ಉದಯಗೌಡರಿಂದ ಜಾಮೀನಿಗೆ ಅರ್ಜಿ ಸಲ್ಲಿಕೆ: ಆಕ್ಷೇಪಣೆ ಸಲ್ಲಿಸಲು ಸಿಸಿಬಿಗೆ ಹೈಕೋರ್ಟ್ ಸೂಚನೆ

Update: 2018-11-16 14:54 GMT

ಬೆಂಗಳೂರು, ನ.16: ಆಪರೇಷನ್ ಕಮಲ ಪ್ರಕರಣದ ಕಿಂಗ್‌ಪಿನ್ ಎಂಬ ಆರೋಪ ಹೊತ್ತಿರುವ ಉದಯಗೌಡ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ಸಿಸಿಬಿಗೆ ಆಕ್ಷೇಪಣೆ ಸಲ್ಲಿಸಲು ಸೂಚಿಸಿದೆ. ನಿರೀಕ್ಷಣಾ ಜಾಮೀನು ಕೋರಿ ಉದಯ್‌ಗೌಡ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ, ನಿರೀಕ್ಷಣಾ ಜಾಮೀನಿಗೆ ಆಕ್ಷೇಪಣೆ ಸಲ್ಲಿಸಲು ಸಿಸಿಬಿಗೆ ಸೂಚನೆ ನೀಡಿತು.

ಸರಕಾರದ ಪರ ವಾದಿಸಿದ ಎಸ್‌ಪಿಪಿ ಅವರು, ಉದಯಗೌಡ ಅವರು ಇಲ್ಲಿಯವರೆಗೆ ಎಲ್ಲಿ ಇದ್ದಾರೆಯೆಂಬುದು ಪತ್ತೆಯಾಗಿಲ್ಲ. ಆದರೂ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ಸಿಸಿಬಿಗೆ ಆಕ್ಷೇಪಣೆ ಸಲ್ಲಿಸಲು ಸೂಚನೆ ನೀಡಿದರು.  

ಆಪರೇಷನ್ ಕಮಲ ಪ್ರಕರಣದ ಕಿಂಗ್‌ಪಿನ್ ಎಂಬ ಆರೋಪ ಹೊತ್ತಿರುವ ಉದಯ್‌ಗೌಡ್ ಬಂಧನಕ್ಕೆ ಕಬ್ಬನ್‌ಪಾರ್ಕ್ ಠಾಣೆ ಪೊಲೀಸರು ಲುಕ್‌ಔಟ್ ನೋಟಿಸ್ ಜಾರಿಗೊಳಿಸಿದ್ದರು. ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಬಿಜೆಪಿಗೆ ಸೆಳೆಯಲು ಹಣದ ಆಮಿಷ ಒಡ್ಡುವ ಚಟುವಟಿಕೆಯಲ್ಲಿ ಉದಯ್‌ಗೌಡ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಕಬ್ಬನ್‌ಪಾರ್ಕ್ ಠಾಣೆಯಲ್ಲಿ ದೂರು ನೀಡಲಾಗಿತ್ತು. ಅಲ್ಲದೆ, ಕಮಲ ಪ್ರಕರಣದ ಕಿಂಗ್‌ಪಿನ್ ಎಂಬ ಆರೋಪ ಉದಯ ಗೌಡ ಅವರ ಮೇಲೆ ಬರುತ್ತಿದ್ದಂತೆಯೇ ಉದಯ್‌ಗೌಡಗೆ ಸೇರಿದ ಕ್ಲಬ್ ಒಂದರ ಮೇಲೆ ಕೇಂದ್ರ ಅಪರಾಧ ವಿಭಾಗದ ಪೊಲೀಸರು ದಾಳಿ ನಡೆಸಿ, ಈ ಕ್ಲಬ್ ಅನ್ನು ಕಾನೂನು ಬಾಹಿರವಾಗಿ ನಡೆಸಲಾಗುತ್ತಿದೆ ಎಂದು ಕ್ಲಬ್‌ಗೆ ಬೀಗ್ ಹಾಕಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News