‘ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ’ ರಾಜ್ಯದಲ್ಲಿ ಸಂಯೋಜಿತ ಯೋಜನೆ ಅನುಷ್ಠಾನ: ಡಿಕೆ ಶಿವಕುಮಾರ್

Update: 2018-11-15 16:42 GMT

ಬೆಂಗಳೂರು, ನ.15: ‘ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ’ ಸಂಯೋಜಿತ ಯೋಜನೆಯನ್ನು ಅನುಷ್ಠಾನಗೊಳಿಸಲು ಕೇಂದ್ರ ಸರಕಾರದ ರಾಷ್ಟ್ರೀಯ ಆರೋಗ್ಯ ಸಂಸ್ಥೆಯೊಂದಿಗೆ ಅ.30ರಂದು ಒಡಂಬಡಿಕೆಗೆ ಸಹಿ ಮಾಡಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.

ಗುರುವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಆರೋಗ್ಯ ಕರ್ನಾಟಕ ಮತ್ತು ಆಯುಷ್ಮಾನ್ ಭಾರತ್ ಎರಡೂ ಯೋಜನೆಗಳು ಒಂದೇ ಮಾದರಿಯ ಮಾನದಂಡಗಳನ್ನು ಹೊಂದಿದ್ದು, ಬಡವರು ಮತ್ತು ಸಮಾಜದ ನಿರ್ಲಕ್ಷಿತ ಜನರಿಗೆ ಚಿಕಿತ್ಸೆ ಒದಗಿಸುವುದಾಗಿದೆ ಎಂದರು.

ಈ ಎರಡು ಯೋಜನೆಗಳನ್ನು ಕ್ಷೇತ್ರಮಟ್ಟದಲ್ಲಿ ಸಂಯೋಜಿಸುವುದು ಕಡ್ಡಾಯವಾಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರದ ಸಹಭಾಗಿತ್ವದಲ್ಲಿ ಒಂದೇ ಯೋಜನೆಯಾಗಿ ‘ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ’ ಯೋಜನೆಯನ್ನು ಈಗ ಭರವಸೆ ಮಾದರಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಅವರು ಹೇಳಿದರು.

ಅಕ್ಟೋಬರ್ 30ರಿಂದ ಈವರೆಗೆ ಎರಡು ಸಾವಿರಕ್ಕೂ ಹೆಚ್ಚು ಮಂದಿಗೆ ಚಿಕಿತ್ಸೆ ನೀಡಲಾಗಿದೆ. ಬಿಪಿಎಲ್ ಕಾರ್ಡು ಹೊಂದಿರುವ 1.20 ಕೋಟಿ ಕುಟುಂಬಗಳು ಈ ಯೋಜನೆಯ ಫಲಾನುಭವಿಗಳಾಗಿರುತ್ತಾರೆ. ಆರೋಗ್ಯ ಕಾರ್ಡು ಇಲ್ಲದಿದ್ದರೂ ಪರವಾಗಿಲ್ಲ, ಬಿಪಿಎಲ್ ಕಾರ್ಡು ಹಾಗೂ ಗುರುತಿನ ಚೀಟಿ ತೋರಿಸಿ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ಅವರು ಹೇಳಿದರು.

ಆರೋಗ್ಯ ಕಾರ್ಡುಗಳು ತ್ವರಿತವಾಗಿ ಜನಸಾಮಾನ್ಯರಿಗೆ ತಲುಪಿಸಲು ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರಗಳ ಜೊತೆಯೂ ಮಾತುಕತೆ ನಡೆಸಲಾಗಿದ್ದು, 30 ರೂ.ಗಳನ್ನು ಪಾವತಿಸಿ ಆರೋಗ್ಯ ಕಾರ್ಡು ಪಡೆಯಬಹುದಾಗಿದೆ ಎಂದು ಶಿವಕುಮಾರ್ ಹೇಳಿದರು. ಆಯುಷ್ಮಾನ್ ಭಾರತ್ ಹಾಗೂ ಆರೋಗ್ಯ ಕರ್ನಾಟಕ ಯೋಜನೆ ಜಾರಿಗೆ ಸಂಬಂಧಿಸಿದಂತೆ ನವೆಂಬರ್ 20ರಂದು ಸರಕಾರಿ ಆಸ್ಪತ್ರೆಗಳು ಹಾಗೂ ನವೆಂಬರ್ 27ರಂದು ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳಿಗಾಗಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.

ಸರಳ(ಸಿಂಪಲ್), ಕ್ಲಿಷ್ಟಕರ(ಸೆಕೆಂಡರಿ) ಹಾಗೂ ತೃತೀಯ(ತುರ್ತು ಚಿಕಿತ್ಸೆ) ಎಂದು ಮೂರು ಹಂತಗಳಲ್ಲಿ ಆರೋಗ್ಯ ಸೇವೆಯನ್ನು ವಿಭಜಿಸಲಾಗಿದೆ. ಸರಳ ಮತ್ತು ಕ್ಲಿಷ್ಟಕರ ಚಿಕಿತ್ಸೆಗೆ ಮೊದಲು ಸರಕಾರಿ ಆಸ್ಪತ್ರೆಗೆ ಹೋಗಬೇಕು. ಅಲ್ಲಿ ಚಿಕಿತ್ಸೆಗೆ ಅಗತ್ಯವಿರುವ ಸೌಲಭ್ಯವಿಲ್ಲದಿದ್ದರೆ ಸರಕಾರಿ ಆಸ್ಪತ್ರೆಯಿಂದಲೇ ಖಾಸಗಿ ಆಸ್ಪತ್ರೆಗೆ ಶಿಫಾರಸ್ಸು ಮಾಡಲಾಗುತ್ತದೆ ಎಂದು ಶಿವಕುಮಾರ್ ಹೇಳಿದರು.

ಬಿಪಿಎಲ್ ಕುಟುಂಬಗಳಿಗೆ ವಾರ್ಷಿಕ 5 ಲಕ್ಷ ರೂ.ಗಳ ವರೆಗಿನ ಚಿಕಿತ್ಸಾ ವೆಚ್ಚವನ್ನು ಸರಕಾರ ಭರಿಸಲಿದೆ. ಅದೇ ರೀತಿ ಎಪಿಎಲ್ ಕಾರ್ಡು ಹೊಂದಿರುವ ಕುಟುಂಬಗಳಿಗೆ ವಾರ್ಷಿಕ 1.50 ಲಕ್ಷ ರೂ.ಗಳ ವರೆಗಿನ ಚಿಕಿತ್ಸಾ ವೆಚ್ಚವನ್ನು ಭರಿಸಲಾಗುತ್ತದೆ. ಈ ಯೋಜನೆಯಡಿಯಲ್ಲಿ ಕೇಂದ್ರ ಸರಕಾರ ಶೇ.60 ಹಾಗೂ ರಾಜ್ಯ ಸರಕಾರ ಶೇ.40ರಷ್ಟು ಅನುದಾನ ಒದಗಿಸಲಿದೆ ಎಂದು ಅವರು ತಿಳಿಸಿದರು.

ಈ ಯೋಜನೆಯಡಿ 1624 ಬಗೆಯ ಚಿಕಿತ್ಸೆಗಳನ್ನು ಬಡವರಿಗೆ ನೀಡಲು ಪಟ್ಟಿ ಮಾಡಲಾಗಿದೆ. ನಮ್ಮ ರಾಜ್ಯದಲ್ಲಿ 531 ಖಾಸಗಿ ಆಸ್ಪತ್ರೆಗಳು ಹಾಗೂ 385 ಸರಕಾರಿ ಆಸ್ಪತ್ರೆಗಳಿವೆ. ಜೊತೆಗೆ ನೆರೆಯ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರದ 36 ಆಸ್ಪತ್ರೆಗಳೊಂದಿಗೆ ಚಿಕಿತ್ಸೆಗಾಗಿ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ಶಿವಕುಮಾರ್ ಹೇಳಿದರು.

ಕೇವಲ ನಮ್ಮ ರಾಜ್ಯದವರಷ್ಟೇ ಅಲ್ಲ, ಹೊರ ರಾಜ್ಯದ ಕಾರ್ಮಿಕರಿಗೂ ಈ ಯೋಜನೆಯಡಿ ಚಿಕಿತ್ಸೆ ನೀಡಲಾಗುತ್ತದೆ. ಈ ಹಿಂದೆ 1514 ಸಮಸ್ಯೆಗಳಿಗೆ ಚಿಕಿತ್ಸೆಗಳನ್ನು ಗುರುತಿಸಿ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ, ಈಗ 1624 ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಾಗುತ್ತದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News