ಮಹಾದಾಯಿ ನ್ಯಾಯಾಧೀಕರಣದ ತೀರ್ಪು: ಸ್ಪಷ್ಟೀಕರಣ ಅರ್ಜಿಯಲ್ಲಿ ಸೂಕ್ತ ಮಾರ್ಪಾಡಿಗೆ ಎಚ್.ಕೆ.ಪಾಟೀಲ್ ಮನವಿ

Update: 2018-11-16 15:07 GMT

ಬೆಂಗಳೂರು, ನ.16: ಮಹಾದಾಯಿ ಜಲ ವಿವಾದ ನ್ಯಾಯಾಧೀಕರಣ ಪ್ರಸಕ್ತ ಸಾಲಿನ ಆಗಸ್ಟ್ 14ರಂದು ತನ್ನ ಅಂತಿಮ ಐ-ತೀರ್ಪಿನ ವರದಿಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಿರುವ ಹಿನ್ನೆಲೆಯಲ್ಲಿ ಆ ವರದಿಯ ಕುರಿತು 10 ಸ್ಪಷ್ಟೀಕರಣಗಳನ್ನು ಕೋರಿ ಅಂತರರಾಜ್ಯ ಜಲ ವಿವಾದ ಕಾಯ್ದೆ ಕಲಂ5(3)ರನ್ವಯ ನ್ಯಾಯಾಧೀಕರಣಕ್ಕೆ ಸಲ್ಲಿಸಲಾಗಿರುವ ಸ್ಪಷ್ಟೀಕರಣ ಅರ್ಜಿಯ ಕುರಿತು ಮಾಜಿ ಸಚಿವ ಎಚ್.ಕೆ.ಪಾಟೀಲ್, ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ಗೆ ಪತ್ರ ಬರೆದಿದ್ದಾರೆ.

ಮಹಾದಾಯಿ ನ್ಯಾಯಾಧೀಕರಣದ ತೀರ್ಪು ರಾಜ್ಯಕ್ಕೆ ನಿರೀಕ್ಷಿತವಾದ ಯಾವುದೇ ಸಮಾಧಾನ ತಂದಿಲ್ಲ. ಕಳಸಾ ಮತ್ತು ಬಂಡೂರಿ ನಾಲಾ ಯೋಜನೆಗಳು ಮಹಾದಾಯಿ ನದಿ ತಿರುವಿನ ಅತ್ಯಂತ ಪ್ರಮುಖ ಯೋಜನೆಗಳು. ಈ ಯೋಜನೆಗಳ ಮೂಲಕ 7.56 ಟಿಎಂಸಿ ಅಡಿ ನೀರನ್ನು ತಿರುಗಿಸಬೇಕೆಂಬ ಮಹತ್ವಾಕಾಂಕ್ಷಿ ಯೋಜನೆ ಕಲ್ಪಿತವಾಗಿ ಅನುಷ್ಠಾನ ವೇಗ ಪಡೆದುಕೊಂಡಿದ್ದು 1999ರ ಡಿಸೆಂಬರ್ ತಿಂಗಳಿನಿಂದ ಎಂದು ಅವರು ಹೇಳಿದ್ದಾರೆ.

ನ್ಯಾಯಾಧೀಕರಣದ ಮುಂದೆ ರಾಜ್ಯ ಸರಕಾರ ತನ್ನ ಸ್ಪಷ್ಟೀಕರಣ ಅರ್ಜಿಯನ್ನು ಸಲ್ಲಿಸಿದೆ. ನ್ಯಾಯಾಧೀಕರಣವು ಸತ್ಯವನ್ನು ಒಪ್ಪಿಕೊಂಡ ಅಂಶಗಳನ್ನು ಪರಿಗಣಿಸದೆ ಹಲವಾರು ರೀತಿಯ ಕಪೋಲಕಲ್ಪಿತ ವಿಚಾರಗಳನ್ನು ಆಧರಿಸಿ ವರದಿಯನ್ನು ನೀಡಿ ರಾಜ್ಯಕ್ಕೆ ದಕ್ಕಬೇಕಾದ ನ್ಯಾಯಯುತ ಪಾಲಿನಲ್ಲಿ ತೀವ್ರ ಕೊರತೆ ಮಾಡಿದೆ ಎಂದು ಎಚ್.ಕೆ.ಪಾಟೀಲ್ ದೂರಿದ್ದಾರೆ.

ಮಹಾದಾಯಿ ಕಣಿವೆಯಲ್ಲಿ ಲಭ್ಯವಿರುವ 200 ಟಿಎಂಸಿ ಅಡಿಯಷ್ಟು ನೀರಿನಲ್ಲಿ ಕೇವಲ 33 ಟಿಎಂಸಿ ನೀರನ್ನು ಮಾತ್ರ ಹಂಚಿಕೆ ಮಾಡಿ 167 ಟಿಎಂಸಿ ಹಂಚಿಕೆ ಮಾಡದೆ, ಯಾವುದೇ ಸಮರ್ಪಕ ವಿವರಣೆಗಳಿಲ್ಲದೆ ನೀರು ವ್ಯರ್ಥವಾಗಿ ಸಮುದ್ರ ಸೇರಲು ಅವಕಾಶ ಮಾಡಿಕೊಟ್ಟಿರುವುದು ರಾಜ್ಯಕ್ಕೆ ಮಾಡಿರುವ ಮಹಾ ಅನ್ಯಾಯ ಎಂದು ಅವರು ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ನದಿಯ ನೀರನ್ನು ಕರ್ನಾಟಕ ಸದ್ಭಳಕೆ ಮಾಡಿಕೊಳ್ಳುವುದರಿಂದ ಯಾವುದೇ ರೀತಿಯಿಂದಲೂ ಭಾದಿತವಾಗದಿದ್ದರೂ ಗೋವಾ ರಾಜ್ಯವು ಕೇವಲ ಪರಿಸರದ ಮೇಲಿನ ಇಲ್ಲದ ಪರಿಣಾಮಗಳ ಹಿನ್ನೆಲೆಯಲ್ಲಿ ಮಂಡಿಸಿರುವ ವಾದಗಳನ್ನು ಮಾತ್ರ ಗಣನೆಗೆ ತೆಗೆದುಕೊಂಡು ರಾಷ್ಟ್ರಕ್ಕೆ ಮಾರಕವಾಗುವ ತೀರ್ಮಾನಕ್ಕೆ ಬಂದಿರುವುದು ಐತಿಹಾಸಿಕ ಅನ್ಯಾಯ ಎಂದು ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.

ನ್ಯಾಯಾಧೀಕರಣವು ತನ್ನ ಅಂತಿಮ ಐ-ತೀರ್ಪನ್ನು ಪ್ರಕಟಿಸುವಾಗ ಜಲನೀತಿ ಮತ್ತು ನಿಯಮಾವಳಿಗಳನ್ನು ನಿರ್ಲಕ್ಷಿಸಿ ನದಿ ಕಣಿವೆ ರಾಜ್ಯಗಳು ಆಯಾ ಕಣಿವೆ ಪ್ರದೇಶಕ್ಕೆ ನೀಡಬಹುದಾದ ಜಲಸಂಪನ್ಮೂಲದ ಕೊಡುಗೆಯನ್ನು ಸಂಪೂರ್ಣವಾಗಿ ಗಣನೆಗೆ ತೆಗೆದುಕೊಳ್ಳಲಿಲ್ಲ ಎಂದು ಅವರು ಹೇಳಿದ್ದಾರೆ.

ಕಳಸಾ ಮತ್ತು ಬಂಡೂರಿ ಎರಡೂ ತಿರುವು ಯೋಜನೆಗಳಿಗೆ ಅರಣ್ಯ ಭೂಮಿ ಹಸ್ತಾಂತರ ಕುರಿತು 2003ರ ಆಗಸ್ಟ್ 28ರಂದು ನಡೆದ ಕೇಂದ್ರ ಸರಕಾರದ ಅರಣ್ಯ ಮತ್ತು ಪರಿಸರ ಇಲಾಖೆಯ ಅರಣ್ಯ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಈ ಯೋಜನೆಗಳ ಕಾರ್ಯಾರಂಭಕ್ಕೆ ಪರಿಸರ ಮತ್ತು ಅರಣ್ಯ ಇಲಾಖೆಯು ಅನುಮೋದನೆ ನೀಡಿದೆ. ಆದರೆ, ಈಗ ಮತ್ತೊಮ್ಮೆ ಆ ಯೋಜನೆಗಳಿಗೆ ಅರಣ್ಯ ಮತ್ತು ಪರಿಸರ ಇಲಾಖೆಯ ಮಂಜೂರಾತಿ ಪಡೆಯಬೇಕೆಂಬ ದಾಟಿಯಲ್ಲಿ ಬಂದಿರುವ ತೀರ್ಪಿನ ಅಂಶಗಳು ನಮ್ಮ ಪಾಲಿಗೆ ಅನ್ಯಾಯವಾಗುತ್ತದೆ ಎಂದು ಎಚ್.ಕೆ.ಪಾಟೀಲ್ ಹೇಳಿದ್ದಾರೆ.

ಮಹಾದಾಯಿ ಕಣಿವೆಯಲ್ಲಿ ಲಭ್ಯವಿರುವ ಜಲಸಂಪನ್ಮೂಲದ ಸದ್ಭಳಕೆ ಸರಕಾರದ ಆದ್ಯತೆಯಾಗಬೇಕು. ಅಂತರ್ ಕಣಿವೆ ವರ್ಗಾವಣೆಯನ್ನು ಪೊಲ್ಲಾವರಂ ಯೋಜನೆ ಜಾರಿಯ ಮೂಲಕ ಕೃಷ್ಣ ಮತ್ತು ಗೋದಾವರಿ ಕಣಿವೆ ಪ್ರದೇಶದಲ್ಲಿ ಅನುಮತಿ ನೀಡಲಾಗಿದೆ. ಇದೇ ರೀತಿ, ಅಂತರ್ ಕಣಿವೆ ವರ್ಗಾವಣೆ ಮಾಡುವುದಕ್ಕೆ ಯಾವುದೇ ಅಡ್ಡಿ ಆತಂಕ ಪ್ರಸ್ತುತ ಕಾನೂನುಗಳ ಮೂಲಕ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ನ್ಯಾಯಾಧೀಕರಣವು ತನ್ನ ಸ್ಪಷ್ಟೀಕರಣ ಆದೇಶದಲ್ಲಿ ಇದನ್ನೆ ಸ್ಪಷ್ಟವಾಗಿ ಹೇಳುವಂತೆ ನಮ್ಮ ಸ್ಪಷ್ಟೀಕರಣ ಅರ್ಜಿ ಅಗತ್ಯ ಮಾರ್ಪಾಡಾಗಬೇಕು. ಅಲ್ಲದೆ, ಗಂಭೀರ ಕಾನೂನಾತ್ಮಕ ಹೋರಾಟ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಎಚ್.ಕೆ.ಪಾಟೀಲ್ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News