ಕಾವೇರಿ ಪ್ರತಿಮೆಯ ಹೆಸರಲ್ಲಿ ಕಾವೇರಿ ತಾಯಿಗೆ ಅವಮಾನ

Update: 2018-11-16 05:46 GMT

 ‘‘ಎಲ್ಲ ಬಿಟ್ಟ ಭಂಗಿ ನೆಟ್ಟ’’ ಎನ್ನುವ ಗಾದೆಯಿದೆ. ಈ ನಾಡಿನ ರೈತರ ಸಮಸ್ಯೆಗಳು ಬೀದಿಯಲ್ಲಿ ಕಾಲು ಮುರಿದು ಬಿದ್ದಿರುವ ಹೊತ್ತಿನಲ್ಲಿ ರಾಜ್ಯ ಸರಕಾರ ‘ತಾಯಿ ಕಾವೇರಿ’ ಪ್ರತಿಮೆಯನ್ನು ನಿರ್ಮಿಸಲು ಹೊರಟಿದೆ. ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವುದು ಸರಕಾರದ ಉದ್ದೇಶವಂತೆ. ಈಗಾಗಲೇ ನಮ್ಮ ನಾಡಿನಲ್ಲಿರುವ ಪ್ರವಾಸಿ ಸ್ಥಳಗಳು ಅನಾಥವಾಗಿ ಬಿದ್ದುಕೊಂಡಿರುವಾಗ, ದುರಸ್ತಿ ಕಾರ್ಯಗಳೇ ಇಲ್ಲದೆ ನಾಶದ ಅಂಚಿನಲ್ಲಿರುವಾಗ ಸರಕಾರ ಹೊಸದಾಗಿ ಪ್ರವಾಸೋದ್ಯಮಕ್ಕಾಗಿ ಪ್ರತಿಮೆಯೊಂದನ್ನು ನಿರ್ಮಿಸುವ ಯೋಜನೆ ಹಾಕಿಕೊಂಡಿದೆ. ಸರಕಾರ ಒಂದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಅತಿ ಎತ್ತರದ ಪ್ರತಿಮೆಯೊಂದನ್ನು ನಿರ್ಮಿಸಿದಾಕ್ಷಣ ಅದು ಪ್ರವಾಸಿ ತಾಣವಾಗುವುದಿಲ್ಲ. ಯಾವುದೇ ಪ್ರವಾಸಿ ತಾಣಗಳಿಗೆ ಒಂದು ಐತಿಹಾಸಿಕ, ಸಾಂಸ್ಕೃತಿಕ ಹಿನ್ನೆಲೆಯಿದ್ದಾಗ ಮಾತ್ರ ಅದು ಜನರನ್ನು ಸೆಳೆಯುತ್ತದೆ.

ನಮ್ಮ ನಾಡಿನ ಗೋಮಟೇಶ್ವರ, ಗೋಲಗುಂಬಜ್‌ನ್ನು ಬರೇ ಎತ್ತರದ ಪ್ರತಿಮೆ ಅಥವಾ ಅದ್ಭುತ ಕಟ್ಟಡ ಎನ್ನುವ ಕಾರಣಕ್ಕಾಗಿಯಷ್ಟೇ ವೀಕ್ಷಿಸಲು ಬರುತ್ತಿಲ್ಲ. ಆ ಪ್ರತಿಮೆ, ಕಟ್ಟಡಗಳ ಹಿಂದೆ ಈ ನಾಡಿನ ಐತಿಹಾಸಿಕ, ಸಾಂಸ್ಕೃತಿಕ ನೆನಪುಗಳಿವೆ. ಆ ನೆನಪುಗಳನ್ನು ಹುಡುಕಿಕೊಂಡು ಪ್ರವಾಸಿಗರು ರಾಜ್ಯಕ್ಕೆ ಬರುತ್ತಾರೆ. ಸದ್ಯಕ್ಕೆ ಕರ್ನಾಟಕದಲ್ಲಿ ಪ್ರವಾಸಿ ತಾಣಗಳು ಬೇಕಾದಷ್ಟಿವೆ. ಐತಿಹಾಸಿಕವಾಗಿ, ಸಾಂಸ್ಕೃತಿಕವಾಗಿ ಭಾರೀ ಹಿನ್ನೆಲೆಯಿರುವ ಕಟ್ಟಡಗಳು, ಕೋಟೆಗಳು ಮಳೆ ಬಿಸಿಲುಗಳಿಂದ ನಾಶವಾಗುತ್ತಿವೆ. ಅವುಗಳನ್ನು ಉದ್ಧರಿಸುವ ಮತ್ತು ಅವುಗಳಿಗೆ ಪ್ರಚಾರ ಕೊಡುವ ಕೆಲಸವನ್ನು ಮಾಡಿದರೂ ಕರ್ನಾಟಕದ ಪ್ರವಾಸೋದ್ಯಮ ಚಟುವಟಿಕೆಗಳು ದುಪ್ಪಟ್ಟಾಗುತ್ತವೆ. ಆದರೆ ರಾಜ್ಯ ಸರಕಾರ ಬಿಜೆಪಿಯ ‘ಪ್ರತಿಮೆ ರಾಜಕೀಯ’ವನ್ನು ಮಾದರಿಯಾಗಿಟ್ಟುಕೊಂಡು, ಕರ್ನಾಟಕದ ಜನರನ್ನು, ರೈತರನ್ನು ಭಾವನಾತ್ಮಕವಾಗಿ ಮೋಸಗೊಳಿಸುವ ಸಾಹಸಕ್ಕೆ ಇಳಿದಿದೆ.

ಕಳೆದ ಅಧಿಕಾರಾವಧಿಯಲ್ಲಿ ಕಾಂಗ್ರೆಸ್ ಸರಕಾರ ಕೆಲವು ಬಡವರ ಪರವಾದ ಕಾರ್ಯಕ್ರಮ ಹಾಕಿಕೊಂಡಿತ್ತು. ಒಂದು ರೂಪಾಯಿಗೆ ಅಕ್ಕಿ ಕೊಟ್ಟಾಗ ಅದನ್ನು ವ್ಯಂಗ್ಯವಾಡಿದ್ದರು. ‘ತೆರಿಗೆಯ ಹಣ’ ಪೋಲು ಎಂದು ಟೀಕೆಯನ್ನು ಮಾಡಲಾಗಿತ್ತು. ಇಂದಿರಾ ಕ್ಯಾಂಟೀನ್ ವಿಷಯದಲ್ಲೂ ಇಂತಹದೇ ಆರೋಪಗಳು ಕೇಳಿ ಬಂದಿದ್ದವು. ಒಂದೆಡೆ ಕೇಂದ್ರ ಸರಕಾರ ಜನವಿರೋಧಿ ಆರ್ಥಿಕ ನೀತಿಗಳನ್ನು ಜಾರಿಗೊಳಿಸುತ್ತಿದ್ದಾಗ, ಸಿದ್ದರಾಮಯ್ಯ ಸರಕಾರ ಜನಪರ ಯೋಜನೆಗಳನ್ನು ಘೋಷಿಸುತ್ತಾ ಇಡೀ ದೇಶವೇ ತನ್ನೆಡೆಗೆ ನೋಡುವಂತೆ ಮಾಡಿತ್ತು. ಇಂದಿಗೂ ಕರ್ನಾಟಕದ ಅಭಿವೃದ್ಧಿ ಇತರ ರಾಜ್ಯಗಳಿಗೆ ಮಾದರಿಯಾಗಿದೆೆ. ಸೋಲಾರ್ ಮೂಲಕ ಸ್ವಾವಲಂಬಿಯಾಗುವ ಕನಸಿನ ‘ಕರ್ನಾಟಕ ಸೌರ ನೀತಿ’ ದೇಶದಲ್ಲೇ ಅತ್ಯುತ್ತಮವೆಂದು ಹೇಳಲಾಗಿತ್ತು. ರೈತರ ಸಾಲಮನ್ನಾ ಕೂಡ ರೈತರ ಪಾಲಿಗೆ ಒಂದಿಷ್ಟು ನಿರಾಳತೆಯನ್ನು ತಂದಿತ್ತು. ಇವೆಲ್ಲವೂ ಕರ್ನಾಟಕದ ಸಮಗ್ರ ಅಭಿವೃದ್ಧಿಯಲ್ಲಿ, ಏಳಿಗೆಯಲ್ಲಿ ಮಹತ್ವದ ಪಾತ್ರವಹಿಸಿತ್ತು. ಆದರೆ ದುರದೃಷ್ಟವೆಂಬಂತೆ, ಬಿಜೆಪಿಯ ಪ್ರತಿಮೆಗಳ ಮೋಹಕ್ಕೆ ಇದೀಗ ಮೈತ್ರಿ ಸರಕಾರ ಬಲಿಯಾಗಿದೆ. ಗುಜರಾತ್‌ನಲ್ಲಿ, ಮುಂಬೈ, ಉತ್ತರ ಪ್ರದೇಶದಲ್ಲ್ಲಿ ಸಾಲು ಸಾಲಾಗಿ ಪ್ರತಿಮೆಗಳನ್ನು ಸ್ಥಾಪಿಸಿ ಆ ಮೂಲಕ ಜನರನ್ನು ಭಾವನಾತ್ಮಕವಾಗಿ ಸೆಳೆಯಲು ಸರಕಾರ ಹೊರಟಂತಿದೆ. ಅಭಿವೃದ್ಧಿ ಕೆಲಸಕ್ಕಿಂತ, ಇಂತಹ ಭಂಗಿ ನೆಡುವ ಕೆಲಸದಿಂದ ಹೆಚ್ಚು ಜನಪ್ರಿಯವಾಗಬಹುದು ಎಂದು ಸರಕಾರ ನಂಬಿದಂತಿದೆ.

ಒಂದೆಡೆ ದೇಶದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಬ್ರಿಟನ್‌ನಂತಹ ದೇಶಗಳಿಂದ ಹಲವು ಸಾವಿರ ಕೋಟಿ ರೂಪಾಯಿಗಳ ನೆರವು ಪಡೆದುಕೊಳ್ಳುತ್ತಾ, ಮಗದೊಂದೆಡೆ 3000 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರತಿಮೆ ನಿರ್ಮಿಸಿದ್ದು, ವಿಶ್ವಾದ್ಯಂತ ವ್ಯಂಗ್ಯ, ಟೀಕೆಗಳಿಗೆ ಗುರಿಯಾಗಿರುವುದನ್ನು ಮುಖ್ಯಮಂತ್ರಿ ಮರೆಯಬಾರದು. ಪ್ರವಾಸೋದ್ಯಮವನ್ನು ಸೃಷ್ಟಿಸುವಲ್ಲೂ ಇದು ವಿಫಲವಾಗುತ್ತದೆ ಎಂದು ತಜ್ಞರು ಈಗಾಗಲೇ ಹೇಳಿದ್ದಾರೆ. ಈ ಪ್ರತಿಮೆಗಾಗಿ ನೂರಾರು ಗ್ರಾಮಗಳು ಬಲಿಯಾಗಿವೆ. ಪರಿಸರ ನಾಶವಾಗಿದೆ. ಜನಸಾಮಾನ್ಯರು ತೊಂದರೆಗಳನ್ನು ಅನುಭವಿಸಿದ್ದಾರೆ. ಈ ಪ್ರತಿಮೆಯ ವಿರುದ್ಧ ಸ್ಥಳೀಯರೇ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಇತ್ತ ಮುಂಬೈಯಲ್ಲಿ ಸ್ಥಾಪಿಸಲು ಹೊರಟಿರುವ ಶಿವಾಜಿ ಪಾರ್ಕ್ ಕೂಡ ಇಂತಹದೇ ಟೀಕೆಗಳನ್ನು ಎದುರಿಸುತ್ತಿವೆ. ಮೀನುಗಾರರಿಗೆ, ಪರಿಸರಕ್ಕೆ ತೊಂದರೆ ಕೊಟ್ಟು ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಪ್ರತಿಮೆ ನಿರ್ಮಿಸುವುದರಿಂದ ಈ ದೇಶಕ್ಕಾಗುವ ಲಾಭವಾದರೂ ಏನು? ಈ ಶಿವಾಜಿ ಪಾರ್ಕ್‌ನಿಂದ ದೇಶ ಹೇಗೆ ಅಭಿವೃದ್ಧಿಯಾಗುತ್ತದೇ? ಎಂಬ ಪ್ರಶ್ನೆಗಳನ್ನು ತಿಳಿದವರು ಕೇಳುತ್ತಿದ್ದಾರೆ. ಜನರನ್ನು ಸಾಯಿಸಿ, ದೇಶವನ್ನು ನಿರ್ಜೀವ ಪ್ರತಿಮೆಗಳ ನೆಲವಾಗಿ ಪರಿವರ್ತಿಸಲು ಬಿಜೆಪಿ ನಾಯಕರು ಹೊರಟಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಸಾಬೀತಾಗುತ್ತದೆ. ಇಂತಹ ಸಂದರ್ಭದಲ್ಲಿ ಬಿಜೆಪಿಯ ನಾಯಕರಿಗೆ ಕರ್ನಾಟಕದ ಅಭಿವೃದ್ಧಿ ಮಾದರಿಯಾಗಬೇಕು. ಆದರೆ ದುರದೃಷ್ಟವಶಾತ್ ಕರ್ನಾಟಕದ ಸರಕಾರಕ್ಕೆ ಬಿಜೆಪಿಯ ಪ್ರತಿಮೆಗಳು ಆದರ್ಶವಾಗುತ್ತಿದೆ.

 ಪ್ರತಿಮೆ ನಿರ್ಮಿಸಲು ಸರಕಾರದ ಬಳಿಕ ಒಂದೂವರೆ ಸಾವಿರ ಕೋಟಿ ರೂಪಾಯಿಯಿದೆಯೆಂದಾದರೆ ಆ ಹಣವನ್ನು ಕಾವೇರಿ ತಾಯಿಯ ಹೆಸರಲ್ಲಿ ಆಕೆಯ ನದಿ ಪಾತ್ರದಲ್ಲಿ ಕೃಷಿ ನಡೆಸುವ ರೈತರಿಗಾಗಿ ಬಳಸಬೇಕಾಗಿದೆ. ಒಂದೆಡೆ ಕಾವೇರಿಯ ತವರೂರಾಗಿರುವ ಕೊಡಗು ನೆರೆ ಹಾನಿಯಿಂದ ಇನ್ನೂ ಚೇತರಿಸಿಕೊಂಡಿಲ್ಲ. ಉತ್ತರ ಕರ್ನಾಟಕದಲ್ಲಿ ಬರಪೀಡಿತ ತಾಲೂಕುಗಳನ್ನು ಈಗಾಗಲೇ ಘೋಷಿಸಲಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಕಬ್ಬು ಬೆಳೆಗಾರರು ಬೆಳೆದ ಕಬ್ಬಿನ ಹಣಕ್ಕಾಗಿ ಕಾಯುತ್ತಿದ್ದಾರೆ. ನಾಡಿನಾದ್ಯಂತ ಇರುವ ರೈತರ ಸಮಸ್ಯೆಗಳಿಗೆ ಸ್ಪಂದಿಸಿ, ಅವರಿಗಾಗಿ ಆ ಹಣ ವ್ಯಯ ಮಾಡಿದರೆ ತಾಯಿ ಕಾವೇರಿಗೆ ಗೌರವ ಸಲ್ಲಿಸಿದಂತೆ. ಯಾಕೆಂದರೆ, ಈ ನಾಡಿನ ರೈತರ ಎದೆಯಲ್ಲಿ ತಾಯಿ ಕಾವೇರಿಯಿದ್ದಾಳೆ.

ಇಷ್ಟಕ್ಕೂ ಕಾವೇರಿ ಪ್ರತಿಮೆ ಎನ್ನುವುದೇ ಒಂದು ದೊಡ್ಡ ಭ್ರಮೆ. ಕಾವೇರಿಯೆನ್ನುವುದು ನದಿಯ ಹೆಸರು. ಹೀಗಿರುವಾಗ ಕಾವೇರಿಯ ಹೆಸರಲ್ಲಿ ಇವರು ಯಾವ ರೀತಿಯ ಪ್ರತಿಮೆಯನ್ನು ಮಾಡಲು ಹೊರಟಿದ್ದಾರೆ? ಯಾವುದೋ ಒಂದು ಹೆಣ್ಣಿನ ಪ್ರತಿಮೆಯನ್ನು ಕೆತ್ತಿಟ್ಟು ಅದಕ್ಕೆ ಕಾವೇರಿಯ ಹೆಸರು ಕೊಟ್ಟರೆ ಅದರಿಂದ ಕಾವೇರಿ ನದಿಗೆ ಏನು ಲಾಭವಾಯಿತು? ಆ ಪ್ರತಿಮೆಯಿಂದ ರೈತರ ಗದ್ದೆಗಳಿಗೆ ನೀರು ಹರಿಯುತ್ತದೆಯೇ? ಇರುವ ಅರಣ್ಯ ಪ್ರದೇಶಗಳಲ್ಲಿ ಕಾವೇರಿ ಹೆಸರಲ್ಲಿ ರೆಸಾರ್ಟ್‌ಗಳನ್ನು ಸ್ಥಾಪಿಸಿ ಪ್ರವಾಸಿಗರನ್ನು ಸೆಳೆದರೆ, ಅದರಿಂದ ರೈತರಿಗೆ ಲಾಭವಾಗುತ್ತದೆಯೇ? ಸರಕಾರ ಯಾವ ಕಾರಣಕ್ಕೂ ಕಾವೇರಿ ಪ್ರತಿಮೆಯ ಹೆಸರಿನಲ್ಲಿ ರೈತರ ಹಣವನ್ನು ದುಂದು ಮಾಡಬಾರದು. ಒಂದು ವೇಳೆ ಪ್ರತಿಮೆಗಾಗಿ ಆ ಹಣವನ್ನು ಬಳಸಿದರೆ ನಾಡಿನ ರೈತರಿಗೆ ಬಗೆಯುವ ದ್ರೋಹವಾಗುತ್ತದೆ. ರೈತರಿಗೆ ಮಾಡುವ ದ್ರೋಹ ಪರೋಕ್ಷವಾಗಿ ಕಾವೇರಿ ತಾಯಿಗೆ ಮಾಡುವ ಅವಮಾನವೇ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News