ಏಕೀಕೃತ ರಸ್ತೆ ಸಾರಿಗೆ ಪ್ರಾಧಿಕಾರ ರಚನೆ: ಕರಡು ಮಸೂದೆ ಸಿದ್ಧ

Update: 2018-11-14 16:49 GMT

ಬೆಂಗಳೂರು, ನ.14: ಏಕೀಕೃತ ರಸ್ತೆ ಸಾರಿಗೆ ಪ್ರಾಧಿಕಾರ ರಚನೆಗೆ ಸರಕಾರ ಮುಂದಾಗಿದ್ದು, ಕರಡು ಮಸೂದೆ ಸಿದ್ಧಪಡಿಸಿದೆ. ಮುಂದಿನ ದಿನಗಳಲ್ಲಿ ಬಿಎಂಟಿಸಿ, ಬಿಎಂಆರ್‌ಸಿಎಲ್, ಬಿಬಿಎಂಪಿ ಹಾಗೂ ಬಿಡಿಎ ಒಂದೇ ವೇದಿಕೆಯಡಿ ಕಾರ್ಯನಿರ್ವಹಿಸಲಿವೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್‌ನಲ್ಲಿ ಏಕೀಕೃತ ರಸ್ತೆ ಸಾರಿಗೆ ಪ್ರಾಧಿಕಾರ(ಯುನೈಟೆಡ್ ಮೆಟ್ರೋಪಾಲಿಟನ್ ಟ್ರಾನ್ಸ್‌ಪೋರ್ಟ್ ಅಥಾರಿಟಿ-ಉಮ್ಟಾ) ಸ್ಥಾಪನೆ ಘೋಷಿಸಿದ್ದರು. ಹಲವು ಸಂಸ್ಥೆಗಳ ನಡುವೆ ಸಮನ್ವಯ ಸಾಧಿಸಿ, ಕೈಗಟುಕುವ ದರದಲ್ಲಿ ಅಡೆತಡೆಗಳಿಲ್ಲದೆ ಅನುಕೂಲಕರ ಸಾರಿಗೆ ವ್ಯವಸ್ಥೆ ರೂಪಿಸುವ ಸಲುವಾಗಿ ಪ್ರಾಧಿಕಾರ ರಚನೆಯಾಗಲಿದೆ. ಈ ನಿಟ್ಟಿನಲ್ಲಿ ಸಮಗ್ರ ಕಾರ್ಯತಂತ್ರ ಹಾಗೂ ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸಮನ್ವಯ ಕೊರತೆ: ಸಮನ್ವಯ ಕೊರತೆಯಿಂದಾಗಿ ಸಂಸ್ಥೆಗಳ ನಡುವೆ ಹಲವು ಸಮಸ್ಯೆಗಳು ಏರ್ಪಡುತ್ತಿದ್ದವು. ಮೆಟ್ರೋ ನಿಲ್ದಾಣಗಳಿಗೆ ಬಿಎಂಟಿಸಿ ಬಸ್ ಸಂಪರ್ಕ ಕಲ್ಪಿಸುವಲ್ಲಿ ಕೊರತೆ, ಫೀಡರ್ ಬಸ್ ಸೇವೆಗೆ ಬಿಎಂಆರ್‌ಸಿಎಲ್ ಅಸಹಕಾರ, ಮೆಟ್ರೋ ಹಾಗೂ ಬಿಎಂಟಿಸಿ ನಿಲ್ದಾಣಗಳು ಅಕ್ಕ-ಪಕ್ಕವಿದ್ದರೂ ಪಾದಚಾರಿ ಮಾರ್ಗ ಸಮಸ್ಯೆ ಹೀಗೆ ಅನೇಕ ಸಮಸ್ಯೆಗಳು ಕಾಣಿಸಿಕೊಂಡಿದ್ದವು.

ಬಹುತೇಕ ಎಲ್ಲ ಸಂಸ್ಥೆಗಳು ಪರಸ್ಪರ ಸಂಬಂಧವಿಲ್ಲದಂತೆ ಕಾರ್ಯ ನಿರ್ವಹಣೆ ಮಾಡುತ್ತಿವೆ. ಇದೂ ಟ್ರಾಫಿಕ್ ಸಮಸ್ಯೆಯ ಕಾರಣಗಳಲ್ಲಿ ಒಂದಾಗಿದೆ. ರಸ್ತೆ ಸಾರಿಗೆ ಸಂಸ್ಥೆಗಳು ಕೇವಲ ತಮ್ಮ ವ್ಯಾಪ್ತಿಗೆ ಸೀಮಿತವಾಗಿ ಕೆಲಸ ಮಾಡುತ್ತಿರುವುದರಿಂದ ಸಾಮಾನ್ಯ ಜನರು ತೊಂದರೆ ಅನುಭವಿಸುವಂತಾಗಿದೆ. ಇದರಿಂದಾಗಿ ಸಾರಿಗೆ ವ್ಯವಸ್ಥೆಯಿಂದ ದೂರ ಉಳಿದು ಖಾಸಗಿ ವಾಹನಗಳ ಬಳಕೆಗೆ ಮೊರೆ ಹೋಗುತ್ತಿದ್ದಾರೆ.

ಅಭಿಪ್ರಾಯ ಸಂಗ್ರಹ: ಉಮ್ಟಾ ರಚನೆ ಸಂಬಂಧ ಕರಡು ಮಸೂದೆಯನ್ನು ನಗರಾಭಿವೃದ್ಧಿ ಇಲಾಖೆ ಸಿದ್ಧಪಡಿಸಿದೆ. ಗೃಹ ಇಲಾಖೆ, ಸಾರಿಗೆ ಇಲಾಖೆ, ಬಿಎಂಆರ್‌ಸಿಎಲ್ ಸೇರಿದಂತೆ ವಿವಿಧ ಇಲಾಖೆಗಳಿಗೂ ಕರಡು ಪ್ರತಿ ಕಳಿಸಲಾಗಿದೆ. ಎಲ್ಲ ಇಲಾಖೆಗಳಿಂದ ಬರಲಿರುವ ಅಭಿಪ್ರಾಯಗಳನ್ನು ಪಡೆದು ಅಂತಿಮ ಮಸೂದೆ ತಯಾರಿಸಲಾಗುತ್ತದೆ. ಈ ಪ್ರಾಧಿಕಾರಕ್ಕೆ ಮುಖ್ಯಮಂತ್ರಿಯೇ ಅಧ್ಯಕ್ಷರಾಗಿ ಇರುತ್ತಾರೆ.

ಪ್ರಾಧಿಕಾರ ರಚನೆಯಾದಲ್ಲಿ ಪ್ರಯಾಣಿಕರಿಗೆ ಹಲವು ಲಾಭಗಳು ದೊರಕಲಿವೆ. ಒಂದೇ ಸ್ಮಾರ್ಟ್ ಕಾರ್ಡ್ ಬಳಕೆ ಮಾಡಿಕೊಂಡು ಮೆಟ್ರೋ, ಬಿಎಂಟಿಸಿ ಬಸ್, ಉಪನಗರ ರೈಲುಗಳಲ್ಲಿ ಸಂಚಾರ ಮಾಡಬಹುದಾಗಿದೆ. ಮೆಟ್ರೋ, ರೈಲು ಹಾಗೂ ಬಸ್ ಸೇವೆ ಜತೆಯಾಗಿರುವ ಯಶವಂತಪುರ, ಬೈಯಪ್ಪನಹಳ್ಳಿ, ಕಂಟೋನ್ಮೆಂಟ್, ಕೆಂಗೇರಿ, ಪೀಣ್ಯ ಸೇರಿದಂತೆ ನಗರದ ಹಲವು ಕಡೆಗಳಲ್ಲಿ ಸಾರಿಗೆ ಸೇವೆಗಳನ್ನು ಜೋಡಿಸಲು ಕ್ರಿಯಾ ಯೋಜನೆಯನ್ನು ರೂಪಿಸುವುದು ಪ್ರಾಧಿಕಾರದ ಆದ್ಯತೆ ಎನ್ನುವ ಮಾಹಿತಿ ಸಿಕ್ಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News