ರೈತರು ಆತ್ಮಹತ್ಯೆ ಆಲೋಚನೆ ಬಿಡಿ: ಉಪ ಮುಖ್ಯಮಂತ್ರಿ ಪರಮೇಶ್ವರ್

Update: 2018-11-16 13:26 GMT

ಬೆಂಗಳೂರು, ನ.16: ಎಲ್ಲರಿಗೂ ಅನ್ನ ನೀಡುವ ರೈತ, ಎಂತಹ ಕಷ್ಟವೇ ಬರಲಿ ಆತ್ಮಹತ್ಯೆಯ ಆಲೋಚನೆ ಮಾಡಬಾರದು ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಶುಕ್ರವಾರ ನಗರದ ಜಿಕೆವಿಕೆ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಪ್ರಗತಿಪರ ರೈತರಿಗೆ ಪ್ರಶಸ್ತಿ ಪ್ರದಾನಿಸಿ ಮಾತನಾಡಿದ ಅವರು, ಈ ಬಾರಿ ರಾಜ್ಯದಲ್ಲಿ ಮಾನ್ಸೂನ್ ಮಳೆ ನಿರೀಕ್ಷಿತ ಮಟ್ಟದಲ್ಲಿ ಆಗದ ಕಾರಣ ಬರಗಾಲದ ಛಾಯೆ ಮೂಡಿದ್ದು, 100 ತಾಲೂಕನ್ನು ಬರಪೀಡಿತ ಎಂದು ಘೋಷಿಸಲಾಗಿದೆ ಎಂದು ಹೇಳಿದರು.

ಸೂಕ್ತ ಸಂದರ್ಭದಲ್ಲಿ ಮಳೆಯಾಗದೇ ರೈತರು ಆತ್ಮಹತ್ಯೆಯಂತಹ ಆತುರದ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಈ ಬಾರಿ ಮಾನ್ಸೂನ್ ಕೂಡ ನಿರೀಕ್ಷೆಯ ಮಟ್ಟ ತಲುಪಿಲ್ಲ. ಇದರಿಂದ ಬರಗಾಲದ ಸೂಚನೆ ಕಂಡು ಬಂದಿದೆ. ರಾಜ್ಯ ಸರಕಾರ ಬರಗಾಲಕ್ಕೆ ಸೂಕ್ತ ರೀತಿಯ ಕ್ರಮ ಕೈಗೊಳ್ಳುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇಡೀ ದೇಶದಲ್ಲಿ ಬೆಂಗಳೂರು ಕೃಷಿ ವಿವಿ ಮಾದರಿಯಾಗಿದೆ. ಇದುವರೆಗೂ 184 ಹೊಸ ತಳಿಗಳನ್ನು ಉತ್ಪಾದನೆ ಮಾಡಿ ದೇಶಕ್ಕೆ ಕೊಡುಗೆ ನೀಡಿದೆ. ನಾನು ಕೂಡ ಇದೇ ವಿವಿಯಲ್ಲಿ ಕಲಿತೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ ಎಂದು ನೆನಪು ಮಾಡಿಕೊಂಡರು.

ಹಿಂದೆ ಭಾರತ ಆಹಾರ ಧಾನ್ಯಗಳನ್ನು ಬೇರೆ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುವ ಸ್ಥಿತಿ ಇತ್ತು. ಇಂದು ನಮ್ಮ ದೇಶದಿಂದಲೇ ಆಹಾರ ಪದಾರ್ಥ ರಫ್ತು ಮಾಡುವ ಮಟ್ಟಕ್ಕೆ ಬೆಳೆದು ನಿಂತಿದ್ದೇವೆ. ಆದರೆ ಸಾಧನೆ ಮಾಡುವುದು ಸಾಕಷ್ಟಿದೆ ಎಂದ ಅವರು, ಕೃಷಿ ಮಾಡುವುದು ಕಷ್ಟಕರವಾದರೂ ರೈತರು ಇನ್ನಷ್ಟು ಹೆಚ್ಚಿನ ಪ್ರಯತ್ನ ಹಾಕಿದರೆ ದೇಶದ ಆರ್ಥಿಕತೆಗೂ ಕೃಷಿಯಿಂದ ಕೊಡುಗೆ ನೀಡಲು ಸಾಧ್ಯವಾಗಲಿದೆ ಎಂದು ಪರಮೇಶ್ವರ್ ತಿಳಿಸಿದರು.

ಈ ಸಂದರ್ಭದಲ್ಲಿ ಕೃಷಿ ವಿವಿ ಕುಲಪತಿ ಡಾ.ಎಸ್.ರಾಜೇಂದ್ರ ಪ್ರಸಾದ್, ಸಂಶೋಧನಾ ನಿರ್ದೇಶಕ ಡಾ.ವೈ.ಜಿ.ಷಡಕ್ಷರಿ, ವಿಸ್ತರಣಾ ನಿರ್ದೇಶಕ ಡಾ.ಎಂ.ಎಸ್.ನಟರಾಜು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News