ವಿದ್ಯುತ್ ಚಾಲಿತ ವಾಹನ ಖರೀದಿದಾರರಿಗೆ ರಿಯಾಯಿತಿ: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2018-11-16 14:06 GMT

ಬೆಂಗಳೂರು, ನ. 16: ‘ಪೆಟ್ರೋಲ್-ಡೀಸೆಲ್ ಉಳಿತಾಯ, ಪರಿಸರ ಮಾಲಿನ್ಯ ತಡೆಗಟ್ಟುವ ದೃಷ್ಟಿಯಿಂದ ವಿದ್ಯುತ್ ಚಾಲಿತ ವಾಹನಗಳನ್ನು ಖರೀದಿಸುವವರಿಗೆ ರಿಯಾಯಿತಿ ನೀಡಲಾಗುವುದು’ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಭರವಸೆ ನೀಡಿದ್ದಾರೆ.

ಶುಕ್ರವಾರ ವಿಧಾನಸೌಧದ ಆವರಣದಲ್ಲಿ ಬೆಸ್ಕಾಂ ವತಿಯಿಂದ ಸ್ಥಾಪಿಸಲಾಗಿರುವ ವಿದ್ಯುತ್ ಚಾರ್ಜಿಂಗ್ ಘಟಕಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯುತ್ ಚಾಲಿತ ವಾಹನಗಳನ್ನು ಖರೀದಿಸುವವರಿಗೆ ಕೆಲ ರಿಯಾಯಿತಿ ನೀಡಲಾಗುವುದು. ಜತೆಗೆ ಚಾರ್ಜಿಂಗ್ ಘಟಕಗಳನ್ನು ಆರಂಭಿಸುವ ಖಾಸಗಿಯವರಿಗೂ ಪ್ರೋತ್ಸಾಹ ನೀಡಲಾಗುವುದು ಎಂದರು.

ವಿದ್ಯುತ್ ಚಾಲಿತ ವಾಹನ ಬಳಕೆ: ವೆಚ್ಚ ಕಡಿಮೆ ಮಾಡುವ ನಿಟ್ಟಿನಲ್ಲಿ ಸರಕಾರಿ ವಾಹನಗಳಲ್ಲಿ ಶೇ.50ರಷ್ಟು ವಿದ್ಯುತ್ ಚಾಲಿತ ವಾಹನಗಳ ಬಳಕೆಗೆ ಸರಕಾರ ನಿರ್ಧರಿಸಿದೆ ಎಂದ ಅವರು, ಬಾಡಿಗೆ ಆಧಾರದ ಮೇಲೆ ವಾಹನಗಳನ್ನು ಪಡೆಯುವ ವೇಳೆ ವಿದ್ಯುತ್ ಚಾಲಿತ ವಾಹನಗಳಿಗೆ ಆದ್ಯತೆ ನೀಡಲಾಗುವುದು ಎಂದರು.

ಬಾಡಿಗೆಗೆ ಪಡೆಯುವ ವೇಳೆ ಶೇ.50ರಷ್ಟು ವಿದ್ಯುತ್ ಚಾಲಿತ ವಾಹನಗಳನ್ನು ಪಡೆಯಲು ಕಡ್ಡಾಯಗೊಳಿಸಲಾಗುವುದು. ಜತೆಗೆ ಹೊಸ ವಾಹನಗಳ ಖರೀದಿ ವೇಳೆ ಸಾಧ್ಯವಾದಷ್ಟು ವಿದ್ಯುತ್ ಚಾಲಿತ ವಾಹನಗಳಿಗೆ ಆದ್ಯತೆ ನೀಡಬೇಕೆಂದು ತೀರ್ಮಾನಿಸಲಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.

ಬೆಸ್ಕಾಂ ವತಿಯಿಂದ ಈಗಾಗಲೇ ವಿದ್ಯುತ್ ಚಾಲಿತ ವಾಹನಗಳ ಬಳಕೆದಾರರಿಗೆ ಆರಂಭಿಕವಾಗಿ ಉಚಿತವಾಗಿ ಚಾರ್ಜಿಂಗ್ ಮಾಡಲಾಗುತ್ತಿದ್ದು, ಸರಕಾರ ವಿದ್ಯುತ್ ಚಾಲಿತ ವಾಹನಗಳ ಬಳಕೆಗೆ ಪ್ರೋತ್ಸಾಹಿಸಲು ಕ್ರಮ ವಹಿಸಿದೆ ಎಂದು ಅವರು ತಿಳಿಸಿದರು.

ಯುನಿಟ್‌ಗೆ 4.50ರೂ.: ಬೆಂಗಳೂರು ನಗರದಲ್ಲಿ ವಿದ್ಯುತ್ ಚಾಲಿತ ವಾಹನ ಬಳಕೆ ಹೆಚ್ಚಿಸಲು ನಗರದ ವಿವಿಧೆಡೆ 11 ಚಾರ್ಜಿಂಗ್ ಘಟಕಗಳನ್ನು ಬೆಸ್ಕಾಂ ವತಿಯಿಂದ ಆರಂಭಿಸಲಾಗುವುದು, ಚಾರ್ಜಿಂಗ್ ಕೇಂದ್ರಗಳಲ್ಲಿ ಪ್ರತಿ ಯೂನಿಟ್‌ಗೆ 4.85 ರೂ.ದರ ನಿಗದಿಪಡಿಸಲಾಗಿದೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಶಿಖಾ ತಿಳಿಸಿದರು.

ಈಗಾಗಲೇ ಮೂರು ಚಾರ್ಜಿಂಗ್ ಪಾಯಿಂಟ್‌ಗಳನ್ನು ಬೆಸ್ಕಾಂ ಆರಂಭಿಸಿದ್ದು, ಇನ್ನೂ 11 ಚಾರ್ಜಿಂಗ್ ಪಾಯಿಂಟ್‌ಗಳನ್ನು ಆರಂಭಿಸಲು ಟೆಂಡರ್ ಕರೆದಿದೆ ಎಂದ ಅವರು, ಆರಂಭದಲ್ಲಿ ಉಚಿತವಾಗಿ ಚಾರ್ಜಿಂಗ್ ಮಾಡಲಾಗುತ್ತಿದೆ ಎಂದು ತಿಳಿಸಿದರು.

ವಿದ್ಯುತ್ ಚಾಲಿತ ವಾಹನಗಳ ಬಳಕೆಯಿಂದ ಪ್ರತಿ ಕಿ.ಮೀ.ಗೆ 1ರೂ. ವೆಚ್ಚವಾಗುತ್ತದೆ. ಡೀಸೆಲ್, ಪೆಟ್ರೋಲ್ ವಾಹನಗಳಿಗೆ ಪ್ರತಿ ಕಿ.ಮೀ. 5ರೂ.ವೆಚ್ಚವಾಗಲಿದೆ. ಹೀಗಾಗಿ ಸರಕಾರ ಪರಿಸರ ಸ್ನೇಹಿ ವಿದ್ಯುತ್ ಚಾಲಿತ ವಾಹನಗಳಿಗೆ ಪ್ರೋತ್ಸಾಹ ನೀಡಲು ಹೊಸ ನೀತಿ ಜಾರಿಗೆ ತಂದಿದೆ ಎಂದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ರೋಷನ್ ಬೇಗ್ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News