ಗೌರಿ ಹತ್ಯೆಗೆ ಬಳಸಿದ್ದ ಪಿಸ್ತೂಲನ್ನು ಬೆಳಗಾವಿ ಅರಣ್ಯ ಪ್ರದೇಶದ ಶಸ್ತ್ರಾಸ್ತ್ರ ತರಬೇತಿ ಸ್ಥಳದಲ್ಲೂ ಬಳಸಲಾಗಿತ್ತು

Update: 2018-11-16 07:18 GMT

ಬೆಂಗಳೂರು, ನ.16: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಬಳಸಲಾದ 7.65 ಎಂಎಂ ಪಿಸ್ತೂಲು ಅವರ ಹತ್ಯೆ ನಡೆಯುವ ಮುನ್ನ ಕೇಸರಿ ತೀವ್ರವಾದಿಗಳ ವಶದಲ್ಲಿತ್ತೆಂದು ತನಿಖೆಯಿಂದ ತಿಳಿದು ಬಂದಿರುವುದಾಗಿ indianexpress.com ವರದಿ ಮಾಡಿದೆ.

ಬಂಧಿತ ಆರೋಪಿ ಪರಶುರಾಮ್ ವಾಗ್ಮೋರೆ ಬಂದೂಕು ತರಬೇತಿ ಪಡೆದಿದ್ದನೆನ್ನಲಾದ ಅರಣ್ಯ ಪ್ರದೇಶದಿಂದ ವಶಪಡಿಸಿಕೊಳ್ಳಲಾದ ಗುಂಡುಗಳು ಮತ್ತು ಕಾಟ್ರಿಜ್ ಗೂ ಗೌರಿ ಹಂತಕರು ಬಳಸಿದ ಗುಂಡುಗಳಿಗೂ ತಾಳೆಯಾಗುತ್ತವೆ ಎಂದು ವಿಧಿವಿಜ್ಞಾನ ವಿಶ್ಲೇಷಣೆಯಿಂದ ತಿಳಿದು ಬಂದಿದೆ.

ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವನ್ನು ಇತ್ತೀಚೆಗೆ ಬಂಧಿತ ಆರೋಪಿಗಳ ಪೈಕಿ ಒಬ್ಬಾತ ಬೆಳಗಾವಿಯ ಅರಣ್ಯ ಪ್ರದೇಶದಲ್ಲಿ ಶಸ್ತ್ರಾಸ್ತ್ರ ತರಬೇತಿ ನಡೆಯುತ್ತಿದ್ದ ಸ್ಥಳಕ್ಕೆ ಕರೆದೊಯ್ದಿದ್ದ. ಇದೇ ಸ್ಥಳದಲ್ಲಿ ಗೌರಿ ಹತ್ಯೆಗಿಂತ ಕೆಲ ವಾರಗಳ ಮುಂಚೆ ವಾಗ್ಮೋರೆಗೆ ತರಬೇತಿ ನೀಡಲಾಗಿತ್ತು. ಅಲ್ಲಿ ಲೋಹ ಶೋಧಕಗಳನ್ನು ಬಳಸಿ ಶೋಧಿಸಿದ ವಿಶೇಷ ತನಿಖಾ ತಂಡಕ್ಕೆ ಆರು ಗುಂಡುಗಳು ಹಾಗೂ ಆರು ಕಾಟ್ರಿಜ್ ಗಳು ಪತ್ತೆಯಾಗಿದ್ದವು. ಇವುಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿ ತಪಾಸಣೆಗೈದಾಗ ಅವುಗಳ ಪೈಕಿ ಒಂದು ಬುಲೆಟ್ ಮತ್ತು ಕಾಟ್ರಿಜ್ ಗೌರಿ ಹಂತಕರು ಬಳಸಿದ್ದ ಬುಲೆಟ್ ಮತ್ತು ಕಾಟ್ರಿಜ್ ಗೆ ಹೋಲಿಕೆಯಾಗುತ್ತಿದ್ದು, ತರಬೇತಿಗೆ ಬಳಸಿದ್ದ ಅದೇ 7.65 ಎಂಎಂ ಪಿಸ್ತೂಲ್ ಹತ್ಯೆಗೆ ಬಳಕೆಯಾಗಿತ್ತು ಎಂದು ತಿಳಿದು ಬಂದಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News