೆ ಬಲ್ಕೀಸ್‌ಬಾನು, ನೋಡಲ್ ಅಧಿಕಾರಿ ಏಜಾಝ್ ಅಹ್ಮದ್, ಮುಖಂಡ ಶಕೀಲ್ ನವಾಝ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News