ವಕ್ಫ್ ಆಸ್ತಿ ಮಾರಾಟ ಸಾಬೀತುಪಡಿಸಿದರೆ ಶಿಕ್ಷೆಗೆ ಸಿದ್ಧ: ಮುಹಮ್ಮದ್ ಉಬೇದುಲ್ಲಾ ಶರೀಫ್

Update: 2018-11-16 13:57 GMT

ಬೆಂಗಳೂರು, ನ.16: 205 ಎಕರೆ ವಕ್ಫ್ ಆಸ್ತಿಯನ್ನು ಮಾರಾಟ ಮಾಡಿರುವುದಾಗಿ ನನ್ನ ವಿರುದ್ಧ ಆರೋಪ ಮಾಡಿರುವವರು ಅಥವಾ ಬೇರೆ ಯಾರಾದರೂ ಸಂಬಂಧಪಟ್ಟ ದಾಖಲೆಗಳನ್ನು ಸಾರ್ವಜನಿಕರ ಮುಂದಿಟ್ಟರೆ, ಕಾನೂನು ಪ್ರಕಾರ ಶಿಕ್ಷೆ ಅನುಭವಿಸಲು ಸಿದ್ಧವಿದ್ದೇನೆ ಎಂದು ಹಝ್ರತ್ ಮಾಣಿಕ್ ಶಾ-ಸೋತೆ ಶಾ ದರ್ಗಾ ಹಾಗೂ ಹಝ್ರತ್ ಅತಾವುಲ್ಲಾ ಶಾ-ನಬೀಶಾ, ಬಡಾಮಕಾನ್ ಆಡಳಿತ ಸಮಿತಿಯ ಅಧ್ಯಕ್ಷ ಮುಹಮ್ಮದ್ ಉಬೇದುಲ್ಲಾ ಶರೀಫ್ ಸವಾಲು ಹಾಕಿದ್ದಾರೆ.

ಶುಕ್ರವಾರ ನಗರದ ಕಬ್ಬನ್‌ಪೇಟೆ ಮುಖ್ಯರಸ್ತೆಯಲ್ಲಿರುವ ಹಝ್ರತ್ ಹಮೀದ್ ಶಾ ದರ್ಗಾ ಕಾಂಪ್ಲೆಕ್ಸ್‌ನಲ್ಲಿರುವ ಹಝ್ರತ್ ಮಾಣಿಕ್ ಶಾ-ಸೋತೆ ಶಾ ದರ್ಗಾ ಆಡಳಿತ ಸಮಿತಿಯ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ನಾನು 205 ಎಕರೆ ಅಲ್ಲ, 205 ಇಂಚು ವಕ್ಫ್ ಜಾಗವನ್ನು ಮಾರಾಟ ಮಾಡಿದ್ದರೆ, ಅದಕ್ಕೆ ದಾಖಲೆಗಳನ್ನು ತಂದು ಸಾರ್ವಜನಿಕರ ಮುಂದೆ ಇಡಲಿ. ಸಾರ್ವಜನಿಕರು ಹಾಗೂ ಕಾನೂನು ನೀಡುವ ಶಿಕ್ಷೆಯನ್ನು ಅನುಭವಿಸಲು ಸಿದ್ಧವಿದ್ದೇನೆ. ನನ್ನ ಜೀವಿತಾವಧಿಯಲ್ಲಿ ವಕ್ಫ್ ಆಸ್ತಿಗಳ ರಕ್ಷಣೆಗೆ ಹೋರಾಟ ಮಾಡಿದ್ದೇನೆಯೇ ಹೊರತು, ವಕ್ಫ್ ಆಸ್ತಿಗಳನ್ನು ಕಬಳಿಸುವ ಪ್ರಯತ್ನ ಎಂದಿಗೂ ಮಾಡಿಲ್ಲ ಎಂದು ಅವರು ಹೇಳಿದರು.

ಎರಡು ಖಾಸಗಿ ಸುದ್ದಿವಾಹಿನಿಗಳು ಹಾಗೂ ಒಂದು ಆಂಗ್ಲ ದಿನಪತ್ರಿಕೆಯಲ್ಲಿ ನನ್ನ ವಿರುದ್ಧ ಈ ಸಂಬಂಧ ಪ್ರಕಟವಾಗಿರುವ ಸುದ್ದಿ ನೋಡಿ ಮನಸ್ಸಿಗೆ ತುಂಬಾ ನೋವಾಗಿದೆ. ಈ ಹಿನ್ನೆಲೆಯಲ್ಲಿ ಆ ಪತ್ರಿಕೆಯ ಪ್ರಕಾಶಕ, ಸಂಪಾದಕ, ವರದಿಗಾರ ಹಾಗೂ ಸುಳ್ಳು ಮಾಹಿತಿ ನೀಡಿರುವ ಅಲ್ ಅಮೀನ್ ಎಜುಕೇಷನಲ್ ಸೊಸೈಟಿಯ ಸದಸ್ಯ ಎಂ.ಝೆಡ್.ಅಲಿ ಎಂಬವರಿಗೆ ವಕೀಲರ ಮೂಲಕ ನೋಟಿಸ್ ಕೊಟ್ಟಿದ್ದೇನೆ ಎಂದು ಅವರು ಹೇಳಿದರು.

ಆರೋಪಗಳು: ಏಕಕಾಲಕ್ಕೆ ಎರಡು ವಕ್ಫ್ ಸಂಸ್ಥೆಗಳ ಅಧ್ಯಕ್ಷನಾಗಿ ನಾನು ಮುಂದುವರೆದಿರುವುದು ಕಾನೂನು ಬಾಹಿರ ಎಂದು ಆರೋಪಿಸಲಾಗಿದೆ. ಆದರೆ, ವಕ್ಫ್ ಕಾಯ್ದೆ 1995ರಲ್ಲಿ ಎಲ್ಲಿಯೂ ಒಬ್ಬ ವ್ಯಕ್ತಿ ಏಕಕಾಲಕ್ಕೆ ಒಂದಕ್ಕಿಂತ ಹೆಚ್ಚಿನ ವಕ್ಫ್ ಸಂಸ್ಥೆಗಳ ಅಧ್ಯಕ್ಷ ಅಥವಾ ಸದಸ್ಯನಾಗಿರಬಾರದು ಎಂದು ಉಲ್ಲೇಖಿಸಿಲ್ಲ ಎಂದು ಉಬೇದುಲ್ಲಾ ಶರೀಫ್ ಹೇಳಿದರು.

ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಅವರ ಸಂಪುಟದ ಸಚಿವರೊಬ್ಬರು ನನ್ನ, ವಕ್ಫ್‌ ಬೋರ್ಡ್ ಮಾಜಿ ಅಧ್ಯಕ್ಷ ರಿಯಾಝ್ ಖಾನ್ ಹಾಗೂ ಸಿಇಓ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಿಸಿದ್ದರು. ಅಲ್ಲದೆ, ಹಝ್ರತ್ ಮಾಣಿಕ್ ಶಾ-ಸೋತೆ ಶಾ ದರ್ಗಾ ಸಮಿತಿಯ ಅವಧಿಯನ್ನು ವಿಸ್ತರಣೆ ಮಾಡದಂತೆ ಉಪ ಕಾರ್ಯದರ್ಶಿ ಮೂಲಕ ವಕ್ಫ್ ಬೋರ್ಡ್‌ಗೆ ನಿರ್ದೇಶನ ಕೊಡಿಸಿದ್ದರು ಎಂದು ಅವರು ಹೇಳಿದರು. ಆದರೆ, ನನ್ನ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾದ ಬಳಿಕ ವಕ್ಫ್ ಆಸ್ತಿಗಳನ್ನು ಉಳಿಸಲು ಅನೇಕ ಪ್ರಕರಣಗಳನ್ನು ದಾಖಲು ಮಾಡಿದ್ದಾರೆ. ಕೇವಲ ಒಂದು ಎಫ್‌ಐಆರ್ ಆಧಾರದ ಮೇಲೆ ಸಮಿತಿಯಿಂದ ಅವರನ್ನು ತೆಗೆಯಲು ಸಾಧ್ಯವಿಲ್ಲವೆಂದು ವಕ್ಫ್‌ಬೋರ್ಡ್ ಸರಕಾರಕ್ಕೆ ತಿಳಿಸಿತ್ತು ಎಂದು ಅವರು ಹೇಳಿದರು.

ಮಾಣಿಕ್ ಶಾ ದರ್ಗಾಗೆ ಎರಡು ಬಾರಿ ಆಡಳಿತಾಧಿಕಾರಿಯನ್ನು ನೇಮಕ ಮಾಡಿದ್ದರೂ ಈವರೆಗೆ ಯಾರೂ ಅಧಿಕಾರ ಸ್ವೀಕರಿಸಲು ಮುಂದೆ ಬಂದಿಲ್ಲ. ನಾವು ಅಧಿಕಾರ ಹಸ್ತಾಂತರ ಮಾಡಲು ಸಿದ್ಧವಿದ್ದೇವೆ ಎಂದು ಉಬೇದುಲ್ಲಾ ಶರೀಫ್ ತಿಳಿಸಿದರು.

ವಕ್ಫ್ ಆಸ್ತಿಗಳನ್ನು ಮಾರಾಟ ಮಾಡಲು ಸಾಧ್ಯವಿಲ್ಲ. ವಕ್ಫ್ ಆಸ್ತಿಗಳನ್ನು ಯಾವುದಾದರೂ ಸಂಸ್ಥೆಗಳಿಗೆ ಮಾರಾಟ ಮಾಡಬೇಕಾದರೆ ರಾಜ್ಯ ಸರಕಾರ ಹಾಗೂ ವಕ್ಫ್ ಬೋರ್ಡ್‌ನ ಅನುಮತಿಯನ್ನು ಪಡೆಯಬೇಕಾಗುತ್ತದೆ. ಬೆಳ್ಳಳ್ಳಿಯಲ್ಲಿ 602 ಎಕರೆ 29 ಗುಂಟೆ ಜಮೀನು ಹಾಗೂ ಭೂಪಸಂದ್ರದಲ್ಲಿ 300 ಎಕರೆ ಜಮೀನು ಟಿಪ್ಪುಸುಲ್ತಾನ್, ಮಾಣಿಕ್ ಶಾ ದರ್ಗಾಗೆ ಇನಾಮ್ ಅಡಿಯಲ್ಲಿ ನೀಡಿದರು ಎಂದು ಅವರು ಹೇಳಿದರು.

1954-55 ರಲ್ಲಿ ಇನಾಮತಿ ರದ್ದತಿ ಕಾಯ್ದೆ ಬಂದ ನಂತರ, ಬೆಳ್ಳಳ್ಳಿ ಹಾಗೂ ಭೂಪಸಂದ್ರದಲ್ಲಿ 900 ಎಕರೆಗಿಂತ ಹೆಚ್ಚಿನ ಭೂಮಿಯನ್ನು ಸರಕಾರವು 1960ರಲ್ಲಿ ತನ್ನ ಸುಪರ್ದಿಗೆ ತೆಗೆದುಕೊಂಡಿತ್ತು. ನಾನು ಅಧ್ಯಕ್ಷನಾಗುವ ಮುನ್ನ ಯಾರೊಬ್ಬರೂ ಸರಕಾರದ ಅಧಿಸೂಚನೆಯನ್ನು ಪ್ರಶ್ನಿಸಿರಲಿಲ್ಲ ಎಂದು ಉಬೇದುಲ್ಲಾ ಶರೀಫ್ ತಿಳಿಸಿದರು.

ಬೆಳ್ಳಳ್ಳಿಯ 602 ಎಕರೆ 29 ಗುಂಟೆ ಜಮೀನು ವಕ್ಫ್ ಆಸ್ತಿಯಾಗಿದ್ದು, ಅದು ನಮಗೆ ಸೇರಬೇಕೆಂಬುದು ನಾವು ಪ್ರಕರಣ ದಾಖಲು ಮಾಡಿದ್ದೇವೆ. ಇಂತಹದರಲ್ಲಿ ನಾನು ವಕ್ಫ್ ಜಮೀನು ಮಾರಾಟ ಮಾಡಿದ್ದೇನೆ ಎಂದು ಮಾಡಿರುವ ಆರೋಪವು ಆಧಾರರಹಿತವಾದದ್ದು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News