ಕರಾವಳಿಯನ್ನು ಬಿಜೆಪಿ ಕೋಮುವಾದದ ಪ್ರಯೋಗ ಶಾಲೆಯನ್ನಾಗಿ ಮಾಡಿಕೊಂಡಿದೆ: ಸಿದ್ದರಾಮಯ್ಯ

Update: 2018-11-16 13:51 GMT

ಬೆಂಗಳೂರು, ನ.16: ಕರ್ನಾಟಕದ ಕರಾವಳಿಯನ್ನು ಬಿಜೆಪಿ ಕೋಮುವಾದದ ಪ್ರಯೋಗ ಶಾಲೆಯನ್ನಾಗಿ ಮಾಡಿಕೊಂಡಿದೆ. ಹಾಗಾಗಿ ಬಿಜೆಪಿ ರಾಷ್ಟ್ರೀಯ ನಾಯಕರು ಆಗಾಗ ಕರಾವಳಿಗೆ ಭೇಟಿ ನೀಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವಿಟ್ ಮಾಡಿದ್ದಾರೆ.

ಸರಣಿ ಟ್ವಿಟ್‌ಗಳನ್ನು ಮಾಡುವ ಮೂಲಕ ಬಿಜೆಪಿಗೆ ತಿರುಗೇಟು ನೀಡಿರುವ ಸಿದ್ದರಾಮಯ್ಯ, ಅಮಿತ್ ಶಾ ಹಾಗೂ ನರೇಂದ್ರಮೋದಿ ಕರ್ನಾಟಕದಲ್ಲಿಯೇ ಬಂದು ಮನೆ ಮಾಡಿದರೂ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ರಾಜ್ಯದ ಜನ ಬೆಂಬಲ ನೀಡುವುದಿಲ್ಲ ಎಂದು ಹೇಳಿದ್ದಾರೆ.

ಟ್ವಿಟ್-2: ಬಿಜೆಪಿಗೆ ಅಯೋಧ್ಯೆಯ ವಿವಾದ ಜೀವಂತವಾಗಿರುವುದು ಬೇಕಿದೆಯೇ ವಿನಃ ರಾಮಮಂದಿರ ನಿರ್ಮಾಣವಲ್ಲ. ಚುನಾವಣೆ ಸಮೀಪಿಸುತ್ತಿರುವ ಈ ವೇಳೆಯಲ್ಲಿ ರಾಮಜನ್ಮಭೂಮಿ ವಿವಾದ ಮತ್ತೆ ಜೀವ ಪಡೆದಿರುವುದು ಬಿಜೆಪಿ ಜನರನ್ನು ಭಾವನಾತ್ಮಕವಾಗಿ ತಮ್ಮತ್ತ ಹಿಡಿದಿಡುವ ಪ್ರಯತ್ನದ ಒಂದು ಭಾಗವಷ್ಟೇ. ಇದು ಜನರಿಗೂ ಗೊತ್ತಿದೆ.

ಟ್ವಿಟ್-3: ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಜೆಡಿಎಸ್‌ನ ಜಿ.ಟಿ.ದೇವೇಗೌಡರಿದ್ದಾರೆ. ಸಂಪುಟದಲ್ಲಿ ಸಚಿವರಾಗಿ ಸಾ.ರಾ.ಮಹೇಶ್ ಅವರಿದ್ದಾರೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೂ ಧ್ವನಿಯ ಅಗತ್ಯವಿದೆ. ಈ ಉದ್ದೇಶಕ್ಕಾಗಿ ಮೈಸೂರು ಮಹಾನಗರ ಪಾಲಿಕೆಯ ಮೆಯರ್ ಸ್ಥಾನವನ್ನು ನಮ್ಮ ಪಕ್ಷಕ್ಕೆ ನೀಡುವಂತೆ ಕೇಳಿದ್ದೇವೆ. ಇದು ನ್ಯಾಯಯುತವಾದ ಬೇಡಿಕೆಯೂ ಹೌದು.

ಟ್ವಿಟ್-4: ನಾನು ರಾಜಕೀಯ ಜೀವನದಲ್ಲಿರುವವರೆಗೂ ಅಹಿಂದ ವರ್ಗದ ಹಿತರಕ್ಷಣೆಗೆ ಬದ್ಧನಿದ್ದೇನೆ. ಅಹಿಂದ ಒಂದು ಸಂಘಟನೆಯಷ್ಟೇ ಅಲ್ಲ, ಅದೊಂದು ಚಳವಳಿ. ಅವರ ಬೇಡಿಕೆಗಳು ಪರಿಪೂರ್ಣ ಈಡೇರುವವರೆಗೂ ಚಳವಳಿ ನಿರಂತರವಾಗಿರುತ್ತದೆ. ಅದಕ್ಕೆ ನನ್ನ ಸಂಪೂರ್ಣ ಬೆಂಬಲ ಕೂಡ ಇದೆ. ಈಗ ಕೂಡ ನಾನು ಅವರ ಧ್ವನಿಯಾಗಿ ನಿಂತಿದ್ದೇನೆ ಎಂದು ಸಿದ್ದರಾಮಯ್ಯ ಸರಣಿ ಟ್ವಿಟ್‌ಗಳನ್ನು ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News