ರಫೇಲ್ ಒಪ್ಪಂದ: ಅಕ್ರಮವಾಗಿ ಫ್ರಾನ್ಸ್ ಜತೆ ಮಾತುಕತೆ ನಡೆಸಿದ್ದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್?

Update: 2018-11-16 05:46 GMT

ಹೊಸದಿಲ್ಲಿ, ನ.16:  59,000 ಕೋಟಿ ರೂ. ಮೊತ್ತದ ರಫೇಲ್ ಒಪ್ಪಂದದ ಸುತ್ತ ಹರಡಿಕೊಂಡಿರುವ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಇಂತಹ ಒಪ್ಪಂದಗಳ ವಿಚಾರದಲ್ಲಿ ಮಾತುಕತೆ ನಡೆಸುವ ಅಧಿಕಾರ ರಕ್ಷಣಾ ಸಚಿವಾಲಯದ ಆಂತರಿಕ ಸಮಾಲೋಚನಾ ತಂಡಕ್ಕೆ ಮಾತ್ರ ಇರುವ ಹೊರತಾಗಿಯೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅಕ್ರಮವಾಗಿ ಫ್ರಾನ್ಸ್ ಜತೆ ಸಮಾಲೋಚನೆ ನಡೆಸಿದ್ದಾರೆಂಬ ಸ್ಫೋಟಕ ಮಾಹಿತಿ  ಹೊರಬಿದ್ದಿರುವುದಾಗಿ newscentral24x7.com ವರದಿ ಮಾಡಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭದ್ರತಾ ಸಂಪುಟ ಸಮಿತಿಯು ಫ್ರಾನ್ಸ್ ಜತೆ ಅಂತರ್-ಸರಕಾರಿ ಒಪ್ಪಂದಕ್ಕೆ ಒಪ್ಪಿಗೆ ನೀಡಿದ ಮುನ್ನಾ ದಿನ ರಕ್ಷಣಾ ಸಚಿವಾಲಯದ ವಿಮಾನ ಖರೀದಿ ಘಟಕವು ಆಗಸ್ಟ್ 23, 2016ರಂದು ನೀಡಿದ ಟಿಪ್ಪಣಿಯನ್ನು ವಕೀಲ ಪ್ರಶಾಂತ್ ಭೂಷಣ್ ಟ್ವಿಟ್ಟರ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಜಿತ್ ದೋವಲ್ ಅವರು  ರಫೇಲ್ ಒಪ್ಪಂದದ ಕುರಿತಂತೆ ಫ್ರಾನ್ಸ್ ಜತೆ ಪ್ಯಾರಿಸ್‍ನಲ್ಲಿ ಜನವರಿ 12, 13, 2016ರಂದು ಸಮಾಲೋಚನೆ ನಡೆಸಿದ್ದರೆಂದು ಅದರಲ್ಲಿ ಸ್ಪಷ್ಟವಾಗಿ ತಿಳಿಯುತ್ತದೆ.

ರಫೇಲ್ ಒಪ್ಪಂದದ ಮಾತುಕತೆಗಳನ್ನು  ರಕ್ಷಣಾ ಸಚಿವಾಲಯದ ಆಂತರಿಕ ಸಮಾಲೋಚನಾ ಸಮಿತಿ ಮಾತ್ರ ನಡೆಸಿತ್ತೆಂದು  ಮೋದಿ ಸರಕಾರದ ವಿವಿಧ ಸಚಿವಾಲಯಗಳು  ಇಲ್ಲಿಯ ತನಕ  ಹೇಳುತ್ತಾ ಬಂದಿವೆ. ಸಮಿತಿಯ ನೇತೃತ್ವ ವಾಯು ಪಡೆಯ ಉಪ ಮುಖ್ಯಸ್ಥರದ್ದಾಗಿದೆ.

ನಿಯಮದ ಪ್ರಕಾರ  ಪ್ರಧಾನಿ ಕಾರ್ಯಾಲಯದ ಸಲಹೆಗಾರರಾಗಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರರು ಭದ್ರತಾ ಸಂಪುಟ ಸಮಿತಿಯ  ಸದಸ್ಯರೂ ಆಗಿಲ್ಲದೇ ಇರುವುದರಿಂದ ಅವರು ಇಂತಹ ಸಮಾಲೋಚನೆಗಳಲ್ಲಿ ಭಾಗವಹಿಸುವ ಹಾಗಿಲ್ಲ. ತಂಡದ ಭಾಗವಾಗಿರದ ರಕ್ಷಣಾ ಸಚಿವ ಹಾಗೂ ಬೇರೆ ಯಾವುದೇ ಅಧಿಕಾರಿ ಕೂಡ ಇಂತಹ ಸಮಾಲೋಚನೆಯಲ್ಲಿ ಭಾಗವಹಿಸುವ ಹಾಗಿಲ್ಲ.

ಆದರೆ ರಫೇಲ್ ಒಪ್ಪಂದದ ಕುರಿತ ಸಮಾಲೋಚನೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರರ ನೇರ ಶಾಮೀಲಾತಿ ಅಕ್ರಮವಾಗಿರುವ ಹೊರತಾಗಿ ಇದರಲ್ಲಿ ಪ್ರಧಾನಿ ಹೊಂದಿದ ವೈಯಕ್ತಿಕ ಆಸಕ್ತಿಯೂ ಸ್ಪಷ್ಟವಾಗುತ್ತಿದೆ ಎಂದು newscentral24x7.com ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News