ರಾಜ್ಯದಲ್ಲಿ 1201 ಮಂದಿಗೆ ಎಚ್1ಎನ್1 ಸೋಂಕು: ಬೆಂಗಳೂರಿನಲ್ಲೇ ಅಧಿಕ

Update: 2018-11-15 14:40 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ನ. 15: ಬದಲಾಗುತ್ತಿರುವ ಹವಾಮಾನ ವೈಪರೀತ್ಯದಿಂದಾಗಿ ಎಚ್1ಎನ್1, ಡೆಂಗ್ಯೂ ಹಾಗೂ ಚಿಕೂನ್‌ಗುನ್ಯಾ ಜ್ವರ ಪ್ರಕರಣಗಳು ಹೆಚ್ಚಾಗುತ್ತಿದ್ದು, ನಗರದಲ್ಲೇ 334 ಎಚ್1ಎನ್1 ಪ್ರಕರಣಗಳು ಬೆಳಕಿಗೆ ಬಂದಿರುವುದು ಗಾರ್ಡನ್ ಸಿಟಿಯ ಜನರನ್ನು ಆತಂಕಕ್ಕೆ ದೂಡಿದೆ.

ರಾಜ್ಯದಲ್ಲಿ ಎಷ್ಟೇ ಮುಂಜಾಗ್ರತಾ ಕ್ರಮ ಕೈಗೊಂಡಿದ್ದರೂ 1201 ಮಂದಿಗೆ ಸೋಂಕು ತಗುಲಿದ್ದು, 19 ಮಂದಿ ಸೋಂಕಿನಿಂದ ಮರಣ ಹೊಂದಿದ್ದಾರೆ. ರಾಜ್ಯದಲ್ಲಿ ಭೀತಿ ಮೂಡಿಸಿರುವ ಎಚ್1ಎನ್1ಗೆ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆಯೊಂದಿಗೆ ಉಚಿತ ಔಷಧ ನೀಡಲಾಗುತ್ತಿದೆ.

ಚಳಿಗಾಲ ಆರಂಭವಾಗುತ್ತಿದ್ದಂತೆ ಮಾರಣಾಂತಿಕ ರೋಗವಾದ ಎಚ್1ಎನ್1 ವ್ಯಾಪಕವಾಗಿ ಹರಡತೊಡಗಿದ್ದು, ಆರೋಗ್ಯ ಇಲಾಖೆಗೆ ತಲೆ ನೋವಾಗಿ ಪರಿಣಮಿಸಿರುವ ಈ ಮಾರಣಾಂತಿಕ ಸೋಂಕಿನಿಂದ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳ ಪ್ರಮಾಣ ಹೆಚ್ಚಳವಾಗಿದೆ. ಅಲ್ಲದೆ, ಶಿವಮೊಗ್ಗ, ಬಳ್ಳಾರಿ, ಉಡುಪಿ, ದಕ್ಷಿಣ ಕನ್ನಡ ಭಾಗದಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿರುವುದು ವರದಿಯಾಗಿದೆ.

ಆರೋಗ್ಯ ಇಲಾಖೆ ಹೈ ಅಲರ್ಟ್ ಘೋಷಣೆ ಮಾಡಿದ್ದರೂ ನಿಯಂತ್ರಣಕ್ಕೆ ಬಾರದ ಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಜಿಲ್ಲಾಮಟ್ಟದ ಆಸ್ಪತ್ರೆಗಳಿಗೆ ಅಗತ್ಯ ಔಷಧಗಳನ್ನು ಖರೀದಿಸಲು ಹಣ ಬಿಡುಗಡೆ ಮಾಡಲಾಗಿದೆ. ರಾಜ್ಯದ ಎಲ್ಲ ಸರಕಾರಿ ಆಸ್ಪತ್ರೆಗಳು, ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಅಗತ್ಯಕ್ಕೆ ಅನುಗುಣವಾಗಿ ಔಷಧ ದಾಸ್ತಾನು ಮಾಡಲಾಗಿದ್ದು, ಖಾಸಗಿ ಆಸ್ಪತ್ರೆಯವರು ಆಯಾ ಜಿಲ್ಲಾಸ್ಪತ್ರೆಗಳಿಂದ ಔಷಧ ಪಡೆದು ರೋಗಿಗಳಿಗೆ ಉಚಿತವಾಗಿ ನೀಡಲಾಗುತ್ತದೆ.

ಎಚ್1ಎನ್1 (ಹಂದಿ ಜ್ವರ) ಮನುಷ್ಯರಲ್ಲಿ ಕಾಯಿಲೆ ತರುವ ಒಂದು ವೈರಸ್ ಆಗಿದ್ದು, ಸಾಮಾನ್ಯ ಜ್ವರದಂತೆಯೇ ಆರಂಭವಾಗುವ ಈ ಕಾಯಿಲೆ ಚಿಕಿತ್ಸೆ ಪಡೆಯದಿದ್ದರೆ ತೀವ್ರವಾಗುತ್ತದೆ. ಈ ಜ್ವರವೂ ಸಾಮಾನ್ಯ ಜ್ವರದಂತೆಯೇ ಒಬ್ಬರಿಂದ ಮತ್ತೊಬ್ಬರಿಗೆ ಹರಡಲಿದ್ದು, ಜನರು ಎಚ್ಚರಿಕೆಯಿಂದ ಇರಬೇಕು.

ಹರಡುವಿಕೆ: ಸೋಂಕಿತರು ಕೆಮ್ಮಿದಾಗ-ಸೀನಿದಾಗ ಹೊರಬರುವ ತುಂತುರುಗಳಿಂದ ಈ ವೈರಸ್‌ಗಳು ಗಾಳಿಯ ಮೂಲಕ ಒಬ್ಬರಿಂದ ಒಬ್ಬರಿಗೆ ಹರಡುತ್ತವೆ. ಹಾಗೂ ವೈಯಕ್ತಿಕ ಸ್ವಚ್ಛತೆ ಇಲ್ಲದೇ ಮೂಗು ಬಾಯಿಯನ್ನು ಹೇಗೆಂದರೆ ಹಾಗೆ ಮುಟ್ಟುವುದರಿಂದಲೂ ಈ ಸೋಂಕು ಹರಡಬಹುದು.

ಏನು ಮಾಡಬಾರದು: ಸೋಂಕು ಪೀಡಿತರ ಜತೆ ತೀರಾ ಹತ್ತಿರದಿಂದ ಮಾತನಾಡುವುದು ಹಾಗೂ ಕೈಕುಲುಕುವುದು ಹಾಗೂ ಸೋಂಕುಪೀಡಿತರು ಮುಟ್ಟಿದ ವಸ್ತುಗಳನ್ನು ಮುಟ್ಟಿ ನಂತರ ಕೈಯನ್ನು ಬಾಯಿ ಅಥವಾ ಮೂಗಿನ ಬಳಿ ಮುಟ್ಟದಂತೆ ಜಾಗೃತರಾಗಬೇಕು.

ಕ್ರಮಗಳು: ಕೆಮ್ಮುವಾಗ, ಸೀನುವಾಗ ಬಾಯಿ ಮತ್ತು ಮೂಗನ್ನು ಕರವಸ್ತ್ರದಿಂದ ಮುಚ್ಚಿಕೊಳ್ಳಬೇಕು. ಕಣ್ಣು , ಮೂಗು, ಬಾಯಿ ಮುಟ್ಟಿಕೊಳ್ಳುವ ಮುನ್ನ ಕೈಯನ್ನು ಸಾಬೂನಿನಿಂದ ಚೆನ್ನಾಗಿ ತೊಳೆಯಬೇಕು. ಚೆನ್ನಾಗಿ ನಿದ್ರೆ ಮಾಡಬೇಕು. ದೈಹಿಕವಾಗಿ ಸದಾ ಚಟುವಟಿಕೆಯಿಂದ ಇರಬೇಕು.

ಧಾರಾಳವಾಗಿ ನೀರು ಕುಡಿಯುವುದು, ಪೌಷ್ಟಿಕಾಂಶವಿರುವ ಆಹಾರ ಸೇವಿಸುವುದು, ಜನಸಂದಣಿ ಇರುವ ಸ್ಥಳಗಳಲ್ಲಿ ಮಾಸ್ಕ್ ಧರಿಸಿರುವುದು, ರೋಗ ಲಕ್ಷಣಗಳು ಇರುವ ವ್ಯಕ್ತಿಗಳಿಂದ ದೂರ ಇರುವುದು, ರಸ್ತೆಯಲ್ಲಿ ಎಲ್ಲೆಂದರಲ್ಲಿ ಉಗುಳುವುದನ್ನು ತಡೆಯಬೇಕು.

ಲಕ್ಷಣಗಳು

-ಶೀತ, ಜ್ವರ, ಕೆಮ್ಮು, ಮೂಗಿನ ಸೋರುವಿಕೆ.

-ತಲೆನೋವು, ಮೈ-ಕೈ ನೋವು.

-ಚಳಿ, ಸುಸ್ತು.

-ಕೆಲವೊಮ್ಮೆ ವಾಂತಿ ಮತ್ತು ಭೇದಿ ಆಗಬಹುದು.

-ಉಸಿರಾಟದಲ್ಲಿ ತೊಂದರೆ ಕಾಣಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News