ನೀರು ನಿರ್ವಹಣಾ ವೈಫಲ್ಯದಿಂದ ಕೃಷಿ ಕ್ಷೇತ್ರದಲ್ಲಿ ಹಿನ್ನೆಡೆ: ರಾಜ್ಯಪಾಲ ವಜುಭಾಯಿ ವಾಲಾ

Update: 2018-11-15 16:39 GMT

ಬೆಂಗಳೂರು, ನ.15: ಭಾರತದಲ್ಲಿ ಮಳೆ ನೀರಿನ ನಿರ್ವಹಣೆಯ ವೈಫಲ್ಯದಿಂದಾಗಿ ಕೃಷಿ ಕ್ಷೇತ್ರದಲ್ಲಿ ಹಿನ್ನೆಡೆಯಾಗುತ್ತಿದೆ. ಹೀಗಾಗಿ, ನೀರಿನ ಸಮರ್ಪಕ ನಿರ್ವಹಣೆಯಿಂದ ಕೃಷಿ ಕ್ಷೇತ್ರದಲ್ಲಿ ಮಹತ್ವವಾದ ಸಾಧನೆ ಮಾಡಲು ಸಾಧ್ಯವಿದೆ ಎಂದು ರಾಜ್ಯಪಾಲ ವಜುಭಾಯಿ ವಾಲಾ ಅಭಿಪ್ರಾಯಪಟ್ಟಿದ್ದಾರೆ.

ಗುರುವಾರ ನಗರದ ಗಾಂಧಿ ಕೃಷಿ ವಿಜ್ಞಾನ ಕೇಂದ್ರ(ಜಿಕೆವಿಕೆ)ದಲ್ಲಿ ಆಯೋಜಿಸಿದ್ದ ಕೃಷಿ ಮೇಳ-2018ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮಲ್ಲಿ ನೀರಿನ ಪ್ರಮಾಣ ಅಗತ್ಯಕ್ಕೆ ತಕ್ಕಷ್ಟು ಅಥವಾ ಕಡಿಮೆ ಪ್ರಮಾಣದಲ್ಲಿ ಲಭ್ಯವಾಗುತ್ತಿದ್ದರೂ, ಅದನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವಲ್ಲಿ ವಿಫಲರಾಗುತ್ತಿದ್ದೇವೆ. ಹೀಗಾಗಿ, ನೀರನ್ನು ಬಳಕೆ ಮಾಡಿಕೊಳ್ಳುವ ವಿಧಾನಗಳನ್ನು ಅಳವಡಿಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕೃಷಿ ಉತ್ಪನ್ನಗಳಿಗೆ ತಕ್ಕಂತೆ ಮಾರುಕಟ್ಟೆಯ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಅಗತ್ಯವಿರುವ ಎಲ್ಲ ಬೆಂಬಲ ನೀಡಬೇಕಾಗಿರುವುದು ಸರಕಾರಗಳ ಆದ್ಯ ಕರ್ತವ್ಯವಾಗಿದೆ. ಹೀಗಾಗಿ, ರೈತರಿಗೆ ಅನುಕೂಲಕರವಾದ ಯೋಜನೆಗಳನ್ನು ಜಾರಿ ಮಾಡಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.

ಕೈಗಾರಿಕಾ ಉತ್ಪಾದನೆ, ಕೃಷಿ ಕ್ಷೇತ್ರದ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿರುವವರನ್ನು ಬೆಂಬಲಿಸಬೇಕಿದೆ. ರೈತರು ಆಧುನಿಕ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಕ್ಷೇತ್ರದಲ್ಲಿ ತೊಡಗಿಕೊಳ್ಳಬೇಕು ಎಂದ ಅವರು, ನಮ್ಮ ದೇಶ ಕೃಷಿ ಪ್ರಧಾನ ದೇಶವಾಗಿದ್ದು, ಶೇ.55 ರಷ್ಟು ಜನರು ಕೃಷಿ ಕ್ಷೇತ್ರದ ಮೇಲೆ ಅವಲಂಬಿತರಾಗಿದ್ದಾರೆ. ಹೀಗಾಗಿ, ದೇಶದ ಒಟ್ಟು ಆದಾಯದಲ್ಲಿ ಕೃಷಿಯಿಂದಲೂ ಅಧಿಕ ಆದಾಯ ಸರಕಾರಕ್ಕೆ ಬರುತ್ತಿದ್ದು, ಸರಕಾರಗಳು ರೈತ ಪರವಾಗಿ ಇರಬೇಕು ಎಂದು ತಿಳಿಸಿದರು.

ದೇಶದಲ್ಲಿ ರೈತರ ಬೇಡಿಕೆಗೆ ಅನುಗುಣವಾಗಿ ಹೊಸ ಸಂಶೋಧನೆಗಳನ್ನು ಕೈಗೊಳ್ಳಬೇಕು. ಜಿಕೆವಿಕೆ ಅಭಿವೃದ್ಧಿ ಮಾಡಿರುವ ಸೂರ್ಯಕಾಂತಿ ಬೀಜವು ದೇಶದಲ್ಲಿ ಬೇರೆ ಎಲ್ಲಿಯೂ ಅಭಿವೃದ್ಧಿ ಮಾಡಲು ಸಾಧ್ಯವಾಗಿಲ್ಲವಾದರೂ, ಕರ್ನಾಟಕ ಅದನ್ನು ಮಾಡಿ ತೋರಿಸಿದೆ. ಇದೇ ರೀತಿಯಲ್ಲಿ ಹೊಸ ಸಂಶೋಧನೆಗಳು ಹೆಚ್ಚಾದಂತೆ, ಉತ್ಪಾದನಾ ಪ್ರಮಾಣವೂ ಹೆಚ್ಚಾಗುತ್ತದೆ. ಅದಕ್ಕೆ ತಕ್ಕಂತೆ ಮಾರಾಟವೂ ಆಗಬೇಕಿದೆ ಎಂದರು.

ವಿಶ್ವದಲ್ಲಿ ಪ್ರತಿದಿನ ಕೃಷಿಯಲ್ಲಿ ಹಲವಾರು ತಂತ್ರಜ್ಞಾನಗಳು ಬದಲಾಗುತ್ತಲೇ ಇರುತ್ತವೆ. ಅದಕ್ಕೆ ತಕ್ಕಂತೆ ಬೆಳೆಗಳೂ ಬದಲಾಗುತ್ತಿರುತ್ತವೆ. ಒಂದು ದೇಶ ಅಭಿವೃದ್ಧಿಯಾಗಬೇಕಾದರೆ ಕೃಷಿ ಮತ್ತು ಕೈಗಾರಿಕೆಗಳನ್ನು ಉತ್ತೇಜಿಸಬೇಕು. ಕೃಷಿಕರನ್ನು ಬಲವರ್ದನೆಗೊಳಿಸುವ ನಿಟ್ಟಿನಲ್ಲಿ ಅಗತ್ಯವಿರುವ ಯೋಜನೆಗಳನ್ನು ಸರಕಾರಗಳು ಕೈಗೊಳ್ಳಬೇಕಿದೆ ಎಂದು ವಾಲಾ ನುಡಿದರು.

ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಮಾತನಾಡಿ, ಕೃಷಿ ಕ್ಷೇತ್ರದಲ್ಲಿನ ಪದ್ಧತಿಗಳ ಬದಲಾವಣೆಗಾಗಿ ಸರಕಾರ ಇಸ್ರೇಲ್ ಮಾದರಿಯನ್ನು ಪರಿಚಯ ಮಾಡಲಾಗಿದೆ. ಈ ಮಾದರಿಯಲ್ಲಿ ಕೃಷಿ ಅಭಿವೃದ್ಧಿಗೆ ಪೂರಕವಾಗಿ ಸರಕಾರದಿಂದ ಸಂಪೂರ್ಣ ಸಹಕಾರ ನೀಡಲಾಗುತ್ತದೆ. ಸಾವಯವ, ಶೂನ್ಯ ಬಂಡವಾಳ ಕೃಷಿ, ಸಿರಿಧಾನ್ಯಗಳ ಬೆಳೆಗಳಿಗಾಗಿ ಸರಕಾರ ವಿಶೇಷ ಯೋಜನೆಗಳನ್ನು ರೂಪಿಸಿದೆ ಎಂದು ಹೇಳಿದರು.

ಕೃಷಿಗೆ ಸಂಬಂಧಿಸಿದಂತೆ ಅನೇಕ ಇಲಾಖೆಗಳ ಸಮನ್ವಯ ಸಾಧಿಸುವ ಉದ್ದೇಶದಿಂದ ಕೃಷಿ ಬಜೆಟ್ ಕ್ಯಾಬಿನೆಟ್ ಘೋಷಣೆ ಮಾಡಲಾಗಿದೆ. ರಾಜ್ಯದಲ್ಲಿ ಕೃಷಿ ಕ್ಷೇತ್ರದಲ್ಲಿ ಖಾಸಗಿ ವಿಶ್ವವಿದ್ಯಾಲಯಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸದ್ಯದಲ್ಲಿಯೇ ಸರಕಾರ ಕಾನೂನು ರಚಿಸಲಿದೆ. ಕೃಷಿ ವಿವಿಗಳು ಅಭಿವೃದ್ಧಿ ಪಡಿಸುವ ಸಂಶೋಧನೆಗಳು, ಆವಿಷ್ಕಾರದ ಉಪಯೋಗಗಳು ರೈತರಿಗೆ ತಲುಪಿಸುವ ನಿಟ್ಟಿನಲ್ಲಿ ಹೊಸ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ತಿಳಿಸಿದರು.

ವಿಶ್ವವಿದ್ಯಾಲಯಗಳು ಕೈಗೊಳ್ಳುವ ಸಂಶೋಧನೆಗಳು ಸರಿಯಾಗಿ ರೈತರಿಗೆ ತಲುಪುತ್ತಿಲ್ಲ. ಈ ಹಿನ್ನೆಲೆಯಲ್ಲಿ ವಿವಿಗಳ ಸಂಶೋಧನೆಗಳನ್ನು ಮೌಲ್ಯಮಾಪನಕ್ಕೆ ಒಳಪಡಿಸುವ ಸಮಿತಿ ರಚನೆಗೆ ಸರಕಾರ ಚಿಂತನೆ ನಡೆಸಿದೆ.

-ಎನ್.ಎಚ್.ಶಿವಶಂಕರರೆಡ್ಡಿ, ಕೃಷಿ ಸಚಿವ

ನಾಲ್ಕು ತಳಿಗಳ ಬಿಡುಗಡೆ

ಜಿಕೆವಿಕೆ ವತಿಯಿಂದ ಅಭಿವೃದ್ಧಿ ಪಡಿಸಿದ್ದ ರಾಗಿ: ಕೆಎಂಆರ್-630(100 ದಿನಗಳ ಅವಧಿಯ ಬೆಳೆ. ಮುಂಗಾರಿಗೆ ಸೂಕ್ತವಾಗಿ ಎಕರೆಗೆ 20 ಕ್ವಿಂಟಾಲ್ ಇಳುವರಿ). ಸೂರ್ಯಕಾಂತಿ: ಕೆಬಿಎಚ್-78(95 ದಿನಗಳ ಬೆಳೆ, ಎಕರೆಗೆ 1.14 ಕ್ವಿಂಟಾಲ್ ಇಳುವರಿ). ಸೋಯಾ ಅವರೆ: ಕೆಬಿಎಸ್-23(95 ದಿನಗಳ ಬೆಳೆ, ಎಕರೆಗೆ 25-30 ಕ್ವಿಂಟಾಲ್ ಇಳುವರಿ) ಹಾಗೂ ಅಕ್ಕಿ ಅವರೆ: ಕೆಬಿಆರ್-1(75 ದಿನಗಳ ಬೆಳೆ, ಎಕರೆಗೆ 12-14 ಕ್ವಿಂಟಾಲ್ ಇಳುವರಿ) ತಳಿಗಳನ್ನು ಬಿಡುಗಡೆ ಮಾಡಲಾಯಿತು.

ಸಾಧಕರಿಗೆ ಪ್ರಶಸ್ತಿ ಪ್ರದಾನ

ಡಾ.ಎಂ.ಎಚ್.ಮರೀಗೌಡ ಅತ್ಯುತ್ತಮ ತೋಟಗಾರಿಕಾ ರೈತ ಪ್ರಶಸ್ತಿ- ಯಲ್ಲಾಪುರ ತಾಲೂಕಿನ ಪ್ರಸಾದರಾಮ ಹೆಗಡೆ

ಅತ್ಯುತ್ತಮ ರೈತ ಮಹಿಳೆ ಪ್ರಶಸ್ತಿ- ಹಾಸನ ತಾಲೂಕಿನ ಕೆ.ಹೇಮ ಅನಂತ್

ಅತ್ಯುತ್ತಮ ರೈತ ಪ್ರಶಸ್ತಿ- ಕೋಲಾರ ತಾಲೂಕಿನ ಎಂ.ಎನ್. ರವಿಶಂಕರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News