ಆ್ಯಂಬಿಡೆಂಟ್ ವಂಚನೆ ಪ್ರಕರಣ: ಪೊಲೀಸರಿಂದ ಸ್ಪಷ್ಟನೆ ಕೇಳಿದ ಇಡಿ

Update: 2018-11-16 14:50 GMT

ಬೆಂಗಳೂರು, ನ.16: ಆ್ಯಂಬಿಡೆಂಟ್ ಬಹುಕೋಟಿ ವಂಚನೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ(ಇಡಿ) ಹೆಸರು ಪ್ರಸ್ತಾಪವಾಗಿರುವ ಸಂಬಂಧ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಹಾಗೂ ಸಿಸಿಬಿ ಪೊಲೀಸರು ಸ್ಪಷ್ಟನೆ ನೀಡುವಂತೆ ಕೇಳಿದೆ.

ಆ್ಯಂಬಿಡೆಂಟ್ ಪ್ರಕರಣ ಮುಚ್ಚಿಹಾಕಲು ಮಾಜಿ ಸಚಿವ ಜನಾರ್ದನ ರೆಡ್ಡಿ ಕಂಪೆನಿ ಮಾಲಕ ಎಸ್.ಎ.ಫರೀದ್ ಅವರಿಂದ 57 ಕೆ.ಜಿ ಚಿನ್ನವನ್ನು ಕಿಕ್‌ಬ್ಯಾಂಕ್ ಪಡೆದಿದ್ದಾರೆ ಎಂದು ಸಿಸಿಬಿ ಆರೋಪ ಮಾಡಿತ್ತು. ಆದರೆ, ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಹೆಸರನ್ನು ದುರುಪಯೋಗ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಈ ಕುರಿತು ಪತ್ರ ಬರೆದಿರುವ ಇಡಿ ಬೆಂಗಳೂರು ವಲಯದ ಜಂಟಿ ನಿರ್ದೇಶಕ ರಮಣಗುಪ್ತ, ನಿಯಮಮೀರಿ ವ್ಯವಹಾರ ನಡೆಸುತ್ತಿದ್ದ ಆ್ಯಂಬಿಡೆಂಟ್ ಸಂಸ್ಥೆಯ ಮಾಲಕ ಫರೀದ್ ಮತ್ತು ಸೈಯದ್ ಅಫಾಕ್ ಅವರಿಂದ ಈ ಹಿಂದೆಯೇ 1.85 ಕೋಟಿ ದಂಡ ಪಾವತಿಸಿ ನಿರ್ದೇಶನಾಲಯದಿಂದ ಪ್ರಕರಣ ಇತ್ಯರ್ಥ ಮಾಡಿಕೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಬಿ ಮತ್ತು ಆರ್.ಬಿ.ಐ ಗಳಿಂದ ತನಿಖೆಯಾಗಿದೆ. ಈ ಬಗ್ಗೆ ಕಾನೂನಾತ್ಮಕ ಕ್ರಮಕ್ಕೂ ಮುಂದಾಗಿದೆ ಎಂದು ತಿಳಿಸಿದ್ದಾರೆ. ಆದರೆ ಈಗ ವಿನಾಕಾರಣ ಅಧಿಕಾರಿಗಳು ಜಾರಿ ನಿರ್ದೆಶನಾಲಯದ ಹೆಸರು ಪ್ರಸ್ತಾಪ ಮಾಡಲಾಗುತ್ತಿದೆ. ಈ ರೀತಿ ಸುಳ್ಳು ಆರೋಪ ಮಾಡುವ ಮುನ್ನ ಇ.ಡಿ ಇಲಾಖೆ ಅಧಿಕಾರಿಗಳನ್ನು ಒಮ್ಮೆ ಸಂಪರ್ಕಿಸಬೇಕು ಎಂಬುದನ್ನು ನಿರ್ಲಕ್ಷಿಸಲಾಗಿದೆ. ಹಣದ ವ್ಯವಹಾರದಲ್ಲಿ ಇ.ಡಿ ಹೆಸರು ತಂದರೆ ಸಾರ್ವಜನಿಕ ವಲಯದಲ್ಲಿ ಸಂಸ್ಥೆಯ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುವಂತಾಗುತ್ತದೆ ಎಂದು ಹೇಳಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News