ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರ ಹೇಳಿಕೆಗೆ ಪಿಎಫ್‌ಐ ಆಕ್ಷೇಪ

Update: 2018-11-15 10:29 GMT

ಹೊಸದಿಲ್ಲಿ, ನ.15: ದೇಶದಲ್ಲಿ ಮುಸ್ಲಿಮರು ಶಾಂತಿಯುತವಾಗಿ ಮತ್ತು ಗೌರವಾನ್ವಿತವಾಗಿ ಜೀವಿಸಲು ಅಯೋಧ್ಯೆಯಲ್ಲೇ ರಾಮ ಮಂದಿರ ನಿರ್ಮಿಸಬೇಕು ಎಂಬ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಗಯೋರುಲ್ ಹಸನ್ ರಿಝ್ವಿ ಹೇಳಿಕೆ ಅಪಹಾಸ್ಯದಿಂದ ಕೂಡಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷ ಇ.ಅಬೂಬಕರ್ ಪ್ರತಿಕ್ರಿಯಿಸಿದ್ದಾರೆ.

ಬಾಬರಿ ಮಸ್ಜಿದ್ ಧ್ವಂಸವು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಹತ್ಯೆಯ ನಂತರ ಸ್ವತಂತ್ರ ಭಾರತದಲ್ಲಿ ನಡೆದ ಅತ್ಯಂತ ಘೋರ ಸಂಘಟಿತ ಅಪರಾಧ ಎಂಬ ವಿಚಾರವನ್ನು ಸಂಘ ಪರಿವಾರ ಹೊರತುಪಡಿಸಿ ಎಲ್ಲಾ ಬುದ್ಧಿಜೀವಿಗಳು ಒಪ್ಪಿಕೊಳ್ಳುತ್ತಾರೆ. ಬಾಬರಿ ಮಸ್ಜಿದ್ ಪುನರ್ ನಿರ್ಮಾಣವಾಗುವವರೆಗೆ ಮುಸ್ಲಿಮರಿಗೆ ಅದೇ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ಸಿಗಬೇಕು ಹಾಗೂ ಧ್ವಂಸ ಪ್ರಕರಣದ ಆರೋಪಿಗಳಿಗೆ ಶಿಕ್ಷೆಯಾಗಬೇಕು. ಇಲ್ಲದಿದ್ದಲ್ಲಿ ಈ ವಿಚಾರವು ಆರದ ಗಾಯದಂತೆ ಹಾಗೆಯೇ ಉಳಿದುಬಿಡುತ್ತದೆ. ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಪ್ರಾರ್ಥನಾಲಯವನ್ನು ಕೆಡವಿದ ಅತ್ಯಂತ ಹೀನಾಯ ಕೃತ್ಯದ ಭೀಕರತೆಯನ್ನು ಕಡಿಮೆಗೊಳಿಸುವುದಕ್ಕಾಗಿ ಮಂದಿರ ನಿರ್ಮಾಣದ ವಿಚಾರವನ್ನು ಹೆಚ್ಚು ಪ್ರಚಾರಗೊಳಿಸುತ್ತಿರುವುದು ಆತ್ಮಸಾಕ್ಷಿಗೆ ವಿರುದ್ಧವಾಗಿದೆ. ಇದೀಗ ಸಂವಿಧಾನದ ಪರಮೋಚ್ಛ ಅಂಗ ಮಾತ್ರವೇ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಬೇಕಾಗಿದೆ ಎಂದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

   ಅತಿ ಅಗತ್ಯದ ಸಂದರ್ಭದಲ್ಲಿ ಗಮನಹರಿಸಬೇಕಾದ ಮತ್ತು ಸೇವೆ ಸಲ್ಲಿಸಬೇಕಾದ ಸಮಯದಲ್ಲಿ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರ ಪತ್ತೆಯೇ ಇರಲಿಲ್ಲ. ಬಾಬರಿ ಮಸ್ಜಿದ್ ನ್ಯಾಯಕ್ಕಾಗಿ ಇದುವರೆಗೆ ಅವರು ತುಟಿಬಿಚ್ಚಿದ್ದು ಕಾಣಸಿಗಲಿಲ್ಲ. ಹೀಗಾಗಿ ಆಯೋಗದ ಅಧ್ಯಕ್ಷರು ಆರೆಸ್ಸೆಸ್ ಅಥವಾ ಬಿಜೆಪಿಯ ಅಲ್ಪಸಂಖ್ಯಾತ ವಿಭಾಗದ ಮುಖಂಡರ ಪಾತ್ರವನ್ನು ನಿಭಾಯಿಸುತ್ತಿರುವಂತೆ ಭಾಸವಾಗುತ್ತಿದೆ. ಅವರು ಸಂಘಪರಿವಾರದ ಹಿತಾಸಕ್ತಿಗಾಗಿ ಕಾರ್ಯನಿರ್ವಹಿಸುತ್ತಿದ್ದಾರೆಯೇ ಹೊರತು ಅಲ್ಪಸಂಖ್ಯಾತ ಸಮುದಾಯಕ್ಕಾಗಿ ಅಲ್ಲ ಎಂದರು.

ಹಿಂದುತ್ವ ಬಲಪಂಥೀಯ ಶಕ್ತಿಗಳು ಭಾರತದಲ್ಲಿ ಮುಸ್ಲಿಮರ ಪರಂಪರೆಯ ಐತಿಹಾಸಿಕ ಸಂಕೇತಗಳನ್ನು ಅಳಿಸಿ ಹಾಕುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ, ಮುಸ್ಲಿಮರು ಬಾಬರಿ ಮಸ್ಜಿದ್ ತ್ಯಜಿಸಿದರೆ ಸಮುದಾಯದ ಎಲ್ಲ ಸಮಸ್ಯೆಗಳು ಪರಿಹಾರವಾಗುತ್ತದೆ ಎಂದು ಅವರು ಹೇಳಿಕೆ ನೀಡಿರುತ್ತಾರೆ. ನೈಸರ್ಗಿಕ ನ್ಯಾಯದ ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದರಿಂದ ಅಥವಾ ಬಹುಸಂಖ್ಯಾತ ಶಕ್ತಿಗಳ ಮುಂದೆ ತಮ್ಮ ಹಕ್ಕುಗಳನ್ನು ಬಿಟ್ಟುಕೊಡುವುದರಿಂದ ಸಮುದಾಯದ ಮಧ್ಯೆ ಶಾಂತಿ ಮತ್ತು ಗೌರವದ ವಾತಾವರಣವನ್ನು ಸೃಷ್ಟಿಸಬಹುದು ಎಂದು ಭಾವಿಸುವುದು ನಿರರ್ಥಕವಾಗಿದೆ. ಬಾಬರಿ ಮಸ್ಜಿದ್‌ಗೆ ವಿರೋಧ ವ್ಯಕ್ತಪಡಿಸುತ್ತಾ ಮಂದಿರ ನಿರ್ಮಾಣಕ್ಕೆ ಆಗ್ರಹಿಸುವ ಮೂಲಕ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರು ಅಲ್ಪಸಂಖ್ಯಾತ ಸಮುದಾಯದ ಮೇಲೆ ಬಲವಂತದ ಅನ್ಯಾಯವನ್ನು ಹೇರುತ್ತಿದ್ದಾರೆ. ನಿಜವಾಗಿಯೂ ಆಯೋಗದ ಅಧ್ಯಕ್ಷರಿಗೆ ಅಲ್ಪಸಂಖ್ಯಾತರ ಹಿತಾಸಕ್ತಿ ಕಾಪಾಡುವ ಕಾಳಜಿ ಇದ್ದರೆ ಕೂಡಲೇ ಆಕ್ರಮಣಕ್ಕೆಡಾಗಿರುವ ಸಂತ್ರಸ್ತರಿಗೆ ನ್ಯಾಯ ಒದಗಿಸಲು ಕಾರ್ಯೋನ್ಮುಖರಾಗಲಿ ಎಂದು ಇ.ಅಬೂಬಕರ್ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News