ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಫೆಬ್ರವರಿಯೊಳಗೆ ಪೂರ್ಣ: ಸಿಎಂ ಕುಮಾರಸ್ವಾಮಿ

Update: 2018-11-16 13:22 GMT

ಬೆಂಗಳೂರು, ನ.16: ಕೆಲವು ತಾಂತ್ರಿಕ ಸಮಸ್ಯೆಯಿಂದಾಗಿ ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ವಿಳಂಬವಾಗಿದೆ. ಹೀಗಾಗಿ 2019ರ ಫೆಬ್ರವರಿ ಅಂತ್ಯದೊಳಗೆ ಶಿಕ್ಷಕರ ವಾರ್ಗಾವಣೆ ಕಾಯ್ದೆಗೆ ಸೂಕ್ತ ತಿದ್ದುಪಡಿ ತಂದು ವರ್ಗಾವಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಶುಕ್ರವಾರ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಶೈಕ್ಷಣಿಕ ಸಮ್ಮೇಳನ ಹಾಗೂ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ವರ್ಗಾವಣೆ ಬಯಸುವ ಶಿಕ್ಷಕರು ಮುಂದಿನ ಶೈಕ್ಷಣಿಕ ವರ್ಷದಿಂದ ತಾವು ಇಚ್ಛಿಸುವ ಶಾಲೆಯಲ್ಲಿ ನಿಯೋಜನೆಗೊಳ್ಳಲಿದ್ದಾರೆ ಎಂದು ತಿಳಿಸಿದರು

ಶಾಲೆಯ ದುರಸ್ಥಿಗೆ 1200 ಕೋಟಿ ರೂ.: ಸರಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಯಾವುದೆ ರೀತಿಯಲ್ಲಿ ಕಡಿಮೆ ಇಲ್ಲದಂತೆ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲು 1200 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಶಿಕ್ಷಕರು ಸಹ ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಬೋಧನೆ ಮಾಡುವ ಮೂಲಕ ಸರಕಾರಿ ಶಾಲೆಗಳತ್ತ ಪೋಷಕರು ಹಾಗೂ ವಿದ್ಯಾರ್ಥಿಗಳು ಆಕರ್ಷಿಸುವಂತೆ ಮಾಡಬೇಕೆಂದು ಅವರು ಆಶಿಸಿದರು.

ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ, ಹಳೆ ಪಿಂಚಣಿ ಯೋಜನೆಯನ್ನೆ ಮುಂದುವರಿಸಬೇಕೆಂದು ಶಿಕ್ಷಕರು ಬೇಡಿಕೆ ಇಟ್ಟಿದ್ದಾರೆ. ಈ ಸಂಬಂಧ ಒಂದು ಸಮಿತಿಯನ್ನು ರಚಿಸಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರುಗಳಿಗೆ ಸೇವಾ ಜೇಷ್ಠತೆಯ ಆಧಾರದ ಮೇಲೆ ಉಪನಿರ್ದೇಶಕರ ಹುದ್ದೆಯವರೆಗೆ ಮುಂಭಡ್ತಿ ನೀಡುವುದರ ಕುರಿತು ಪರಿಶೀಲನೆ ನಡೆಸಲಾಗುವುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಅತಿಥಿ ಉಪನ್ಯಾಸಕರು, ಹಾಸ್ಟೆಲ್‌ಗಳಲ್ಲಿ ಕೆಲಸ ಮಾಡುತ್ತಿರುವ ಕೆಳ ಹಂತದ ಸಿಬ್ಬಂದಿಗಳಿಗೆ ಆರ್ಥಿಕವಾಗಿ ಸಮಸ್ಯೆಯಾಗದಂತೆ ಶಾಶ್ವತ ಪರಿಹಾರ ನೀಡಲಾಗುವುದು. ನನ್ನ ಸರಕಾರ ಪೂರ್ಣಗೊಳ್ಳುವುದರಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆ ತರಲಾಗುವುದು ಎಂದು ಅವರು ಹೇಳಿದರು.

ಸಭಾಪತಿ ಬಸವರಾಜ್ ಹೊರಟ್ಟಿ ಮಾತನಾಡಿ, ಶಿಕ್ಷಕರು ಸಂತೋಷದಿಂದ ಇದ್ದಾಗ ಮಾತ್ರ ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಪಾಠ ಮಾಡಲು ಸಾಧ್ಯ. ಆದರೆ, ಶಾಲಾ ಶಿಕ್ಷಕರು ವಾರ್ಗಾವಣೆ, ಭಡ್ತಿ, ಹೆಚ್ಚುವರಿ ಕೆಲಸಗಳು ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇವೆಲ್ಲಕ್ಕೂ ಸೂಕ್ತ ಪರಿಹಾರವನ್ನು ಒದಗಿಸಿ ಶಿಕ್ಷಕರಿಗೆ ಉತ್ತಮ ವಾತಾವರಣ ನಿರ್ಮಿಸುವುದು ಸರಕಾರದ ಕರ್ತವ್ಯವೆಂದು ತಿಳಿಸಿದರು.

ಮಾಜಿ ಶಿಕ್ಷಣ ಸಚಿವ ಎನ್.ಮಹೇಶ್ ಮಾತನಾಡಿ, ಖಾಸಗಿ ಶಾಲೆಯ ವಿದ್ಯಾರ್ಥಿಗಳಿಗೆ ಹೋಲಿಸಿದರೆ, ಸರಕಾರಿ ಶಾಲೆಯ ವಿದ್ಯಾರ್ಥಿಗಳೆ ಕ್ರಿಯಾಶೀಲರು ಹಾಗೂ ಬುದ್ಧಿವಂತರಾಗಿದ್ದಾರೆ. ಆದರೆ, ಅವರಲ್ಲಿರುವ ಪ್ರತಿಭೆಯನ್ನು ಹೊರಕ್ಕೆ ತರುವಂತಹ ವಾತಾವರಣ ನಿರ್ಮಾಣ ಮಾಡುವುದು ಇಂದಿನ ತುರ್ತು ಅಗತ್ಯವೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬೆಂಗಳೂರು ವಿಭಾಗ, ಮೈಸೂರು ವಿಭಾಗ ಹಾಗೂ ಕಲಬುರ್ಗಿ ವಿಭಾಗದ ಹಿರಿಯ ಶಿಕ್ಷಕರಿಗೆ ಮಾತೆ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ವೇಳೆ ಪರಿಷತ್ ಸದಸ್ಯರಾದ ಬೋಜೇಗೌಡ, ಚೌಡರೆಡ್ಡಿ, ಪ್ರಾಥಮಿಕ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಡಾ.ಪಿ.ಸಿ.ಜಾಫರ್, ಸಂಘದ ಅಧ್ಯಕ್ಷ ವಿ.ಎಂ.ನಾರಾಯಣಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸರಕಾರಿ ಶಾಲೆಯ ಸಮಸ್ಯೆಗಳು ಹೀಗೆ ಮುಂದುವರೆದರೆ 2022ರ ವೇಳೆಗೆ ಶೇ.70ರಷ್ಟು ಶಾಲೆಗಳು ಮುಚ್ಚಲಿದೆ. ಹೀಗಾಗಿ ಸರಕಾರ ಹಾಗೂ ಶಿಕ್ಷಕರು ಜತೆಗೂಡಿ ಮಕ್ಕಳನ್ನು ಸರಕಾರಿ ಶಾಲೆಯತ್ತ ಆಕರ್ಷಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಿ, ಕಾರ್ಯಗತಗೊಳಿಸಬೇಕಿದೆ.

-ಬಸವರಾಜ ಹೊರಟ್ಟಿ, ಸಭಾಪತಿ

ಆರ್‌ಟಿಇ ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ಪೀಡುಗಾಗಿ ಪರಿಣಮಿಸಿದ್ದು, ಸರಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ಮುಟ್ಟಿದೆ. ಹೀಗಾಗಿ ಸರಕಾರ ಹಾಗೂ ಶಿಕ್ಷಣ ತಜ್ಞರು ಚಿಂತಿಸಿ, ಕಾನೂನು ತಿದ್ದುಪಡಿಗಳನ್ನು ತರಬೇಕಿದೆ. ಸರಕಾರಿ ಶಾಲೆಗಳು ಉಳಿದರೆ ಮಾತ್ರ ನಾಡಿನ ಅಸ್ಮಿತೆ ಉಳಿಸಲು ಸಾಧ್ಯ.

-ಮರಿತಿಬ್ಬೇಗೌಡ, ಪರಿಷತ್ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News